
ವಿಜಯಪುರ: ಜಲಜೀವನ ಮಿಷನ್ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಸಂದರ್ಭದಲ್ಲಿ ಅಗೆಯಲಾದ ರಸ್ತೆಯನ್ನು ಕಾಮಗಾರಿ ಪೂರ್ಣಗೊಂಡ ನಂತರ ಹಾಗೆ ಬಿಡದೇ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು. ಕಾಮಗಾರಿಯ ಗುಣಮಟ್ಟ ತೃಪ್ತಿಯಾದ ನಂತರವೇ ಟೆಂಡರ್‌ದಾರರಿಗೆ ಹಣ ಪಾವತಿಸಲು ಕ್ರಮ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸಂಸದ ರಮೇಶ ಜಿಗಜಿಣಗಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ 3ನೇ ತ್ರೈಮಾಸಿಕದ ಡಿಸೆಂಬರ್ ಅಂತ್ಯದವರೆಗಿನ ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಲಧಾರೆ ಯೋಜನೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು, ಪ್ರಧಾನ ಮಂತ್ರಿ ಕೃಷಿ ಸಿಂಚಾಯ ಯೋಜನೆಯಡಿಯ ಜಲಾನಯನ ಅಭಿವೃದ್ಧಿ ಘಟಕ 2.0ದಡಿ ಕೈಗೊಂಡಿರುವ ಇಂಡಿ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲ್ಲೂಕಿನ ಜಲಾನಯನ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಚಟುವಟಿಕೆಗಳು, ನೀರು ಸಂರಕ್ಷಣಾ ರಚನೆಗಳು, ಖುಷ್ಕಿ ತೋಟಗಾರಿಕಾ, ಅರಣ್ಯೀಕರಣ, ದುರ್ಬಲ ವರ್ಗದವರಿಗೆ ಜೀವನೋಪಾಯ ಚಟುವಟಿಕೆಗಳಡಿ ಶೇ 94 ಪ್ರಗತಿ ಸಾಧಿಸಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಆರ್ಥಿಕ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣ ಶೇ 92ರಷ್ಟು ಪ್ರಗತಿ ಸಾಧಿಸಲಾಗಿದ್ದು, ಸ್ವಚ್ಛ ಹಾಗೂ ನೈರ್ಮಲ್ಯ ಕುರಿತ ಜಾಗೃತಿ ಅಭಿಯಾನ ಕೈಗೊಳ್ಳಬೇಕು ಎಂದರು.
ಸಮಗ್ರ ಶಿಕ್ಷಣ ಅಭಿಯಾನದಡಿ ನಿಗದಿತ ಗುರಿ ಸಾಧಿಸಿ, ಅನುದಾನ ಲ್ಯಾಪ್ಸ್ ಆಗದಂತೆ ಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಸಣ್ಣ, ಅತಿ ಸಣ್ಣ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಪ್ರಧಾನ ಮಂತ್ರಿ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಲು, ಈ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲತೆ ಹೊಂದುವಂತೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಪಿಎಂ ಕುಸುಮ್ –ಬಿ ಯೋಜನೆಯಲ್ಲಿ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸೋಲಾರ್ ಅಳವಡಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ 10 ಎಚ್.ಪಿ ಸಾಮರ್ಥ್ಯದವರೆಗೆ ಸ್ವತಂತ್ರವಾಗಿ ಸೌರ ಚಾಲಿತ ಮೋಟಾರ್‌ಗಳನ್ನು ಅಳವಡಿಸುವ ಯೋಜನೆಯಾಗಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 30 ಹಾಗೂ ರಾಜ್ಯ ಸರ್ಕಾರ ಶೇ 50 ಸಹಾಯಧನ ಲಭ್ಯವಿದ್ದು, ಉಳಿದ ಶೇ 20 ರಷ್ಟು ರೈತರು ವಂತಿಕೆ ಭರಿಸಬೇಕಾಗುತ್ತಿದೆ.
ಸೋಲಾರ್ ಪೆನಲ್‌ನೊಂದಿಗೆ ಮೋಟಾರ್, ಸ್ಟಾರ್ಟರ್, ಕೇಬಲ್ ಮತ್ತು ಪೈಪ್‌ಗಳನ್ನು ಪೂರೈಸಲಾಗುವುದು ಎಂದರು.
ಪಿಎಂ ಸೂರ್ಯಘರ್ ಮುಕ್ತ ಬಿಜಲಿ ಯೋಜನೆಯಡಿ ಗ್ರಾಹಕರು ವಿದ್ಯುತ್ ಉತ್ಪಾದಿಸಿ, ಬಳಸಲು ಅನುಕೂಲ ಒದಗಿಸಿದೆ. ವಿದ್ಯುತ್ ಬಿಲ್ ಉಳಿತಾಯ, ಹೆಚ್ಚುವರಿ ವಿದ್ಯುತ್ ಅನ್ನು ಹೆಸ್ಕಾಂಗೆ ಪೂರೈಸಿ ಹಣ ಸಂಪಾದನೆ ಮಾಡಬಹುದು.
ಈ ಯೋಜನ ಕಡಿಮೆ ಬಂಡವಾಳ ವೆಚ್ಚದಲ್ಲಿ ವಸತಿ ಮನೆಗಳ ಚಾವಣಿಯನ್ನು ಬಳಸಿಕೊಳ್ಳಬಹುದು. ಸಹಾಯಧನವು ಲಭ್ಯವಿದೆ ಎಂದು ಹೆಸ್ಕಾಂನ ಅಧಿಕ್ಷಕ ಎಂಜಿನಿಯರ್ ಸಿದ್ದಪ್ಪ ಬಿಂಜಗೇರಿ ಸಭೆಗೆ ಮಾಹಿತಿ ನೀಡಿದರು.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕಾರ್ಯಕ್ರಮದಡಿಯಲ್ಲಿ ಏಪ್ರಿಲ್ 25 ರಿಂದ ಡಿಸೆಂಬರ್ 25ರ ಅಂತ್ಯದವರೆಗೆ ಒಟ್ಟು 10,22,738 ಜನರಿಗೆ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಲಿಂಕ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ಸಂಪತ ಗುಣಾರಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಆನಂದ ಕೆ.ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜನಪರ ಕಳಕಳಿ ಹೊಂದಿ, ಕಾರ್ಯ ಯೋಜನೆ ಸಿದ್ಧಪಡಿಸಿಕೊಂಡು, ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಯೋಜನೆಯ ಲಾಭ ಜನರಿಗೆ ತಲುಪಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ದಿಶಾ ಸಮಿತಿ ಸದಸ್ಯರಾದ ರವಿಕಾಂತ, ಸುನೀಲ, ಭಾಗವ್ವ ಮಾದರ, ಸುಮಂಗಲಾ, ಕಾಶಿರಾಯಗೌಡ ಬಿರಾದಾರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಇದ್ದರು.
ಕೇಂದ್ರ ಪುರಸ್ಕೃತ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕುರಮೇಶ ಜಿಗಜಿಣಗಿಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.