
ವಿಜಯಪುರ : ನಗರದ ಕಂದಗಲ್ ರಂಗಮಂದಿರದ ಆವರಣದಲ್ಲಿ ವಾರದಿಂದ ನಡೆಯುತ್ತಿರುವ ಖಾದಿ ಉತ್ಸವಕ್ಕೆ ಜನರು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ. ಹತ್ತಾರು ಮಳಿಗೆಗಳಲ್ಲಿ ಖಾದಿ ಉತ್ಪನ್ನಗಳನ್ನು ಆಸಕ್ತಿಯಿಂದ ಖರೀದಿಸುತ್ತಿದ್ದಾರೆ. ಇನ್ನೂ ಎರಡು ದಿನ ಈ ಪ್ರದರ್ಶನ ನಡೆಯಲಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಸಹಯೋಗದಲ್ಲಿ ನಡೆಯುತ್ತಿರುವ ಈ ಖಾದಿ ಉತ್ಸವದಲ್ಲಿ ಕರ್ನಾಟಕದ ನಾನಾ ಭಾಗಗಳಿಂದ ಖಾದಿ ಉತ್ಪನ್ನಗಳ ಉತ್ಪಾದನಾ ಸಂಸ್ಥೆಗಳು ಆಗಮಿಸಿವೆ. 50 ಕ್ಕೂ ಹೆಚ್ಚು ಮಳಿಗೆಗೆಳಲ್ಲಿ ತರಹೇವಾರಿ ಖಾದಿ ವಸ್ತುಗಳು ಮಾರಾಟಕ್ಕೆ ಲಭ್ಯ.
ರಾಜ್ಯದ ಇಲಳಕಲ್, ಕುಷ್ಟಗಿ, ಹುಬ್ಬಳ್ಳಿ, ಗರಗ, ಬನಹಟ್ಟಿ, ಚಿಂತಾಮಣಿ, ರೋಣ, ತೇರದಾಳ, ಚಿಕ್ಕಬಳ್ಳಾಪೂರ ಸೇರಿದಂತೆ ವಿವಿಧ ಭಾಗಗಳಿಂದ ಖಾದಿ ಉತ್ಪದನಾ ಸಂಸ್ಥೆಗಳು ಇಲ್ಲಿ ಮಳಿಗೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಆರಂಭದಲ್ಲಿಯೇ ಇರುವ ಮಹಾತ್ಮಾ ಗಾಂಧೀಜಿ ಅವರು ಚರಕ ನೂಲುವ ಚಿತ್ರ, ಅದರ ಪಕ್ಕದಲ್ಲಿಯೇ ಸೆಲ್ಫಿ ತೆಗೆಸಿಕೊಳ್ಳುವ ಸ್ಥಳ ಎಲ್ಲರ ಗಮನ ಸೆಳೆಯುತ್ತಿದೆ.
ಕೈಮಗ್ಗಗಳಿಂದ ತಯಾರಿಸ್ಪಲ್ಪಟ್ಟ ಸೀರೆ, ಜಮಖಾನಾ, ಖಾದಿ ಬಟ್ಟೆ, ಆಧುನಿಕ ಸ್ಪರ್ಶದ ಕಾಲರ್, ರೌಂಡ್ ಕಾಲರ್, ನೆಹರೂ ಷರ್ಟ್, ಟವೆಲ್‌ಗಳು, ಕರ್ಚಿಫ್, ಹ್ಯಾಂಡ್‌ಮೇಡ್ ಬ್ಯಾಗ್, ಅಗರಬತ್ತಿ, ಚನ್ನಪಟ್ಟಣದ ಬೊಂಬೆ, ಪಾದರಕ್ಷೆಗಳು ಹೀಗೆ ಹಲವು ವಸ್ತುಗಳು ಗ್ರಾಹಕರನ್ನು ಸೆಳೆಯುತ್ತಿವೆ.
ನಾರಿನಿಂದ ಉತ್ಪಾದಿಸಿದ ವಿಜಯಪುರದ ಯಶೋಧಾ ಗುಜ್ಜರ ಸಾರಥ್ಯದ ಗುಜ್ಜರ್ ಝೂಟ್ ಮೇಡ್ ಉತ್ಪನ್ನಗಳು ಸಹ ಮನ ಸೆಳೆಯುತ್ತಿದ್ದು, ಬ್ಯಾಗ್, ಪರ್ಸ್, ಸ್ಕೂಲ್ ಬ್ಯಾಗ್‌ಗಳು ಪ್ರದರ್ಶನದಲ್ಲಿವೆ.
ಬಗೆ ಬಗೆಯ ಕುರಕಲು ತಿನಿಸಿಗಳು, ಚಕ್ಕಲಿ, ಕೋಡಬಳೆ, ಪಾಪಡಗಳು ಸಹ ಅಲ್ಲಿವೆ, ಊಟದ ಜೊತೆ ಗುರೆಳ್ಳು ಚಟ್ನಿ, ಶೇಂಗಾ ಹಿಂಡಿ, ಬಗೆ ಬಗೆಯ ಉಪ್ಪಿನಕಾಯಿ ಮಾರಾಟ ಮಳಿಗೆಗಳು ಪ್ರದರ್ಶನದಲ್ಲಿವೆ.
ಮಹಾತ್ಮಾ ಗಾಂಧಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಖಾದಿಯನ್ನು ದೇಶಾಭಿಮಾನದ ಪ್ರತೀಕವಾಗಿ ಬಳಸಿದ್ದರು. ಪ್ರತಿ ವರ್ಷ ಖಾದಿ ಮೇಳಕ್ಕೆ ಭೇಟಿ ನೀಡುತ್ತೇನೆ.ವಿಶ್ವೇಶ್ವರಯ್ಯ ಮಠಪತಿ ನಿವೃತ್ತ ಕಲಾ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.