ವಿಜಯಪುರ: ಭೂ ಸುರಕ್ಷಾ ಯೋಜನೆ ದಾಖಲೆಗಳ ಡಿಜಿಟಲೀಕರಣ ಜಿಲ್ಲೆಯಲ್ಲಿ ಕಾರ್ಯಾರಂಭಗೊಂಡಿದ್ದು, ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೋಮವಾರ ಭೂದಾಖಲೆಗಳ ಇ ಖಜಾನೆ (ಆಧುನಿಕ ಅಭಿಲೇಖಾಲಯ) ಕೊಠಡಿಗೆ ಚಾಲನೆ ನೀಡಿ, ಸಾಂಕೇತಿಕವಾಗಿ ಗಣಕೀಕೃತ ಪ್ರತಿಗಳನ್ನು ರೈತರಿಗೆ ನೀಡಿದರು.
‘ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಸುರಕ್ಷಾ ಯೋಜನೆಯಡಿ ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಗಣಕೀಕರಣ ಮಾಡುವ ಕಾರ್ಯ ಈಗಾಗಲೇ ಆರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
‘ಜಿಲ್ಲೆಯಲ್ಲಿ ವಿಜಯಪುರ ತಾಲ್ಲೂಕನ್ನು ಪೈಲಟ್ ತಾಲ್ಲೂಕನ್ನಾಗಿ ಕೈಗೆತ್ತಿಕೊಂಡು 1,52,000 ಕಡತಗಳ ಪೈಕಿ ಈಗಾಗಲೇ 1,22,000 ಕಡತಗಳನ್ನು ಗಣಕೀಕರಣ ಮಾಡಲಾಗಿದೆ. ದಾಖಲಾತಿಗಳ ಗಣಕೀಕರಣದಿಂದ ಸಾರ್ವಜನಿಕರಿಗೆ ಆನ್‍ಲೈನ್ ಮೂಲಕ ಸುಲಭವಾಗಿ ದಾಖಲಾತಿಗಳು ದೊರಕಲಿವೆ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ದಾಖಲೀಕರಣ ಕಾರ್ಯದಲ್ಲಿ ವಿಜಯಪುರ ತಾಲ್ಲೂಕು ಮೊದಲ ತಾಲ್ಲೂಕು ಆಗಲಿದೆ. ಉಳಿದ ತಾಲ್ಲೂಕುಗಳಲ್ಲಿಯೂ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ಗಣಕೀಕೃತ ದಾಖಲೆಗಳನ್ನು ಮಾತ್ರ ನೀಡಲಾಗುವುದು. ಯಾವುದೇ ದಾಖಲೆಗಳು ಬೇಕಾಗಿದ್ದಲ್ಲಿ ಆನ್‍ಲೈನ್ ಮೂಲಕವೇ ಪಡೆದುಕೊಳ್ಳಬಹುದಾಗಿದ್ದು, ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಿ ಸ್ಥಳದಲ್ಲಿಯೇ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಲು ಡಿಜಿಟಲೀಕರಣ ಕಾರ್ಯದಿಂದ ಅನುಕೂಲವಾಗಲಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ತಹಶೀಲ್ದಾರ್ ಪ್ರಶಾಂತ ಚನಗೊಂಡ ಉಪಸ್ಥಿತರಿದ್ದರು.
Quote - ಸಾರ್ವಜನಿಕರು ಸೇರಿದಂತೆ ಭೂ ಸುರಕ್ಷಾ ಯೋಜನೆಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದ್ದು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಟಿ.ಭೂಬಾಲನ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.