ADVERTISEMENT

ವಿಜಯಪುರದ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ಭಿಕ್ಷುಕರ ಪಾಲಿನ ಸುಭಿಕ್ಷಾ ತಾಣ

ಬಸವರಾಜ ಸಂಪಳ್ಳಿ
Published 6 ಫೆಬ್ರುವರಿ 2021, 12:21 IST
Last Updated 6 ಫೆಬ್ರುವರಿ 2021, 12:21 IST
ವಿಜಯಪುರದ ಸ್ಥಳೀಯ ನಿರಾಶ್ರಿತರ ಕೇಂದ್ರದಲ್ಲಿ ಭಿಕ್ಷುಕರಿಗೆ ಬೆಳಿಗ್ಗೆ ಲಘು ವ್ಯಾಯಾಮ ಹೇಳಿಕೊಡುತ್ತಿರುವ ಸಿಬ್ಬಂದಿ
ವಿಜಯಪುರದ ಸ್ಥಳೀಯ ನಿರಾಶ್ರಿತರ ಕೇಂದ್ರದಲ್ಲಿ ಭಿಕ್ಷುಕರಿಗೆ ಬೆಳಿಗ್ಗೆ ಲಘು ವ್ಯಾಯಾಮ ಹೇಳಿಕೊಡುತ್ತಿರುವ ಸಿಬ್ಬಂದಿ   

ವಿಜಯಪುರ: ಭಿಕ್ಷುಕರ ಪಾಲಿಕೆ ಅದು ಅಕ್ಷರಶಃ ಸುಭಿಕ್ಷಾ ತಾಣವೇ ಸರಿ.ಯಾವುದೇ ಅಡೆತಡೆಗಳಿಲ್ಲದ ಅಲ್ಲಿ ಭಿಕ್ಷುಕರಿಗೆ ಮನೆಯ ವಾತಾವರಣ ಕಲ್ಪಿಸಲಾಗಿದೆ. ಪ್ರಶಾಂತ, ಸ್ವಚ್ಛ ಹಾಗೂ ಸುಂದರ ವಾತಾವರಣದಲ್ಲಿ ಅಚ್ಚುಕಟ್ಟಾಗಿರುವ ವಿಜಯಪುರದ ‘ಸ್ಥಳೀಯ ನಿರಾಶ್ರಿತ ಕೇಂದ್ರ’ ಭಿಕ್ಷುಕರ ತವರು ಮನೆಯಂತಿದೆ.

ಮೂರು ಹೊತ್ತು ಉಚಿತ ಊಟ, ಉಪಾಹಾರ, ತೊಡಲು ವಸ್ತ್ರ, ಹಾಸಲು, ಹೊದೆಯಲು ಚಾಪೆ, ಹೊದಿಕೆ. ಸ್ನಾನಕ್ಕೆ ಬಿಸಿ ನೀರು, ಕುಡಿಯಲುಶುದ್ಧ ನೀರು, ಸ್ವಚ್ಛ ಶೌಚಾಲಯ, ಬೇಸರ ಕಳೆಯಲು ಟಿವಿ, ಓದಲು ದಿನಪತ್ರಿಕೆಗಳು, ತಿರುಗಾಡಲು ವಿಶಾಲವಾದ ಮೈದಾನ. ಆರೋಗ್ಯ ಹದಗೆಟ್ಟರೆ ಉಚಿತ ಔಷಧ, ಚಿಕಿತ್ಸೆ. ಇಷ್ಟೆಲ್ಲ ಸೌಲಭ್ಯಗಳನ್ನು ನಗರದ ಟಕ್ಕೆಯಲ್ಲಿರುವ ‘ಸ್ಥಳೀಯ ನಿರಾಶ್ರಿತರ ಕೇಂದ್ರ’ದಲ್ಲಿ ಭಿಕ್ಷುಕರಿಗೆ ಒದಗಿಸಲಾಗಿದೆ. ಹೀಗಾಗಿ ಒಮ್ಮೆ ಈ ಕೇಂದ್ರಕ್ಕೆ ಬರುವ ಭಿಕ್ಷುಕರು ಮರಳಿ ಎಲ್ಲಿಗೂ ಹೋಗಲು ಭಯಸುವುದಿಲ್ಲ.

ಹೌದು, ಕೇಂದ್ರದ ಅಧೀಕ್ಷಕಿ (ಸೂಪರಿಂಟೆಂಡೆಂಟ್‌) ಪದ್ಮಜಾ ಪಾಟೀಲ ಅವರ ಉಸ್ತುವಾರಿಯಲ್ಲಿ ರಾಜ್ಯದಲ್ಲೇ ಮಾದರಿಎಂಬಂತೆ ಈ ನಿರಾಶ್ರಿತರ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ADVERTISEMENT

175 ಭಿಕ್ಷುಕರಿಗೆ ಆಶ್ರಯ ನೀಡುವ ಸಾಮಾರ್ಥ್ಯ ಇರುವ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸದ್ಯ 111 ಜನ ಭಿಕ್ಷುಕರು ಆಶ್ರಯ ಪಡೆದುಕೊಂಡಿದ್ದಾರೆ.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಭಿಕ್ಷೆ ಬೇಡುವವರನ್ನು ಬಂಧಿಸಿ ವಾಹನದ ಮೂಲಕ ಕರೆತಂದು ಇಲ್ಲಿ ಆಶ್ರಯ ನೀಡಲಾಗುತ್ತಿದೆ.

ಕರ್ನಾಟಕದ 60, ತಮಿಳುನಾಡಿನ 6, ಆಂಧ್ರಪ್ರದೇಶದ 10, ಮಹಾರಾಷ್ಟ್ರದ 9,ಕೇರಳದ ಒಬ್ಬರು ಹಾಗೂ ಇತರೆ ರಾಜ್ಯಗಳ 25 ಜನ ಭಿಕ್ಷುಕರು ಇದ್ದಾರೆ. ಇದರಲ್ಲಿ 91 ಮಹಿಳೆಯರು, 20 ಮಹಿಳೆಯರು ಇದ್ದಾರೆ.

‘ಅವಳಿ ಜಿಲ್ಲೆಯಲ್ಲಿ ಧಾರ್ಮಿಕ ಸ್ಥಳಗಳು, ಬಸ್‌ ಮತ್ತು ರೈಲು ನಿಲ್ದಾಣ, ಸಂತೆ, ಜಾತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡುಬಂದರೆ ಅಥವಾ ಯಾರಾದರೂ ನಮ್ಮ ಕೇಂದ್ರಕ್ಕೆ ಮಾಹಿತಿ ನೀಡಿದರೆ ತಕ್ಷಣ ನಮ್ಮ ಸಿಬ್ಬಂದಿ ವಾಹನ ಸಮೇತ ಸ್ಥಳಕ್ಕೆ ತೆರಳಿ ಭಿಕ್ಷುಕರನ್ನು ಬಂಧಿಸಿ, ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕರೆದುಕೊಂಡು ಬರುತ್ತೇವೆ’ ಎಂದು ಪದ್ಮಜಾ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಭಿಕ್ಷುಕರ ವಿಳಾಸವನ್ನು ಪತ್ತೆ ಹೆಚ್ಚಿ ಅವರ ಮನೆಗೆ ಕಳುಹಿಸಲು ಮೊದಲ ಆದ್ಯತೆ ನೀಡುತ್ತೇವೆ. ವಿಳಾಸ ಪತ್ತೆಯಾಗದಿದ್ದರೆಕೇಂದ್ರದಲ್ಲಿ ಒಂದು ವರ್ಷದಿಂದ ಮೂರು ವರ್ಷಗಳ ಕಾಲ ಆಶ್ರಯ ನೀಡುತ್ತೇವೆ. ಬಳಿಕ ಅವರು ಸುಧಾರಣೆಯಾಗಿದ್ದರೆ ಹೊರಗೆ ಬಿಡುತ್ತೇವೆ ಎಂದು ಹೇಳಿದರು.

18 ವರ್ಷ ಮೇಲ್ಪಟ್ಟ ಪುರುಷ, ಮಹಿಳಾ ಭಿಕ್ಷುಕರಿಗೆ ಮಾತ್ರ ಕೇಂದ್ರದಲ್ಲಿ ಆಶ್ರಯ ನೀಡುತ್ತೇವೆ. ಮಕ್ಕಳಿಗೆ ನಮ್ಮಲ್ಲಿ ಅವಕಾಶವಿಲ್ಲ ಎಂದರು.

ಕೇಂದ್ರದಲ್ಲಿ ಮೂವರು ಕಾಯಂ ಹಾಗೂ 17 ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಿಬ್ಬಂದಿ ಇದ್ದೇವೆ. ಮೂವರು ಸ್ಟಾಫ್‌ ನರ್ಸ್‌ ಇದ್ದಾರೆ. ವೈದ್ಯಾಧಿಕಾರಿಗಳು ಆಗಾಗ ಭೇಟಿ ನೀಡಿ ಭಿಕ್ಷುಕರ ಆರೋಗ್ಯ ತಪಾಸಣೆ ಮಾಡುತ್ತಾರೆ. ಭಿಕ್ಷುಕರಿಗೆ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ, ಭಜನೆ ಮಾಡಿಸುತ್ತೇವೆ. ಸ್ವಚ್ಛತೆ ಕಾಪಾಡಲು ಮಾರ್ಗದರ್ಶನ ನೀಡುತ್ತೇವೆ. ಲಘು ವ್ಯಾಯಾಮ ಮಾಡಿಸುತ್ತೇವೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಭಿಕ್ಷುಕರ ಸ್ವಚ್ಛತೆ, ಸುರಕ್ಷತೆ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ಸರಿಯಾಗಿರುವವರಿಗೆ ಹೊಲಿಗೆ ತರಬೇತಿ, ಕಸೂತಿ‌, ಬಟ್ಟೆ ಬ್ಯಾಗ್‌, ಕಾಗದದ ಚೀಲ, ಎನ್ವಲಪ್‌ ಕವರ್‌ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದರು.

ಕೇಂದ್ರದಲ್ಲಿ ಇರುವ ಭಿಕ್ಷುಕರಲ್ಲಿ ಕೆಲವರು ಮಾನಸಿಕ ಅಸ್ವಸ್ಥರೂ ಇದ್ದಾರೆ. ಇವರು ಕೇಂದ್ರದ ಸಿಬ್ಬಂದಿ ಮೇಲೆ ಕೆಲವೊಮ್ಮೆ ಹಲ್ಲೆ ಮಾಡುತ್ತಾರೆ. ಬೇರೆ ಭಿಕ್ಷುಕರೊಂದಿಗೆ ಗಲಾಟೆ ಮಾಡುತ್ತಾರೆ. ಎಷ್ಟೇ ಚನ್ನಾಗಿ ನೋಡಿಕೊಂಡರೂ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರೆ. ನಿರ್ವಹಣೆ ಸವಾಲಿನ ಕೆಲಸವಾಗಿದೆ. ದಿನದ 24 ಗಂಟೆಯೂ ಎಚ್ಚರದಿಂದ ಇರಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಪದ್ಮಜಾ ಪಾಟೀಲ.

ಕೋವಿಡ್‌ನಲ್ಲಿ ಹೊಸಬರಿಗಿಲ್ಲ ಅವಕಾಶ

ಇಲಾಖೆಯ ನಿರ್ದೇಶನದ ಹಿನ್ನೆಲೆಯಲ್ಲಿ ಕೋವಿಡ್‌ ಸಂದರ್ಭದಲ್ಲಿ ಸುಮಾರು ಒಂಬತ್ತು ತಿಂಗಳು ಹೊರಗಡೆ ಕಂಡುಬಂದ ಯಾವೊಬ್ಬ ಭಿಕ್ಷುಕರನ್ನು ಬಂಧಿಸಿ ನಿರಾಶ್ರಿತರ ಕೇಂದ್ರಕ್ಕೆ ತಂದಿಲ್ಲ ಎನ್ನುತ್ತಾರೆ ಪದ್ಮಜಾ ಪಾಟೀಲ.

ಇದೀಗ ಫೆಬ್ರುವರಿಯಿಂದ ಕಾರ್ಯಾಚರಣೆ ಆರಂಭಿಸಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಕಂಡುಬಂದರೆ ಅಂಥವರನ್ನು ಬಂಧಿಸಿ ಕೇಂದ್ರಕ್ಕೆ ತಂದು ಆಶ್ರಯ ನೀಡುತ್ತಿದ್ದೇವೆ . ಕೋವಿಡ್‌ ಸಂದರ್ಭದಲ್ಲಿ ಕೇಂದ್ರದಲ್ಲಿ ಸುಮಾರು 101 ಜನ ಭಿಕ್ಷುಕರು ಇದ್ದರು. ಅವರಲ್ಲಿ ಯಾರನ್ನೂ ಹೊರಗೆ ಬಿಟ್ಟಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.