ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್‌ನಲ್ಲಿ ಭಾರಿ ದರೋಡೆ– 59ಕೆಜಿ ಚಿನ್ನಾಭರಣ ಕಳವು!
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಮಾಡಲಾಗಿದ್ದು, 59 ಕೆ.ಜಿ. ಚಿನ್ನಾಭರಣ ಹಾಗೂ ₹5.20 ಲಕ್ಷ ನಗದು ಕಳವು ಮಾಡಲಾಗಿದೆ.
ಮೇ 23ರಿಂದ 25ರ ನಡುವೆ ಬ್ಯಾಂಕಿನ ದರೋಡೆ ನಡೆದಿದ್ದು ಮೇ 26ರಂದು ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಕಲ್ಮೇಶ ಪೂಜಾರಿ ದೂರು ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಬ್ಯಾಂಕಿನ ಮುಖ್ಯ ದ್ವಾರದ ಶೆಟರ್ಸ್ ಗೆ ಹಾಕಿದ ಕೀಲಿ ಮತ್ತು ಕಿಟಕಿಯ ಸರಳುಗಳನ್ನು ಮುರಿದು ಒಳಗೆ ಪ್ರವೇಶಿಸಿದ ದರೋಡೆಕೋರರು, ಬಂಗಾರದ ಆಭರಣ ಮತ್ತು ನಗದು ಇಟ್ಟಿದ್ದ ಸೇಪ್ ಲಾಕರ್ ನ ಕೀಲಿ ತೆಗೆದು ಅದರ ಒಳಗೆ ಇರುವ ಕಬ್ಬಿಣದ ಬಾಗಿಲಿನ ಸರಳುಗಳನ್ನು ಕಟ್ ಮಾಡಿ ಒಳ ಹೊಕ್ಕು, ಕಬ್ಬಿಣದ ಟ್ರಜರಿಯಲ್ಲಿ ಇದ್ದ ಚಿನ್ನಾಭರಣ, ನಗದು ಹೊತ್ತೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ, ತಮ್ಮ ಗುರುತು ಸಿಗದಂತೆ ಮಾಡಲು ಬ್ಯಾಂಕಿನಲ್ಲಿ ಅಳವಡಿಸಿದ್ದ ಸಿ.ಸಿ.ಟಿವಿ ಕ್ಯಾಮೆರಾದ ಎನ್.ವಿ.ಆರ್. ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.
ದರೋಡೆಕೋರರ ಪತ್ತೆಗಾಗಿ ಎಂಟು ತಂಡಗಳನ್ನು ರಚಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ಮತ್ತು ಪತ್ತೆ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.