ADVERTISEMENT

ವಿಜಯಪುರ | ಸಚಿವರು, ಶಾಸಕರಿಗೆ ತಕ್ಕ ಪಾಠ: ಸಿದ್ದನಗೌಡ ಪಾಟೀಲ ಎಚ್ಚರಿಕೆ

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಬೆಂಗಳೂರಿಗೆ ವಿಸ್ತರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 6:05 IST
Last Updated 29 ಅಕ್ಟೋಬರ್ 2025, 6:05 IST
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಮಂಗಳವಾರ   ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ, ಡಾ.ಅರವಿಂದ ಮಾಲಗತ್ತಿ, ಜಿ.ಬಿ.ಪಾಟೀಲ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಮಂಗಳವಾರ   ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ, ಡಾ.ಅರವಿಂದ ಮಾಲಗತ್ತಿ, ಜಿ.ಬಿ.ಪಾಟೀಲ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು   

ವಿಜಯಪುರ: ‘ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಜನರು ನಡೆಯುತ್ತಿರುವ ಹೋರಾಟಕ್ಕೆ ಜಿಲ್ಲೆಯ ಸಚಿವರು, ಶಾಸಕರು ಸ್ಪಂದಿಸಬೇಕು, ಸರ್ಕಾರದ ಮೇಲೆ ಒತ್ತಡ ಹೇರಿ ಕಾಲೇಜು ಮಂಜೂರು ಮಾಡಿಸಬೇಕು. ಇಲ್ಲವಾದರೆ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿತ್ತೇವೆ’ ಎಂದು ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯಪುರದಲ್ಲಿ 40 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಕಾರಣ ಶೀಘ್ರದಲ್ಲೇ ಬೆಂಗಳೂರಿಗೆ ಹೋರಾಟವನ್ನು ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

‘ವಿಜಯಪುರದಲ್ಲಿ ಉದ್ದೇಶಿತ ಪಿಪಿಪಿ (ಸಾರ್ವಜನಿಕ–ಖಾಸಗಿ ಸಹಭಾಗಿತ್ವ) ಮಾದರಿ ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಆದರೆ, ವಿಜಯಪುರಕ್ಕೆ ಪಿಪಿಪಿ ಮಾದರಿ ಏಕೆ’ ಎಂದು ಪ್ರಶ್ನಿಸಿದ ಅವರು, ‘ಮುಖ್ಯಮಂತ್ರಿ, ಸಚಿವರು ಜಿಲ್ಲೆಯ ಶಾಸಕರೊಬ್ಬರಿಗೆ ರಾಜಕೀಯ ಲಾಭಕ್ಕಾಗಿ ಮಾತು ಕೊಟ್ಟಿದ್ದಾರೆ ಎಂಬ ಆರೋಪ  ಕೇಳಿಬರುತ್ತಿದೆ’ ಎಂದು ಶಂಕೆ ವ್ಯಕ್ತಪಡಿಸಿದರು.

‘ವಿಜಯಪುರದಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಹಿಂದೆ ಭೂ ಮಾಫಿಯಾ, ವೈದ್ಯಕೀಯ ಮಾಫಿಯಾ ಕೆಲಸ ಮಾಡುತ್ತಿವೆ’ ಎಂದು‌ ಆರೋಪಿಸಿದರು.

ವಿಜಯಪುರ ಜಿಲ್ಲೆಯಲ್ಲಿ ನವಜಾತ ಶಿಶು, ತಾಯಿ ಮರಣ, ಅಪೌಷ್ಟಿಕತೆ, ಬಡತನ ಹೆಚ್ಚಿದೆ. ಶೈಕ್ಷಣಿಕವಾಗಿ ಜಿಲ್ಲೆಯು ಹಿಂದುಳಿದಿದೆ. ಕಾರಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿದರೆ ಈ ಭಾಗದ ಜನತೆಗೆ ಅನುಕೂಲವಾಗಲಿದೆ’ ಎಂದು ಹೇಳಿದರು. 

‘ಆರೋಗ್ಯ, ವೈದ್ಯಕೀಯ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಮೂಲಕ ಸರ್ಕಾರಗಳು ಬಡವರಿಗೆ ಆರೋಗ್ಯ ಹಕ್ಕು ಮೊಟಕುಗೊಳಿಸುತ್ತಿರುವುದು ಖಂಡನೀಯ’ ಎಂದರು.

‘ಖಾಸಗಿ ಕಂಪನಿಗಳು ಎಂದಿಗೂ ಜನರಿಗೆ ಸಹಾಯ, ಸೇವೆ ಮಾಡುವುದಿಲ್ಲ. ಲಾಭಕ್ಕಾಗಿ ಬಂಡವಾಳ ಹೂಡಿಕೆ ಮಾಡುತ್ತವೆ. ಆರೋಗ್ಯ ಉದ್ಯಮ ಆಗಬಾರದು, ಸೇವೆಯಾಗಿಯೇ ಇರಬೇಕು, ವೈದ್ಯಕೀಯ ಶಿಕ್ಷಣ ಇಂದು ದೊಡ್ಡ ಮಾಫಿಯಾ ಆಗಿದೆ. ವೈದ್ಯಕೀಯ ಶಿಕ್ಷಣ ಬಡವರಿಗೆ ನಿಲುಕದ ಸ್ಥಿತಿಯಲ್ಲಿದೆ. ಖಾಸಗಿ ಕಾಲೇಜುಗಳು ಹಣಕ್ಕೆ ಸೀಟು ಮಾರಾಟ ಮಾಡುತ್ತಿವೆ. ಆರೋಗ್ಯ ಖರೀದಿ, ಮಾರಾಟದ ಸರಕಾಗಬಾರದು’ ಎಂದರು.

ಬಸವ ಚಿಂತಕ ಜಿ.ಬಿ.ಪಾಟೀಲ ಮಾತನಾಡಿ, ‘ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಲು ಹೆಚ್ಚು ಅನುದಾನದ ಅಗತ್ಯವಿಲ್ಲ. ಕೇವಲ ಕಾಲೇಜು ಕೊಠಡಿಗಳನ್ನು ನಿರ್ಮಿಸಿ, ಅಧ್ಯಾಪಕರನ್ನು ನೇಮಿಸಿದರೆ ಸಾಕು’ ಎಂದರು.

ಗದುಗಿನ ಲಡಾಯಿ ಪ್ರಕಾಶನದ ಸಂಚಾಲಕ ಬಸವರಾಜ ಸೂಳಿಬಾವಿ ಮಾತನಾಡಿ, ‘ಜನಸಾಮಾನ್ಯರ ಹಿತ ಕಾಯುವ ಬದಲು ಖಾಸಗಿಯವರ ಹಿತ ಕಾಪಾಡಲು ಸಚಿವರು, ಶಾಸಕರು ನಿಂತಿರುವುದು ಸರಿಯಲ್ಲ. ಸಚಿವರು, ಶಾಸಕರು ಜಿಲ್ಲೆಯ ಜನತೆಯ ವಿರೋಧಿಗಳಾಗಬಾರದು, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಜಿಲ್ಲೆಯ ರಾಜಕಾರಣಿಗಳು ಒಟ್ಟಾಗಿ ಧ್ವನಿ ಎತ್ತಬೇಕಿದೆ’ ಎಂದರು.

ಪ್ರಮುಖರಾದ ಡಾ.ಅರವಿಂದ ಮಾಲಗತ್ತಿ, ವಿದ್ಯಾವತಿ ಅಂಕಲಗಿ, ಭರತ್‌ ಎಚ್‌.ಟಿ., ಚನ್ನು ಕಟ್ಟಿಮನಿ, ಫಾದರ್ ಕೆವಿನ್, ಶ್ರೀನಾಥ ಪೂಜಾರಿ, ಅನಿಲ ಹೊಸಮನಿ, ಸುರೇಶ ಜೀಬಿ, ಲಕ್ಷ್ಮಣ ಹಂದ್ರಾಳ, ಜಗದೇವ ಸೂರ್ಯವಂಶಿ, ಸಿದ್ರಾಮ ಹಳ್ಳೂರ, ಸೋಮು ರಣದೇವಿ ಇದ್ದರು.

ಸರ್ಕಾರಗಳು ಕಲ್ಯಾಣ ರಾಜ್ಯ ಕಲ್ಪನೆಯಿ‌ಂದ ದೂರವಾಗುತ್ತಿವೆ. ಸೇವಾ ಕ್ಷೇತ್ರಗಳಲ್ಲಿ ಖಾಸಗೀಕರಣಕ್ಕೆ ಆದ್ಯತೆ ನೀಡುತ್ತಿರುವುದು ಈ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ
ಸಿದ್ದನಗೌಡ ಪಾಟೀಲ ಪ್ರಗತಿಪರ ಚಿಂತಕ
ವೈದ್ಯಕೀಯ ಶಿಕ್ಷಣವನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದು. ಶ್ರೀಸಾಮಾನ್ಯರಿಗೆ ವೈದ್ಯಕೀಯ ಶಿಕ್ಷಣ ಸಿಗುವಂತಾಗಬೇಕು ಪಿಪಿಪಿ ಮಾದರಿಯನ್ನು ಕೈಬಿಡಬೇಕು
ಅರವಿಂದ ಮಾಲಗತ್ತಿ ನಿವೃತ್ತ ಪ್ರಾಧ್ಯಾಪಕ ಮೈಸೂರು ವಿ.ವಿ
ಖಾಸಗಿ ಕಂಪನಿ ಸಚಿವರು ಶಾಸಕರದ್ದೇ ಆಗಿದೆ. ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಪರ ಧ್ವನಿ ಎತ್ತದಿದ್ದರೆ ಜನತೆಗೆ ಮಾಡಿದ ದ್ರೋಹ ಆಗಲಿದೆ
ಬಸವರಾಜ ಸೂಳಿಬಾವಿ ಸಂಚಾಲಕ ಲಡಾಯಿ ಪ್ರಕಾಶನ ಗದಗ
ಪ್ರಧಾನಿ ಮುಖ್ಯಮಂತ್ರಿ ಸಂಸದರು ಸಚಿವರು ಶಾಸಕರು ಖಾಸಗಿ ಕಂಪನಿಗಳ ಸಿಇಒಗಳಂತಾಗಿದ್ದಾರೆ. ಜನಪರ ಕೆಲಸ ಮಾಡುವ ಬದಲು ಖಾಸಗಿ ಕಂಪನಿಗಳ ಪರ ವಕಾಲತ್ತು ವಹಿಸುತ್ತಿರುವುದು ಖಂಡನೀಯ
ಜಿ.ಬಿ.ಪಾಟೀಲ ಬಸವ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.