ADVERTISEMENT

ವಿಜಯಪುರ | ‘ಜಿಲ್ಲೆಯ ಪ್ರತಿಯೊಬ್ಬರೂ ಧ್ವನಿ ಎತ್ತಿ’

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ; ಒಂಬತ್ತು ದಿನ ಪೂರೈಸಿದ ಹೋರಾಟ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:23 IST
Last Updated 27 ಸೆಪ್ಟೆಂಬರ್ 2025, 4:23 IST
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಶುಕ್ರವಾರ ಮುದ್ದೇಬಿಹಾಳ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂಗಯ್ಯ ಸಾರಂಗಮಠ ಮಾತನಾಡಿದರು
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಶುಕ್ರವಾರ ಮುದ್ದೇಬಿಹಾಳ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂಗಯ್ಯ ಸಾರಂಗಮಠ ಮಾತನಾಡಿದರು   

ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಶುಕ್ರವಾರ ಒಂಬುತ್ತು ದಿನ ಪೂರೈಸಿತು. ಮಳೆಯನ್ನು ಲೆಕ್ಕಿಸದೇ ಹೋರಾಟಗಾರರು ಧರಣಿ ನಡೆಸಿದರು. ಜಿಲ್ಲೆಯ ವಿವಿಧ ಸಂಘಟನೆಗಳು ಧರಣಿಗೆ ಬೆಂಬಲಿಸಿದರು.

ಧರಣಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಮುದ್ದೇಬಿಹಾಳ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಜಿಲ್ಲೆಯ ಪ್ರತಿಯೊಬ್ಬರೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಧ್ವನಿ ಎತ್ತಬೇಕು. ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಇಲ್ಲದ ಖಾಸಗಿ ಸಹಭಾಗಿತ್ವ ನಮ್ಮ ಜಿಲ್ಲೆಗೆ ಬೇಡವೇ ಬೇಡ ಎಂದು ಒತ್ತಾಯಿಸಿದರು.

ಶಿವಬಾಳಮ್ಮ ಕೊಂಡಗೂಳಿ ಮಾತನಾಡಿ, ಸರ್ಕಾರವು ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಹುನ್ನಾರದಲ್ಲಿದೆ. ಪಿಪಿಪಿ ಹೆಸರಲ್ಲಿ ಜಿಲ್ಲಾಸ್ಪತ್ರೆಯನ್ನು ಅಪಹರಿಸುವುದನ್ನು ಇಡೀ ಜಿಲ್ಲೆಯ ಜನತೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ADVERTISEMENT

ಜಮಖಂಡಿಯ ಹಿರಿಯ ವಕೀಲ ನಿಂಗಪ್ಪ ಎಸ್. ದೇವರವರ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಜಿಲ್ಲೆಯ ಜನತೆಯ ಹೋರಾಟ ನ್ಯಾಯಯುತವಾಗಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಳಗದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಬಹುತೇಕರು ಬಡವರಿದ್ದಾರೆ. ಅವರ ಮಕ್ಕಳಿಗೂ ಕೂಡ ವೈದ್ಯಕೀಯ ಶಿಕ್ಷಣ ದೊರಕುವಂತಾಗಬೇಕು, ಹೋರಾಟ ನ್ಯಾಯಯುತವಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದರು. 

ಧರಣಿಯಲ್ಲಿ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಮಲ್ಲಿಕಾರ್ಜುನ ಕೆಂಗನಾಳ, ಭರತಕುಮಾರ ಎಚ್ ಟಿ, ಸುರೇಶ್ ಬಿಜಾಪುರ, ಜಯದೇವ ಸೂರ್ಯವಂಶಿ, ಬಾಬುರಾವ್‌ ಬೀರಕಬ್ಬಿ, ಅಕ್ರಂ ಮಾಶ್ಯಾಳಕರ, ನಾಸಿರ್, ಮಲ್ಲಿಕಾರ್ಜುನ ಕೆಂಗನಾಳ, ವಿದ್ಯಾವತಿ ಅಂಕಲಗಿ, ಸಂಗಮೇಶ ಸಗರ, ಪ್ರಭುಗೌಡ ಪಾಟೀಲ,  ಸಿದ್ರಾಮಯ್ಯ ಹಿರೇಮಠ, ಅಪ್ಪಸಾಹೇಬ ಯರನಾಳ, ಶ್ರೀನಾಥ ಪೂಜಾರಿ, ಬೋಗೇಶ್ ಸೋಲಾಪುರ, ಲಕ್ಷ್ಮೀಬಾಯಿ, ಕಸ್ತೂರಿ ದೊಡ್ಡಮನಿ, ಪೂಜಾ ಜೋಮಿವಾಲೇ, ಕಾಮಿನಿ ಕಸಬ, ದಸ್ತಗಿರಿ ಉಕ್ಕಲಿ, ಮೀನಾಕ್ಷಿ ಸಿಂಗೆ, ಗೀತಾ ಎಚ್, ನೀಲಾಂಬಿಕಾ ಬಿರಾದರ, ಬಸವರಾಜ ಹೂಗರ,ಫಯಾಜ ಕಲಾದಗಿ, ಸುರೇಶ್ ಜೀಬಿ, ರೇಣುಕಾ ಕೋಟ್ಯಾಳ ಮುಂತಾದವರು ಭಾಗವಹಿಸಿದ್ದರು.

ನಮ್ಮ ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ಹೆಣ್ಣು ಮಕ್ಕಳಿಗೂ ಆರೋಗ್ಯ ದೊರಕುವಂತಾಗಬೇಕು. ಅದಕ್ಕಾಗಿ ನಮ್ಮ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಅವಶ್ಯಕತೆ ಇದೆ -ಶಿವಬಾಳಮ್ಮ ಕೊಂಡಗೂಳಿ ವಿಜಯಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.