
ವಿಜಯಪುರ: ಜ.9 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಲಿದ್ದು, ಇದೇ ವೇಳೆಯಲ್ಲಿ ರಾಣಿ ಚನ್ನಮ್ಮ ನಾಟ್ಯ ಮಂದಿರ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ನಾಟ್ಯ ಮಂದಿರ ಸ್ಥಾಪನಾ ಹೋರಾಟ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ಟರ್ ಮಾತನಾಡಿ, ‘ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ರಾಣಿ ಚೆನ್ನಮ್ಮ ನಾಟ್ಯ ಮಂದಿರವನ್ನು ಕಳೆದ 10 ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಿ ನೂತನ ರಂಗಮಂದಿರ ನಿರ್ಮಿಸಲು ಹಳೆಯ ರಂಗ ಮಂದಿರವನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿದ್ದರು. ಆದರೆ ಈವರೆಗೂ ಕಾಮಗಾರಿ ನಡೆಸದೆ ಹಾಗೇ ಬಿಟ್ಟಿರುವುದು ಕಲಾವಿದರಲ್ಲಿ ತೀವ್ರ ನೋವುಂಟು ಮಾಡಿದೆ. ರಾಜ್ಯದಲ್ಲಿ ಕೇವಲ ಎರಡೇ ಈ ರೀತಿಯ ನಾಟ್ಯ ಮಂದಿರಗಳಿವೆ, ಈ ನಾಟ್ಯ ಮಂದಿರದಲ್ಲಿ ತನ್ನದೇ ಆದ ವೈಭವಯುತ ಇತಿಹಾಸವಿದೆ, ಹೀಗಾಗಿ ಕೂಡಲೇ ಕಾಮಗಾರಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.
ಕೇಂದ್ರ ಬಸ್ ನಿಲ್ದಾಣದ ಮುಂದೆ ರಾಣಿ ಚೆನ್ನಮ್ಮವರ ವೃತ್ತ ಉದ್ಘಾಟನೆ, ಬಸ್ ನಿಲ್ದಾಣಕ್ಕೆ ನಾಮಕರಣ ಹಾಗೂ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದು, ಇದೇ ವೇಳೆಗೆ ನಾಟ್ಯ ಮಂದಿರ ನಿರ್ಮಾಣ ಕಾರ್ಯಕ್ಕೂ ಭೂಮಿ ಪೂಜೆ ನೆರವೇರಿಸಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಲಾಯಪ್ಪ ಇಂಗಳೆ ಮಾತನಾಡಿ, ‘ಸ್ವಾತಂತ್ರ್ಯ ಚಳವಳಿಗೆ ಪ್ರೇರಣಾ ಶಕ್ತಿಯಾಗಿ, ರಾಣಿ ಚೆನ್ನಮ್ಮ ನಾಟ್ಯ ಮಂದಿರವನ್ನು ಅಭಿವೃದ್ಧಿಯ ವಿಷಯದಲ್ಲಿ ತೆರವುಗೊಳಿಸಿರುವುದು ನೋವಿನ ಸಂಗತಿ. ಬಡ ಕಲಾವಿದರ ಹಿತ ಕಾಯುವುದು ಸರ್ಕಾರದ ಆದ್ಯ ಕರ್ತವ್ಯ’ ಎಂದರು.
ಹೋರಾಟಗಾರರಾದ ವಿನೋದ ಖೇಡ, ಭೋಗೇಶ ಸೋಲಾಪೂರ, ಅನೀಲ ಇಕ್ಕಡೆ, ಮಲ್ಲಿಕಾರ್ಜುನ ಬಟಗಿ, ಲಿಂಗರಾಜ ಬಿದರಕುಂದಿ, ಲಕ್ಷ್ಮಣ ಕಂಬಾಗಿ, ಗಿರೀಶ ಕಲಘಟಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.