ADVERTISEMENT

ವಿಜಯಪುರಕ್ಕೆ ಒಲಿವುದೇ ಸಚಿವ ‘ಭಾಗ್ಯ’: ಗೂಟದ ಕಾರು ಯಾರು ಪಾಲು?

ಯತ್ನಾಳ, ನಡಹಳ್ಳಿ, ಸಾಸನೂರು, ಶಹಾಪೂರ

ಬಸವರಾಜ ಸಂಪಳ್ಳಿ
Published 27 ಜುಲೈ 2021, 19:30 IST
Last Updated 27 ಜುಲೈ 2021, 19:30 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿ ಆಯ್ಕೆ, ಸಚಿವ ಸಂಪುಟ ರಚನೆ ಕಸರತ್ತು ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ವರಿಷ್ಠರು ನಡೆಸಿರುವ ಬೆನ್ನಲೇ ವಿಜಯಪುರಕ್ಕೆ ಈ ಬಾರಿಯಾದರೂ ಸಚಿವ ಸ್ಥಾನದ ಭಾಗ್ಯ ಒಲಿಯುವುದೇ ಎಂಬ ಕುತೂಹಲ ಹೆಚ್ಚಿದೆ.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮತ್ತು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹಾಗೂ ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಅವರಲ್ಲಿ ಯಾರಾದರೊಬ್ಬರು ಸಚಿವರಾಗುವ ಸಾಧ್ಯತೆ ಇದೆ ದಟ್ಟವಾಗಿದೆ.

ಯಡಿಯೂರಪ್ಪ ಅವಧಿಯಲ್ಲಿ ಜಿಲ್ಲೆಯ ಯಾರೊಬ್ಬರಿಗೂ ಸಚಿವ ಸಂಪುಟದಲ್ಲಿ ಅವಕಾಶ ನೀಡದೇ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿತ್ತು. ಅನ್ಯ ಜಿಲ್ಲೆಯವರಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ ವಹಿಸಲಾಗಿತ್ತು. ಅವರು ಹುಣ್ಣಿಮೆಗೆ, ಅವಮಾಸ್ಯೆಗೆ ಒಮ್ಮೆ ಕಾಟಾಚಾರಕ್ಕೆ ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಇದರಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹಿನ್ನೆಡೆಯಾಗಿತ್ತು. ಅಲ್ಲದೇ, ಜನರ ಸಂಕಷ್ಟಕ್ಕೆ ಯಾವುದೇ ಸ್ಪಂದನೆ ಇಲ್ಲದ ಬಿಜೆಪಿ ಸರ್ಕಾರದ ಬಗ್ಗೆ ಜಿಲ್ಲೆಯ ಮತದಾರರೂ ಬೇಸತ್ತು ಹೋಗಿದ್ದಾರೆ.

ADVERTISEMENT

ಶೀಘ್ರದಲ್ಲೇ ಎದುರಾಗಲಿರುವ ಸಿಂದಗಿ ಉಪ ಚುನಾವಣೆ, ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಏಟು ಬೀಳುವ ಸಾಧ್ಯತೆ ಇದೆ. ಅಷ್ಟರೊಳಗೆ ನೂತನ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಲಭಿಸಿ, ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದುವುದು ಬಿಜೆಪಿಗರ ಮಾತು.

ಅಲ್ಲದೇ, ಘಟಾನುಘಟಿ ಕಾಂಗ್ರೆಸ್‌ ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲ ಅವರು ಜಿಲ್ಲೆಯಲ್ಲಿ ಪ್ರಬಲರಾಗಿದ್ದಾರೆ. ಇವರ ಎದುರು ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲಪಡಿಸಬೇಕೆಂದರೆ ಅಗತ್ಯವಾಗಿ ಸಚಿವ ಸ್ಥಾನ ಬೇಕೇಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಯತ್ನಾಳ ಲೆಕ್ಕಾಚಾರ: ಕಳೆದ ಒಂದು ವರ್ಷದಿಂದ ದಿನಬೆಳಗಾದರೆ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದ ಹಾಗೂ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಮುಖ್ಯ ಪಾತ್ರ ವಹಿಸಿರುವ ‌ಬಸನಗೌಡ ಪಾಟೀಲ ಅವರಿಗೆ ಡಿಸಿಎಂ ಅಥವಾ ಪ್ರಮುಖವಾದ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಇದೆ ಎಂಬುದು ಅವರ ಬೆಂಬಲಿಗರ ಲೆಕ್ಕಾಚಾರವಾಗಿದೆ.

ಯತ್ನಾಳ ಅವರಿಗೆ ಸೂಕ್ತ ಹುದ್ದೆ ದೊರೆಯದೇ ಇದ್ದರೆ ಅವರು ಸುಮ್ಮನೇ ಕೂರುವುದಿಲ್ಲ. ಸರ್ಕಾರ ಸುಗಮವಾಗಿ ನಡೆಯಲು ಬಿಡುವುದಿಲ್ಲ ಎಂಬ ಅಂಜಿಕೆ ಬಿಜೆಪಿ ವರಿಷ್ಠರಿಗೆ ಇರುವುದರಿಂದ ಸಚಿವ ಸ್ಥಾನ ಖಚಿತ ಎನ್ನಲಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯತ್ನಾಳ ಅವರ ಬೆಂಬಲಿಗ ರಾಘವ ಅಣ್ಣಿಗೇರಿ, ‘ಭ್ರಷ್ಟಾಚಾರದಲ್ಲಿ ತೊಡಗಿರುವ ಯಡಿಯೂರಪ್ಪ ಮತ್ತು ಅವರ ಪುತ್ರ ರಾಘವೇಂದ್ರ ಅವರನ್ನು ಕೆಳಗಿಳಿಸಬೇಕು ಎಂಬುದು ಯತ್ನಾಳ ಅವರ ಒಂದಂಶದ ಕಾರ್ಯಕ್ರಮವಾಗಿತ್ತು. ಅದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನೂತನ ಸರ್ಕಾರದಲ್ಲಿ ಅವರು ಯಾವುದೇ ಸ್ಥಾನಮಾನವನ್ನು ಬಯಸಿಲ್ಲ ಎನ್ನುತ್ತಾರೆ.

ಯತ್ನಾಳ ಅವರನ್ನು ಸಚಿವರನ್ನಾಗಿ ಮಾಡುವುದು ಅಥವಾ ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಆದರೆ, ನಗರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಬೇಕು ಎಂಬುದು ಅವರ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇನ್ನೊಬ್ಬ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ ಎಂಬ ಮಾತು ಗಟ್ಟಿಯಾಗಿ ಕೇಳಿಬರುತ್ತಿದೆ.

ಯತ್ನಾಳ ಅಥವಾ ನಡಹಳ್ಳಿ ಹೊರತು ಪಡಿಸಿದರೆ ಸೌಮ್ಯ ಸ್ವಭಾವದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹಾಗೂ ಸಂಘ–ಪರಿವಾರದ ನಿಷ್ಠಾವಂತರಾದ ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ ಅವರಲ್ಲಿ ಯಾರನ್ನಾದರೂ ಸಚಿವ ಸ್ಥಾನಕ್ಕೆ ಪರಿಗಣಿಸಬಹುದೇ ಎಂಬ ಚರ್ಚೆಯೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.