ತೊಗರಿ
ವಿಜಯಪುರ: ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ತೊಗರಿ ಬೆಳೆ ಹಾನಿಗೀಡಾಗಿದೆ. ಇದರಿಂದ ಕಂಗಾಲಾಗಿರುವ ರೈತರಿಗೆ ದಿನದಿಂದ ದಿನಕ್ಕೆ ಧಾರಣೆ ಕುಸಿಯುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ಕ್ವಿಂಟಲ್ ತೊಗರಿಗೆ ಕನಿಷ್ಠ ₹10 ಸಾವಿರದಿಂದ ಗರಿಷ್ಠ ₹12 ಸಾವಿರದವರೆಗೆ ದರವಿತ್ತು. ಈಗ ₹6,500ದಿಂದ ₹7,400ಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಈ ಬಾರಿ 5.34 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ವಿವಿಧ ಕಾರಣಗಳಿಂದ ಇಳುವರಿ ಕುಂಠಿತಗೊಂಡಿದೆ. ಕೆಲವು ರೈತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ದರ ಕಡಿಮೆಯಾಗುತ್ತಿರುವುದು ಅವರಲ್ಲಿ ಆತಂಕ ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 55 ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ರಾಜ್ಯ ಸರ್ಕಾರವು ಸೂಚಿಸಿತ್ತು. ಆದರೆ, ಈವರೆಗೂ ರೈತರ ಹೆಸರು ನೋಂದಣಿಯೇ ಆರಂಭವಾಗಿಲ್ಲ. ಇನ್ನು ಖರೀದಿ ಆರಂಭಿಸುವುದು ಯಾವಾಗ? ಎಂದು ರೈತ ಮುಖಂಡರು ಪ್ರಶ್ನಿಸುತ್ತಾರೆ.
‘ಜಿಲ್ಲೆಯಲ್ಲಿ ತೊಗರಿ ಕಟಾವು ಮುಗಿದರೂ ಖರೀದಿ ಕೇಂದ್ರಗಳು ಆರಂಭವಾಗಿಲ್ಲ. ಹಾಗಾಗಿ, ರೈತರು ಸಿಕ್ಕಷ್ಟು ದರಕ್ಕೆ ವರ್ತಕರು, ದಲ್ಲಾಳಿಗಳಿಗೆ ತೊಗರಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರವು ನೆಪ ಮಾತ್ರಕ್ಕೆ ಖರೀದಿ ಕೇಂದ್ರ ತೆರೆಯುವುದಾಗಿ ಘೋಷಿಸಿದರೆ ಸಾಲದು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು. ಬೆಂಬಲ ಬೆಲೆ ಹೆಚ್ಚಿಸಿ ಶೀಘ್ರವೇ ಖರೀದಿ ಆರಂಭಿಸಬೇಕು’ ಎಂದು ಒತ್ತಾಯಿಸುತ್ತಾರೆ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.