ADVERTISEMENT

ವಿಜಯಪುರ: ಬಾಯಾರಿದ ದ್ಯಾಬೇರಿ, ನೀರಿಗೆ ಪರದಾಟ

ವಾರದಿಂದ ನೀರು ಪೂರೈಕೆ ಸ್ಥಗಿತ; ಕೆರೆ ನೀರು ರೈತರ ಹೊಲಕ್ಕೆ

ಬಸವರಾಜ ಸಂಪಳ್ಳಿ
Published 10 ಏಪ್ರಿಲ್ 2020, 19:30 IST
Last Updated 10 ಏಪ್ರಿಲ್ 2020, 19:30 IST
ವಿಜಯಪುರ ತಾಲ್ಲೂಕಿನ ದ್ಯಾಬೇರಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕೆರೆ ನೀರನ್ನು ರೈತರು  ಮಷಿನ್‌ ಮೂಲಕ ಹೊಲಕ್ಕೆ ಹರಿಸುತ್ತಿರುವ ದೃಶ್ಯ
ವಿಜಯಪುರ ತಾಲ್ಲೂಕಿನ ದ್ಯಾಬೇರಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕೆರೆ ನೀರನ್ನು ರೈತರು  ಮಷಿನ್‌ ಮೂಲಕ ಹೊಲಕ್ಕೆ ಹರಿಸುತ್ತಿರುವ ದೃಶ್ಯ   

ವಿಜಯಪುರ: ತಾಲ್ಲೂಕಿನ ದ್ಯಾಬೇರಿ ಗ್ರಾಮಕ್ಕೆ ಒಂದು ವಾರದಿಂದ ಕುಡಿಯುವ ನೀರು ಪೂರೈಕೆಯಾಗದೇ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಕೊರೊನಾ ಸೋಂಕಿನ ಭಯದ ನಡುವೆ ಕುಡಿಯುವ ನೀರಿಗಾಗಿ ಜನರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಕೆರೆಯಲ್ಲಿ ಸಾಕಷ್ಟು ನೀರಿದ್ದರೂ ಸಹ ಕೆರೆಯಿಂದ ಊರಿನ ಬಾವಿಗೆ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯ್ತಿ ಪಿಡಿಒ ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥ ಶಿವಾನಂದ ಮೇಳಕುಂದಿ.

ADVERTISEMENT

ಕೆರೆ ತುಂಬುವ ಯೋಜನೆಯಡಿ ಕೃಷ್ಣಾ ನದಿಯಿಂದ ಕಳೆದ ಬಾರಿ ದ್ಯಾಬೇರಿ ಕೆರೆಯನ್ನು ತುಂಬಿಸಲಾಗಿತ್ತು. ಈ ಕೆರೆ ನೀರನ್ನು ಸಾರ್ವಜನಿಕರಿಗಾಗಿ ಊರಿನಲ್ಲಿರುವ ಬಾವಿಗೆ ತುಂಬಿಸಲಾಗುತ್ತಿತ್ತು. ಗ್ರಾಮದ ಅರ್ಧ ಭಾಗಕ್ಕೆ ಒಂದು ದಿನ, ಇನ್ನರ್ಥ ಭಾಗಕ್ಕೆ ಮರುದಿನದಂತೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಆದರೆ, ಈಗ ಕೆರೆ ನೀರನ್ನು ಪೂರೈಕೆ ಮಾಡದೇ ಇರುವುದರಿಂದ ಬೇಸಿಗೆಯಲ್ಲಿ ಜನರು ಪರದಾಡುವಂತಾಗಿದೆ ಎಂದು ಆರೋಪಿಸಿದರು.

ನೀರು ಪೂರೈಸುವಂತೆ ಅಧಿಕಾರಿಗಳನ್ನು ಕೇಳಿದರೆಕೆರೆಯಲ್ಲಿ ನೀರಿಲ್ಲ ಎಂದು ಸಬೂಬು ಹೇಳುತ್ತಾರೆ. ಸದ್ಯ ಕೆರೆಯಲ್ಲಿ ಸಾಕಷ್ಟು ನೀರಿದೆ. ರೈತರು 60ಕ್ಕೂ ಹೆಚ್ಚು ಪಂಪ್‌ಸೆಟ್‌ ಅಳವಡಿಸಿಕೊಂಡು ತಮ್ಮ ಹೊಲ, ತೋಟಕ್ಕೆ ಕೆರೆ ನೀರನ್ನು ಹಾಯಿಸಿಕೊಳ್ಳುತ್ತಿದ್ದಾರೆ. ಆದರೆ, ಕುಡಿಯಲು ಮಾತ್ರ ಇಲ್ಲದಂತಾಗಿದೆ ಎಂದು ಅವರು ದೂರಿದರು.

ಗ್ರಾಮದ ಪ್ರಾಥಮಿಕ ಶಾಲೆ ಬಳಿ ಇರುವ ಸಾರ್ವಜನಿಕ ಕೊಳವೆಬಾವಿಯಿಂದಲೇ ಸದ್ಯ ಜನರು ಕುಡಿಯಲು ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಈ ನೀರು ಸವಳು ಇರುವುದರಿಂದ ಕುಡಿಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಅನುಕೂಲಸ್ಥರು ತಮ್ಮ ಕೊಳವೆಬಾವಿ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಬಡವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಗ್ರಾಮದ ಜನರಿಗೆ ಕುಡಿಯುವ ನೀರಿಗಾಗಿ ಕೆರೆಯನ್ನು ತುಂಬಿಸಲಾಗಿದೆ. ಆದರೆ, ಈಗ ಈ ನೀರನ್ನು ಕೃಷಿಗೆ ಬಳಸಿಕೊಳ್ಳುತ್ತಿರುವುದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ದೂರಿದರು.

ಆರಂಭವಾಗದ ಶುದ್ಧ ನೀರಿನ ಘಟಕ:ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಎರಡು ಶುದ್ಧ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ, ಇದುವರೆಗೂ ಅದರಲ್ಲಿ ನೀರು ಬಂದಿಲ್ಲ. ಎರಡೂ ಘಟಕಗಳು ಪಾಳು ಬಿದ್ದಿವೆ. ಎಸ್‌ಸಿ ಓಣಿಯಲ್ಲಿ ಇರುವ ಇನ್ನೊಂದು ಶುದ್ಧ ನೀರಿನ ಘಟಕವನ್ನು ಇತ್ತೀಚೆಗೆ ಆರಂಭಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.