ADVERTISEMENT

ಸಿಂದಗಿ: 55 ಕೆ.ಜಿ ಗೋಧಿ ಮೂಟೆ ಹೊತ್ತು ಅಯೋಧ್ಯೆ ರಾಮಮಂದಿರಕ್ಕೆ ನಡಿಗೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 4:30 IST
Last Updated 4 ಜನವರಿ 2026, 4:30 IST
ವಿಜಯಪುರ ಜಿಲ್ಲೆ ಸಿಂದಗಿ ಸಮೀಪದ ಬಳಗಾನೂರ ಗ್ರಾಮದ ಯುವಕ ಕೇದಾರಲಿಂಗ ಕುಂಬಾರ ಶನಿವಾರ 55 ಕೆ.ಜಿ ತೂಕದ ಗೋಧಿ ಮೂಟೆ ಹೊತ್ತು ಉತ್ತರಪ್ರದೇಶದ ಅಯೋಧ್ಯೆಗೆ  ಪಾದಯಾತ್ರೆ ಪ್ರಾರಂಭಿಸಿದರು
ವಿಜಯಪುರ ಜಿಲ್ಲೆ ಸಿಂದಗಿ ಸಮೀಪದ ಬಳಗಾನೂರ ಗ್ರಾಮದ ಯುವಕ ಕೇದಾರಲಿಂಗ ಕುಂಬಾರ ಶನಿವಾರ 55 ಕೆ.ಜಿ ತೂಕದ ಗೋಧಿ ಮೂಟೆ ಹೊತ್ತು ಉತ್ತರಪ್ರದೇಶದ ಅಯೋಧ್ಯೆಗೆ  ಪಾದಯಾತ್ರೆ ಪ್ರಾರಂಭಿಸಿದರು   

ಸಿಂದಗಿ (ವಿಜಯಪುರ ಜಿಲ್ಲೆ):  ಬಳಗಾನೂರ ಗ್ರಾಮದ ಕೇದಾರಲಿಂಗ ಕುಂಬಾರ 55 ಕೆಜಿ ತೂಕದ ಗೋಧಿ ಮೂಟೆ ತಲೆಯ ಮೇಲೆ ಹೊತ್ತುಕೊಂಡ ದೂರದ ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರವರೆಗೆ ಕಾಲ್ನಡಿಗೆ ಶನಿವಾರ ಪ್ರಾರಂಭಿಸಿದರು.

ಗ್ರಾಮಸ್ಥರು ಯುವಕನಿಗೆ ಗೌರವಿಸಿ ವಾದ್ಯ ವೈಭವದೊಂದಿಗೆ ರಾಮನಹಳ್ಳಿ ವರೆಗೆ ಬೀಳ್ಕೊಟ್ಟರು. ಬಳಗಾನೂರ ಗ್ರಾಮದ ಸಮಸ್ತ ನಾಗರಿಕರಿಗೆ ಒಳ್ಳೆಯದಾಗಲಿ, ಗೋಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂಬ ಸಂದೇಶದೊಂದಿಗೆ ಕಾಲ್ನಡಿಗೆ ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.

ಪ್ರತಿದಿನ 40-50 ಕಿ.ಮೀ ವರೆಗೆ ಪಾದಯಾತ್ರೆ ಹೊರಟು ಅಲ್ಲಿ ವಾಸ್ತವ್ಯ ಮಾಡಿ ಮತ್ತೆ ಕಾಲ್ನಡಿಗೆ ಹೊರಡುವರು. ಇವರ ಜೊತೆ ನೂರ ನದಾಫ್‌ ಎಂಬ ಮುಸ್ಲಿಂ ವ್ಯಕ್ತಿ ಕರ್ನಾಟಕ ಗಡಿ ದಾಟುವವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

ADVERTISEMENT

ವಿವೇಕ ಕುಂಬಾರ ಎಂಬ ಯುವಕ ಬೈಕ್ ತೆಗೆದುಕೊಂಡು ಪಾದಯಾತ್ರಿಗೆ ನೀರು, ಊಟದ ವ್ಯವಸ್ಥೆ ಮಾಡುವದಕ್ಕಾಗಿ ಹೊರಟಿದ್ದಾರೆ.

ಬಳಗಾನೂರ ಗ್ರಾಮದಿಂದ 55 ಕೆ.ಜಿ ತೂಕದ ಗೋದಿ ತುಂಬಿದ ಮೂಟೆ ಹೊತ್ತು ಅಯೋಧ್ಯೆಗೆ ಕಾಲ್ನಡಿಗೆ ಪಾದಯಾತ್ರೆ ಹೊರಟ ಯುವಕ ಕೇದಾರಲಿಂಗ ಕುಂಬಾರ ಅವರಿಗೆ ಶನಿವಾರ ಯುವಕರು ಬೀಳ್ಕೊಟ್ಟರು.

ಕೇದಾರಲಿಂಗ ಕುಂಬಾರ ಈ ಮೊದಲು ಆಂಧ್ರ ಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಇದೇ ರೀತಿ ಮೂಟೆ ಹೊತ್ತು 12 ದಿನಗಳ ಕಾಲ್ನಡಿಗೆ ಎರಡು ಬಾರಿ, ಹುಲಜಂತಿ ಸುಕ್ಷೇತ್ರಕ್ಕೆ ಪಾದಯಾತ್ರೆ ಮಾಡಿದ್ದಾರೆ.

‘ಪಾದಯಾತ್ರೆ ಆರಂಭಿಸುವ  ಮುನ್ನ ಹಲವು ದಿನಗಳು ಗೋಧಿ ಮೂಟೆ ಹೊತ್ತು ನಿತ್ಯ ಸಂಜೆ ಬಳಗಾನೂರದಿಂದ ಕೋರಳ್ಳಿ ಗ್ರಾಮದವರೆಗೆ ನಡೆದು ರೂಢಿ ಮಾಡಿಕೊಂಡಿದ್ದಾರೆ’ ಎಂದು ಗ್ರಾಮದ ಅನಿಲ್ ಸುರಗಿಹಳ್ಳಿ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.