ADVERTISEMENT

ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ

ಚಡಚಣ-ಶಿರಾಡೋಣ ರಸ್ತೆ ದುರಸ್ಥಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 15:35 IST
Last Updated 26 ನವೆಂಬರ್ 2022, 15:35 IST
ಚಡಚಣದಿಂದ  ಶಿರಾಡೋಣ ಗ್ರಾಮದ ವರೆಗಿನ  ಸಂಪೂರ್ಣ ಹದಗೆಟ್ಟ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಶಿರಾಡೋಣ ಗ್ರಾಮಸ್ಥರು ಶನಿವಾರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು
ಚಡಚಣದಿಂದ  ಶಿರಾಡೋಣ ಗ್ರಾಮದ ವರೆಗಿನ  ಸಂಪೂರ್ಣ ಹದಗೆಟ್ಟ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಶಿರಾಡೋಣ ಗ್ರಾಮಸ್ಥರು ಶನಿವಾರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು   

ಚಡಚಣ: ಪಟ್ಟಣದಿಂದ ಶಿರಾಡೋಣ ಗ್ರಾಮದ ವರೆಗಿನ ಸುಮಾರು 10 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ರಸ್ತೆ ದುರಸ್ಥಿಗೊಳಿಸುವಂತೆ ಆಗ್ರಹಿಸಿ ಶನಿವಾರ ಶಿರಾಡೋಣ ಗ್ರಾಮಸ್ಥರು ಸುಮಾರು 4 ಗಂಟೆ ರಾಜ್ಯ ಹೆದ್ದಾರಿ ಸಂಖ್ಯೆ 41 ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮುಖಂಡ ಎಂ.ಡಿ.ಹತ್ತರಕಿ ಮಾತನಾಡಿ, ಶಿರಾಡೋಣದಿಂದ ಚಡಚಣದ ವರೆಗಿನ ರಾಜ್ಯ ಹೆದ್ದಾರಿ ಸುಮಾರು 10 ವರ್ಷಗಳಿಂದ ಡಾಂಬರ್‌ ಕಂಡಿಲ್ಲ.ಹೀಗಾಗಿ ಈ ಹೆದ್ದಾರಿ ಸಂಪೂರ್ಣ ಕಿತ್ತು ಹೋಗಿದೆ. ನಿತ್ಯ ಅಫಘಾತಗಳು ಸಂಭವಿಸುತ್ತಿವೆ. ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಭಾಗದ ಶಾಸಕರಿಗೂ, ಸಂಸದರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಡಾಂಬರೀಕರಣಗೊಳ್ಳದಿದ್ದರೆ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲಾಗುವದು ಎಂದರು.

ಕಾಮಗಾರಿ ಆರಂಭಗೊಳ್ಳುವ ವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಮಾಜಿ ಶಾಸಕ ವಿಠ್ಠಲ ಕಟಕಧೊಂಡ, ಗ್ರಾಮದ ಮುಖಂಡರಾದ ರೇವಪ್ಪ ಹಬಗೊಂಡೆ, ಬೀರು ಸೋಲಂಕರ, ಭಿಮಾಶಂಕರ ಪೂಜಾರಿ, ಸಿದ್ದಾರಾಮ ಬಿರಾದಾರ, ಹಣಮಂತ ಬನಸೋಡೆ, ಸವಿತಾ ಬಿರಾದಾರ ಮಾತನಾಡಿದರು.

ರಾಜ್ಯದ ಗಡಿ ಅಂಚಿನಲ್ಲಿರುವ ಶಿರಾಡೋಣ ಗ್ರಾಮದ ಮೂಲಕ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹದಗೆಟ್ಟ ರಸ್ತೆಯಿಂದ ರಾಜ್ಯ ಸಾರಿಗೆ ಬಸ್‌ಗಳನ್ನು ಕಡಿಮೆಗೊಳಿಸಲಾಗಿದೆ. ವ್ಯಾಪಾರ ವಹಿವಾಟಿಗಾಗಿ ಮಹಾರಾಷ್ಟ್ರದ ಪಟ್ಟಣಗಳಿಗೆ ಹೋಗುವುದು ಅನಿವಾರ್ಯವಾಗಿದೆ. ರಾಜ್ಯದ ಸಂಪರ್ಕವೇ ಕಡಿದುಕೊಂಡತಾಗಿದೆ. ತಕ್ಷಣ ರಸ್ತೆ ನಿರ್ಮಾಣದ ಕಾಮಗಾರಿ ಆರಂಭಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ರಸ್ತೆ ಡಾಂಬರೀಕರಣಕ್ಕೆ ಸರ್ಕಾರ ಕಳೆದ ಎರಡು ದಿನಗಳ ಹಿಂದೆ ಮಂಜೂರಾತಿ ನೀಡಿದೆ. ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಸ್ಥಳಕ್ಕಾಗಮಿಸಿದ ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌, ದಯಾನಂದ ಮಠ, ರಸ್ತೆ ಡಾಂಬರಿಕರಣಕ್ಕೆ ಸರ್ಕಾರ ನೀಡಿದ ಮಂಜೂರಾತಿ ಪತ್ರವನ್ನು ಪ್ರತಿಭಟನಾಕಾರರಿಗೆ ತೋರಿಸಿದರು. ನಾಳೆಯಿಂದಲೇ ಗುಂಡಿ ಮುಚ್ಚುವ ಕೆಲಸ ಆರಂಭಗೊಳ್ಳಲಿದೆ ಎಂದರು. ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.

ಅಧಿಕಾರಿಗಳು ಹಾಗೂ ಸಂಸದ ಮಾತಿಗೆ ಬೆಲೆಕೊಟ್ಟು, ಈ ತಿಂಗಳೊಳಗೆ ಕಾಮಗಾರಿ ಆರಂಭಗೊಳ್ಳದಿದ್ದರೆ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳುವ ಷರತ್ತಿನೊಂದಿಗೆ ಪ್ರತಿಭಟನಾಕಾರು ಪ್ರತಿಭಟನೆ ಹಿಂದಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಾವಿರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.