ADVERTISEMENT

ವಿಜಯಪುರ| ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:21 IST
Last Updated 1 ಫೆಬ್ರುವರಿ 2026, 4:21 IST
ವಿಜಯಪುರದಲ್ಲಿ ಬಿಜೆಪಿ ನಗರ ಘಟಕದ ಪದಾಧಿಕಾರಿಗಳು ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು 
ವಿಜಯಪುರದಲ್ಲಿ ಬಿಜೆಪಿ ನಗರ ಘಟಕದ ಪದಾಧಿಕಾರಿಗಳು ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು    

ವಿಜಯಪುರ: ವಿಜಯಪುರ ನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಪ್ರತಿ ಮನೆ -ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ನಡೆಸುವಂತೆ ನಿಯೋಜಿತ ಬೂತ್ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಚುನಾವಣೆ ಹಾಗೂ ಮತದಾನ ಪ್ರಜಾಪ್ರಭುತ್ವದ ಮಹತ್ವದ ಅಂಶ, ಮತದಾನದ ಹಕ್ಕನ್ನು ಖಾತ್ರಿಪಡಿಸುವ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಕಾರ್ಯ ಅತ್ಯಂತ ಮಹತ್ವ ಹಾಗೂ ಜವಾಬ್ದಾರಿಯುತ ಕಾರ್ಯವಾಗಿದೆ, ಈಗ ಸರ್ಚ್, ಐಡೆಂಟಿಟಿ ಹಾಗೂ ಮ್ಯಾಪಿಂಗ್ ಹೆಸರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಾ ಆರಂಭಗೊಂಡಿದೆ. ಆದರೆ, ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಬಿಎಲ್‌ಓಗಳು ವಿವಿಧ ಬಡಾವಣೆಗಳ ಪ್ರತಿ ಮನೆ-ಮನೆಗೂ ಭೇಟಿ ನೀಡುತ್ತಿಲ್ಲ ಎಂದು ಹೇಳಿದರು.

ADVERTISEMENT

ಪ್ರತಿ ಮನೆಗೂ ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಣೆ, ಪರಿಷ್ಕರಣೆ ಮಾಡಬೇಕು ಎಂಬ ಸ್ಪಷ್ಟ ನಿರ್ದೇಶನವಿದೆ. ಈ ಕಾರ್ಯ ಸಮರ್ಪಕವಾಗಿ ನಡೆದಾಗ ಮಾತ್ರ ಮತದಾನ ಪಟ್ಟಿ ಪರಿಷ್ಕರಣೆಯ ಕಾರ್ಯ ಸಾಧ್ಯವಾಗುತ್ತದೆ, ಈ ಕಾರ್ಯಕ್ಕೆ ಆದ್ಯತೆ ನೀಡದೇ ಹೋದರೆ ಮತದಾರರ ಪಟ್ಟಿಯಲ್ಲಿ ದೋಷಗಳು ನುಸುಳುವ ಸಾಧ್ಯತೆ ದಟ್ಟವಾಗಿರುತ್ತವೆ, ಹೀಗಾಗಿ ಇದಕ್ಕೆ ಅವಕಾಶ ಕೊಡಬೇಡಿ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಈ ಪ್ರಕ್ರಿಯೆ ವಿವಿಧ ರಾಜಕೀಯ ಪಕ್ಷಗಳ ಸಮಕ್ಷಮದಲ್ಲಿಯೂ ನಡೆಯಬೇಕಾಗಿರುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿಜಯಪುರ ನಗರದಲ್ಲಿ ಬಿಎಲ್‌ಓ ಹಾಗೂ ಬಿಎಲ್‌ಎಗಳು ಪ್ರತಿ ಮನೆ-ಮನೆಗೂ ಭೇಟಿ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಈ ಪರಿಷ್ಕರಣೆ ಕಾರ್ಯಕ್ಕೆ ಮಹಾನಗರ ಪಾಲಿಕೆ ಬಿಲ್ ಕಲೆಕ್ಟರ್ ನಿಯೋಜಿಸಲಾಗಿದೆ,  ಮಾರ್ಚ್ ತಿಂಗಳು ಸಮೀಪಿಸುತ್ತಿದ್ದು, ಎರಡು ಕೆಲಸಗಳ ಒತ್ತಡದಿಂದ ಈ ನೌಕರರು ಬಳಲುವಂತಾಗಿದೆ, ಬೇರೆ ಯಾವ ಜಿಲ್ಲೆಯಲ್ಲಿ ಪಾಲಿಕೆ ನೌಕರರನ್ನು ಈ ಕಾರ್ಯಕ್ಕೆ ನಿಯೋಜಿಸಿಲ್ಲ, ಹೀಗಾಗಿ ಕೂಡಲೇ ಅವರನ್ನು ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಸಂಜಯ ಪಾಟೀಲ ಕನಮಡಿ, ಭೀಮಾಶಂಕರ ಹದನೂರ, ರಾಹುಲ ಜಾಧವ, ಭಾರತಿ ಬುಯ್ಯಾರ, ಮಲ್ಲಿಕಾರ್ಜುನ ಮಠ, ಭರತ ಕೋಳಿ, ಬಸವರಾಜ ಬೈಚಬಾಳ, ವಿಜಯ ಜೋಶಿ, ಕಾಂತು ಶಿಂದೆ, ರಾಜೇಶ್ ಥೌಸೆ, ಪ್ರಭುಗೌಡ ಬಿರಾದರ್, ಮಂಜುನಾಥ ಮೀಸೆ, ಚಿನ್ನು ಚಿನಗುಂಡಿ, ಪಾಪು ಸಿಂಗ, ರಜಪೂತ ಆನಂದ, ಸಂಗಮೇಶ ಉಕಲಿ, ಸಂತೋಷ ಜಾದವ, ರಾಜಶೇಖರ ಬಾಗಲಕೋಟ, ವಿಜಯ ಹಿರೇಮಠ, ವಿನಾಯಕ ದಹಿಂಡಿ ಇದ್ದರು.

ವಿಜಯಪುರ ಜಿಲ್ಲೆಯಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು
ಗುರುಲಿಂಗಪ್ಪ ಅಂಗಡಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.