ವಿಜಯಪುರ:ಬೇಸಿಗೆ ಆರಂಭಗೊಂಡ ಬೆನ್ನಿಗೆ ಹೊನ್ನಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆಯೂ ಬಿಗಡಾಯಿಸಿದೆ. ಎರಡು ತಿಂಗಳಿನಿಂದಲೂ ಗ್ರಾಮದ ಜನರು ನೀರಿಗಾಗಿ ನಿತ್ಯವೂ ಪರಿತಪಿಸುವುದು ತಪ್ಪದಾಗಿದೆ.
ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತ ಟ್ಯಾಂಕರ್ ಮೂಲಕ ನೀರು ಪೂರೈಸಿದರೂ; ಗ್ರಾಮದ ಸಮಸ್ತ ಕುಟುಂಬಗಳಿಗೆ ಸಾಕಾಗುವಷ್ಟು ಲಭ್ಯವಾಗುತ್ತಿಲ್ಲ. ದನ–ಕರುಗಳು ನೀರಿಗಾಗಿ ಪರಿತಪಿಸುವುದು ಇಂದಿಗೂ ನಿಲ್ಲದಾಗಿದೆ ಎಂಬ ದೂರು ಗ್ರಾಮಸ್ಥರದ್ದಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕ ಈಗಷ್ಟೇ ಗ್ರಾಮದಲ್ಲಿ ಆರಂಭಗೊಂಡಿದೆ. ನೀರಿನ ಮೂಲ ಲಭ್ಯವಿಲ್ಲದಿದ್ದುದರಿಂದ, ಟ್ಯಾಂಕರ್ ನೀರನ್ನೇ ಶುದ್ಧೀಕರಣಗೊಳಿಸಿ ಕೊಡುವ ಯತ್ನಕ್ಕೆ ಚಾಲನೆ ನೀಡಲಾಗಿದೆ. ಇದು ಊರ ಜನರ ನಡುವೆ ಜಗಳಕ್ಕೂ ಮೂಲವಾಗಿದೆ.
ಎಲ್ಲರಿಗೂ ಶುದ್ಧ ಕುಡಿಯುವ ನೀರು ನಿರಂತರವಾಗಿ ಸಿಗದಾಗಿದೆ. ಕೊನೆಯವರ ಪಾಳಿ ಬಾರದಾಗಿದೆ. ಇದರಿಂದ ಈಗಾಗಲೇ ಹಲವರು ನೀರಿನ ಜಗಳ ನಡೆಸಿದ್ದು, ಮನಸ್ತಾಪ ಊರಲ್ಲಿ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದೆ. ಇನ್ನೊಂದು ತಿಂಗಳು ಎಷ್ಟೊತ್ತಿಗೆ ಮುಗಿಯಲಿದೆ. ನಮ್ಮ ನೀರಿನ ತ್ರಾಸು ಎಂದು ಕೊನೆಗೊಳ್ಳಲಿದೆ ಎಂಬುದೇ ಗ್ರಾಮಸ್ಥರಿಗೆ ಚಿಂತೆಯಾಗಿ ಕಾಡಲಾರಂಭಿಸಿದೆ.
‘ಶುದ್ಧ ಕುಡಿಯುವ ನೀರಿಗಾಗಿ ಐದು ಕಿ.ಮೀ. ದೂರದ ಶಿರಕನಹಳ್ಳಿಗೆ ನಿತ್ಯವೂ ಹೋಗಬೇಕಿದೆ. ನಾವು ಹೋಗುವಷ್ಟರಲ್ಲೇ ಸ್ಥಳೀಯರು, ಆಜುಬಾಜಿನ ಗ್ರಾಮಸ್ಥರು ಪಾಳಿ ಹಚ್ಚಿರುತ್ತಾರೆ. ನಾವು ತಾಸುಗಟ್ಟಲೇ ಸರತಿಯಲ್ಲಿ ಕಾದು ನಿಂತು ನೀರು ತರಬೇಕಿದೆ. ಕೆಲವೊಮ್ಮೆ ಅಲ್ಲಿಯೂ ನೀರು ಸಿಗದೆ ಬರಿಗೈಯಲ್ಲಿ ಮರಳಬೇಕಿದೆ. ನಿತ್ಯವೂ ಇದೊಂದು ತಪ್ಪದ ಕಾಯಕವಾಗಿದೆ’ ಎಂದು ಹೊನ್ನಳ್ಳಿಯ ಪ್ರಶಾಂತ ಅಸಮಾಧಾನ ವ್ಯಕ್ತಪಡಿಸಿದರು.
‘ನಮ್ಮ ಓಣಿಗೆ ನಾಲ್ಕೈದು ದಿನಕ್ಕೊಮ್ಮೆ ಟ್ಯಾಂಕರ್, ನೀರು ಹೊತ್ತು ಬರುತ್ತದೆ. ಈ ಸಂದರ್ಭ ಎಷ್ಟು ಸಾಧ್ಯ ಅಷ್ಟು ನೀರನ್ನು ತುಂಬಿಟ್ಟುಕೊಳ್ಳುತ್ತೇವೆ. ಇನ್ನೊಮ್ಮೆ ಟ್ಯಾಂಕರ್ ಬರುವ ತನಕ ಈ ನೀರು ಸಾಲಲ್ಲ. ದಿನ ಬಳಕೆಗೆ, ಕುಡಿಯಲಿಕ್ಕಾಗಿ ಮೂರು ದಿನ ಕಳೆಯುತ್ತಿದ್ದಂತೆ ಹೊಲಗಳತ್ತ ಅಲೆಯಬೇಕಿದೆ.
ಊರಲ್ಲಿದ್ದ ಕೈಪಂಪಿನಲ್ಲಿ ನೀರು ಬಾರದಾಗಿದೆ. ತ್ರಿಫೇಸ್ ವಿದ್ಯುತ್ ಇರುವುದನ್ನು ಖಚಿತಪಡಿಸಿಕೊಂಡು ಅನಿವಾರ್ಯವಾಗಿ ಎಂಟತ್ತು ಕೊಡಗಳೊಂದಿಗೆ ಹೊಲಗಳತ್ತ ದಾಂಗುಡಿಯಿಡುವ ಚಿತ್ರಣ ನಮ್ಮೂರು ಹೊನ್ನಳ್ಳಿಯಲ್ಲಿ ನಿತ್ಯವೂ ಗೋಚರಿಸುತ್ತಿದೆ. ನಮ್ಮ ನೀರಿನ ಸಮಸ್ಯೆಗೆ ಇತಿಶ್ರೀ ಹಾಕಿ ಎಂದು ಜಂಬಗಿ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದಾಗಿದೆ’ ಎಂದು ಪ್ರವೀಣ ಮ.ಹೊಸಮನಿ ದೂರಿದರು.
‘ಇನ್ನೂ ಪಂಚಾಯ್ತಿ ಆಡಳಿತದವರು ಎಂಟು ದಿನಕ್ಕೊಮ್ಮೆ ಕುಡಿಯುವ ನೀರನ್ನು ನಳದಲ್ಲಿ ಬಿಡುತ್ತಾರೆ. ಎಲ್ಲ ನಳಕ್ಕೂ ಈ ನೀರು ಹತ್ತಲ್ಲ. ವಾರದ ತನಕ ಸಾಕಾಗುವುದು ಇಲ್ಲ. ನಿತ್ಯವೂ ಕುಡಿಯುವ ನೀರು ತರಲು ಅಲೆದಾಡುವುದು ತಪ್ಪಲ್ಲ.
ಯಾಡ್ ದಿವಸದ ಹಿಂದೆ ಊರಲ್ಲಿ ಮಲ್ಲಿಕಾರ್ಜುನ ದೇವರ ಜಾತ್ರೆಯಿತ್ತು. ಆ ಸಂದರ್ಭ ಮಾತ್ರ ಪಂಚಾಯ್ತಿಯವರು ಪ್ರತಿ ಮನೆಗೂ ನಾಲ್ಕ್ ಕೊಡ ಕುಡಿಯುವ ನೀರು ಕೊಟ್ಟರು. ಮತ್ತೆ ನಮ್ಮತ್ತ ತಿರುಗಿಯೂ ನೋಡಲಿಲ್ಲ. ನಾವು ನಿತ್ಯವೂ ಹೊಲಕ್ಕೆ ನೀರು ಅರಸಿ ಅಲೆಯುವುದು ನಿಂತಿಲ್ಲ’ ಎಂದು ಹೊನ್ನಳ್ಳಿಯ ಗ್ರಾಮಸ್ಥರು ‘ಪ್ರಜಾವಾಣಿ’ ಬಳಿ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.