ADVERTISEMENT

ಆಲಮಟ್ಟಿ ವಿದ್ಯುತ್ ಉತ್ಪಾದನೆಗೆ ನೀರು ಸ್ಥಗಿತ: ಗೇಟ್‌ ಮೂಲಕ ಹೊರಕ್ಕೆ!

ಕೆಬಿಜೆಎನ್‌ಎಲ್, ಹೆಸ್ಕಾಂ ಮುಸುಕಿನ ಗುದ್ದಾಟ 

ಬಸವರಾಜ ಸಂಪಳ್ಳಿ
Published 18 ಮಾರ್ಚ್ 2025, 7:48 IST
Last Updated 18 ಮಾರ್ಚ್ 2025, 7:48 IST
ಆಲಮಟ್ಟಿ ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಕೇಂದ್ರದ ಬದಲಾಗಿ ಜಲಾಶಯದ ಎಂಟು ಗೇಟ್‌ಗಳ ಮೂಲಕ ನೀರು ನದಿಗೆ ಹರಿಯುತ್ತಿರುವುದು
ಆಲಮಟ್ಟಿ ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಕೇಂದ್ರದ ಬದಲಾಗಿ ಜಲಾಶಯದ ಎಂಟು ಗೇಟ್‌ಗಳ ಮೂಲಕ ನೀರು ನದಿಗೆ ಹರಿಯುತ್ತಿರುವುದು   

ವಿಜಯಪುರ: ಬಾಕಿ ಉಳಿಸಿಕೊಂಡಿರುವ ₹298 ಕೋಟಿ ವಿದ್ಯುತ್ ಬಿಲ್ ಪಾವತಿಸದ ಕೃಷ್ಣಾ ಭಾಗ್ಯ ಜಲ ನಿಗಮ(ಕೆಬಿಜಿಎನ್‌ಎಲ್‌)ಕ್ಕೆ ಹೆಸ್ಕಾಂ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿ ಶಾಕ್‌ ನೀಡಿದೆ.

ಆಲಮಟ್ಟಿಯಲ್ಲಿರುವ ಕೆಬಿಜೆಎನ್‌ಎಲ್ ನ ಎಲ್ಲಾ ಕಚೇರಿಗಳಿಗೆ ಶನಿವಾರ ಮಧ್ಯಾಹ್ನದಿಂದ ಸೋಮವಾರ ಬೆಳಿಗ್ಗೆ ವರೆಗೂ ವಿದ್ಯುತ್ ಪೂರೈಕೆಯನ್ನು ಹೆಸ್ಕಾಂ ಸಂಪೂರ್ಣ ಕಡಿತಗೊಳಿಸಿತ್ತು. ಹೆಸ್ಕಾಂ ಈ ರೀತಿ ವಿದ್ಯುತ್ ಕಡಿತ ಮಾಡುತ್ತಿರುವುದು ಇದು ಎರಡನೇ ಬಾರಿ.

ಇದಕ್ಕೆ ಪ್ರತಿಕಾರವಾಗಿ ಕೆಬಿಜಿಎನ್‌ಎಲ್‌ ಕೂಡ ಆಲಮಟ್ಟಿ ಜಲಾಶಯದಿಂದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ (ಕೆಪಿಸಿಎಲ್) ಕೊಡುತ್ತಿದ್ದ ನೀರನ್ನು ಕೆಬಿಜೆಎನ್‌ಎಲ್ ಅಧಿಕಾರಿಗಳು ಭಾನುವಾರ ಸಂಜೆಯಿಂದ ಸ್ಥಗಿತಗೊಳಿಸಿದ್ದಾರೆ.

ADVERTISEMENT

ವಿದ್ಯುತ್ ಉತ್ಪಾದನಾ ಕೇಂದ್ರದ ಬದಲಾಗಿ ಆಲಮಟ್ಟಿ ಜಲಾಶಯದ 26 ಗೇಟ್‌ಗಳ ಪೈಕಿ 8 ಗೇಟ್‌ಗಳ ಮೂಲಕ 7500 ಕ್ಯುಸೆಕ್ ನೀರನ್ನು ಹರಿಸಲಾಗಿದೆ. ಇದರಿಂದ ಕೆಪಿಸಿಎಲ್‌ಗೆ ಬಿಸಿ ಮುಟ್ಟಿಸಿದೆ.

ಹೆಸ್ಕಾಂ ಆರೋಪವೇನು?:

ರೈತರಿಗೆ ನೀರೊದಗಿಸಲು ಆರು ವಿವಿಧ ಏತ ನೀರಾವರಿ ಯೋಜನೆಗಳಿವೆ. ಅಲ್ಲಿ ಬೃಹತ್ ಪಂಪ್‌ಸೆಟ್‌ಗಳನ್ನು ನಿರಂತರ ವಿದ್ಯುತ್ ಮೂಲಕ ಚಾಲನೆ ಮಾಡಿ, ನೀರನ್ನು ನದಿಯಿಂದ ಎತ್ತಿ ಕಾಲುವೆಗೆ ಹರಿಸಲಾಗುತ್ತದೆ. ಇದಕ್ಕಾಗಿ ವಿದ್ಯುತ್ ಬಿಲ್ ಬರುತ್ತದೆ. ಕಳೆದ ಒಂದು ವರ್ಷದಿಂದ ಇವುಗಳ ವಿದ್ಯುತ್ ಬಿಲ್ ಅನ್ನು ಕೆಬಿಜೆಎನ್‌ಎಲ್ ಪಾವತಿಸಿಲ್ಲ. ಜತೆಗೆ ಕಚೇರಿಗಳ, ನೌಕರರ ಮನೆಗಳ ಬಿಲ್ ಕೂಡಾ ಪಾವತಿಸಿಲ್ಲ ಎಂಬುದು ಹೆಸ್ಕಾಂ ಅಧಿಕಾರಿಗಳ ಆರೋಪ.

ರಾಯಲ್ಟಿ ಪಾವತಿಸದ ಕೆಪಿಸಿಎಲ್!:

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿ ನೀರು ಪಡೆದು ಕರ್ನಾಟಕ ವಿದ್ಯುತ್ ಉತ್ಪಾದನಾ ನಿಗಮ (ಕೆಪಿಸಿಎಲ್)ವು ಆಲಮಟ್ಟಿ ಜಲ ವಿದ್ಯುತ್ ಉತ್ಪಾದನಾ ಘಟಕ, ರಾಯಚೂರು, ಬಳ್ಳಾರಿ, ಯರಮರಸ್ ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ವಹಿಸಿ, ವಿದ್ಯುತ್ ಉತ್ಪಾದಿಸುತ್ತಿದೆ. ಇವುಗಳಿಗೆ ನೀರು ಪಡೆದಿದ್ದಕ್ಕೆ ಕೆಪಿಸಿಎಲ್ 2017-18 ನೇ ಸಾಲಿನಿಂದ ಇಲ್ಲಿಯವರೆಗೂ ಕೆಬಿಜೆಎನ್‌ಎಲ್‌ಗೆ ನೀರಿನ ರಾಯಲ್ಟಿ ಪಾವತಿಸಿಲ್ಲ. ಕೆಪಿಸಿಎಲ್ ₹ 450 ಕೋಟಿಗೂ ಹೆಚ್ಚಿನ ಬಾಕಿ ಇರಿಸಿಕೊಂಡಿದೆ ಎಂದು ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೆಪಿಸಿಎಲ್ ವಿದ್ಯುತ್ ಅನ್ನು ಕೆಪಿಟಿಸಿಎಲ್‌ಗೆ ಮಾರಾಟ ಮಾಡುತ್ತದೆ. ಹೀಗಾಗಿ ಬಾಕಿ ಉಳಿಸಿಕೊಂಡಿರುವ ₹450 ಕೋಟಿಗೂ ಹೆಚ್ಚಿನ ಮೊತ್ತಕ್ಕೆ, ಹೆಸ್ಕಾಂಗೆ ಕೆಬಿಜೆಎನ್‌ಎಲ್ ಬಾಕಿ ಉಳಿಸಿಕೊಂಡಿರುವ ಅಂದಾಜು ₹300 ಕೋಟಿಯನ್ನು ಸರ್ಕಾರದ ಮಟ್ಟದಲ್ಲಿಯೇ ಲೆಕ್ಕಾಚಾರ (ಪುಸ್ತಕ ಹೊಂದಾಣಿಕೆ) ಮಾಡಿಕೊಳ್ಳಲು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಕಳೆದ ಸೆಪ್ಟಂಬರ್‌ನಲ್ಲಿಯೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಇನ್ನೂ ಈ ತಾಂತ್ರಿಕ ಸಮಸ್ಯೆ ಬಗೆಹರಿಯದ ಕಾರಣ ಹೆಸ್ಕಾಂ ಬಿಲ್ ಪಾವತಿಸುವಂತೆ ಕೆಬಿಜೆಎನ್‌ಎಲ್ ಆಲಮಟ್ಟಿಯ ಅಧಿಕಾರಿಗಳ ಮೇಲೆ ವಿದ್ಯುತ್ ಕಡಿತಗೊಳಿಸಿ ಒತ್ತಡ ಹಾಕುತ್ತಿದೆ.

ಕೊನೆಗೂ ಸುಖಾಂತ್ಯ:

ಸೋಮವಾರ ಬೆಳಿಗ್ಗೆ ಕೆಬಿಜೆಎನ್‌ಎಲ್‌ನ ಎಲ್ಲಾ ಕಚೇರಿಗಳಿಗೂ ಹೆಸ್ಕಾಂ ವಿದ್ಯುತ್ ಮರುಸ್ಥಾಪನೆಗೊಳಿಸಿದೆ. ಇದರಿಂದ ಸಮಸ್ಯೆ ತಾತ್ಕಾಲಿಕ ಬಗೆಹರಿದಿದೆ.

ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಪುಸ್ತಕ ಹೊಂದಾಣಿಕೆ ಕೆಲಸ, ಅಧಿಕಾರಿಗಳ ಮಧ್ಯದ ಸಂವಹನದ ಕೊರತೆಯ ಕಾರಣ ವಿದ್ಯುತ್ ಕಣ್ಣುಮುಚ್ಚಾಲೆ ಆಟ ನಡೆದಿರುವುದು ವಿಪರ್ಯಾಸ.

ಕೆಪಿಸಿಎಲ್ ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಪ್ರತ್ಯೇಕ ನಿಗಮಗಳು ಭಾರಿ ಮೊತ್ತ ಬಾಕಿಯಿರಿಸಿಕೊಂಡರೇ ಹೆಸ್ಕಾಂ ನಡೆಯುವುದು ಹೇಗೆ? ಕೆಬಿಜೆಎನ್‌ಎಲ್‌ಗೆ ಸಾಕಷ್ಟು ಬಾರಿ ಬಿಲ್ ಬಾಕಿ ಪಾವತಿಸುವಂತೆ ಹೇಳಲಾಗಿದೆ. ಆದರೂ ಬಾಕಿಯಿರಿಸಿಕೊಂಡಿದೆ. ಹೀಗಾಗಿ ವಿದ್ಯುತ್ ಕಡಿತ ಮಾಡಲಾಗಿತ್ತು

–ಸಿದ್ದರಾಮ ಬಿರಾದಾರ ಕಾರ್ಯನಿರ್ವಾಹಕ ಎಂಜಿನಿಯರ್ ಹೆಸ್ಕಾಂ ಬಸವನಬಾಗೇವಾಡಿ

ಸಂವಹನದ ಕೊರತೆಯ ಕಾರಣ ಈ ಸಮಸ್ಯೆ ಉಂಟಾಗಿದೆ. ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲಾಗಿದೆ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯಲಿದೆ.

-ಡಿ.ಬಸವರಾಜ ಮುಖ್ಯ ಎಂಜಿನಿಯರ್ ಆಲಮಟ್ಟಿ

ಸೋಮವಾರ ಮಧ್ಯಾಹ್ನದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಒದಗಿಸಲಾಗುತ್ತಿದೆ. ಸದ್ಯ 36 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ

-ಚಂದ್ರಶೇಖರ ದೊರೆ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆಪಿಸಿಎಲ್ ಆಲಮಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.