ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಿದ ಬಳಿಕ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳುವಂತೆ ರಾಜ್ಯದ ಮುಖಂಡರು ಸೇರಿದಂತೆ ಯಾರನ್ನೂ ಕೇಳಿಕೊಂಡಿಲ್ಲ’ ಎಂದರು.
‘ಕೆಲವರಿಗೆ ಹುಚ್ಚು ಹಿಡಿದಿದೆ. ನನ್ನನ್ನು ಬಿಜೆಪಿಯಿಂದ ಶಾಶ್ವತವಾಗಿ ಹೊರಗೆ ಹಾಕಲಾಗಿದ್ದು, ವಾಪಸ್ ತಗೆದುಕೊಳ್ಳಲ್ಲ ಎಂದು ಭಾವಿಸಿದ್ದಾರೆ. ಆದರೆ, ಪಕ್ಷದ ವರಿಷ್ಠರು ನಿರಂತರ ನನ್ನ ಸಂಪರ್ಕದಲ್ಲಿದ್ದಾರೆ’ ಎಂದರು.
ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ನಗರದ ಕ್ಷೇತ್ರದಲ್ಲಿ ಬಿಜೆಪಿಗೆ ಅಂತರ ಕಡಿಮೆ ಆಗಿತ್ತು ಎಂಬ ಸಂಸದ ರಮೇಶ ಜಿಗಜಿಣಗಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ‘ಲೋಕಸಭೆಯಲ್ಲಿ ಈಗಿನ ಸಂಸದರಿಗಾಗಿ ಚುನಾವಣೆ ನಡೆದಿದೆ. ದೇಶ ಮತ್ತು ಪ್ರಧಾನಿ ಮೋದಿಗಾಗಿ ಚುನಾವಣೆ ಮಾಡಿದ್ದೇನೆ. ಅಂತರ ಕಡಿಮೆ ಮಾಡಲು ನಾನು ಕಾರಣನಲ್ಲ. ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಸ್ಥಳೀಯರು ಎಂಬ ಕಾರಣಕ್ಕೆ ಜನರು ಅವರಿಗೆ ಹೆಚ್ಚಿನ ಮತ ಹಾಕಿದ್ದಾರೆ’ ಎಂದರು.
‘ಗಾಂಧೀಜಿ ಮುಸ್ಲಿಂರಿಗಾಗಿ ಪಾಕಿಸ್ತಾನ ಪಾಲು ಮಾಡಿ, ನೀಡಿದ್ದಾರೆ. ಗಾಂಧಿ ಹುಟ್ಟಿಸಿದ ಕೂಸು ಪಾಕಿಸ್ತಾನ. ಅವರು ನಮ್ಮ ದೇಶದ ರಾಷ್ಟ್ರಪಿತ ಅಲ್ಲ. ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ. ಪಾಕಿಸ್ತಾನದಲ್ಲಿ ಗಾಂಧಿಯ ಒಂದು ಮೂರ್ತಿಯೂ ಇಲ್ಲ. ಆದರೆ, ನಮ್ಮಲ್ಲಿ ಓಣಿಗೊಂದು ಗಾಂಧಿ ಮೂರ್ತಿ ಕೂರಿಸಿದ್ದೇವೆ’ ಎಂದು ಯತ್ನಾಳ ಹೇಳಿದರು.
ಯತ್ನಾಳ ಬಿಜೆಪಿಗೆ ಮರಳುವುದು ಅನುಮಾನ: ಜಿಗಜಿಣಗಿ
ವಿಜಯಪುರ: ‘ಬಿಜೆಪಿ ವರಿಷ್ಠರು ಸೂಕ್ತ ನಿರ್ಣಯ ಕೈಗೊಂಡು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರು ಪುನಃ ಪಕ್ಷಕ್ಕೆ ಮರಳುವುದು ಅನುಮಾನ’ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ‘ಯತ್ನಾಳ ಉಚ್ಚಾಟನೆ ಮುಗಿದ ಅಧ್ಯಾಯ. ಯಾವಾಗಲೂ ಬಯ್ಯುವ ಮನುಷ್ಯ ನಾಯಕ ಆಗಲ್ಲ. ಬಯ್ಯಿಸಿಕೊಂಡವನೇ ನಾಯಕ ಆಗಲು ಸಾಧ್ಯ. ತಂದೆಯಂತಹ ಹಿರಿಯರಾದ ಯಡಿಯೂರಪ್ಪ ಮತ್ತು ಕುಟುಂಬಕ್ಕೆ ಬಾಯಿಗೆ ಬಂದಂತೆ ಬಯ್ದರು. ಹೀಗಾಗಿ ಅವರು ಸಮಾಜದಲ್ಲಿ ಯೋಗ್ಯತೆ ಕಳೆದುಕೊಂಡಿದ್ದಾರೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಶಾಸಕರಾಗುವ ಮುನ್ನ ಯತ್ನಾಳ ಅವರಿಗೆ ಅನುಭವ ಇತ್ತಾ? ಅವರು ಗ್ರಾಮ ಪಂಚಾಯಿತಿ ಜಿಲ್ಲಾ ಪಂಚಾಯಿತಿ ಮುನ್ಸಿಪಲ್ ಸದ್ಯಸರಾಗಿದ್ದರಾ? ಅದೇ ರೀತಿ ವಿಜಯೇಂದ್ರ ಒಬ್ಬ ನಾಯಕರ ಮಗ ರಾಜ್ಯಾಧ್ಯಕ್ಷರಾದರೆ ಪಕ್ಷಕ್ಕೆ ಒಳ್ಳೆಯದು ಆಗುತ್ತದೆ ಎಂದು ಮಾಡಿದ್ದಾರೆ. ಇದರಲ್ಲಿ ತಪ್ಪೇನು’ ಎಂದರು. ‘ಲೋಕಸಭೆಯಲ್ಲಿ ನನಗೆ ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ 20 ಸಾವಿರ ಲೀಡ್ ಸಿಕ್ಕಿತ್ತು. ಆದರೆ ವಿಜಯಪುರ ನಗರದಲ್ಲಿ ಒಬ್ಬರೇ ಬಿಜೆಪಿ ಶಾಸಕರು. ಇಲ್ಲೇ 9 ಸಾವಿರ ಕಡಿಮೆ ಮತಗಳು ಬಂದವು. ನಾನು ಏನಾದರೂ ಕೇಳಿದ್ದೇನಾ? ಸರಿದೂಗಿಸಿಕೊಂಡು ಹೋಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.