ADVERTISEMENT

ವಿಜಯಪುರ: ಜನರ ಸಹಕಾರವಿಲ್ಲದೇ ಕೋವಿಡ್‌ ತಡೆ ಅಸಾಧ್ಯ -ಎಡಿಜಿಪಿ ಉಮೇಶ್‌ ಕುಮಾರ್‌

ದೂಳಖೇಡ ಗಡಿ ಚೆಕ್‌ಪೋಸ್ಟ್‌ಗೆ ಎಡಿಜಿಪಿ ಭೇಟಿ; ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 16:21 IST
Last Updated 3 ಆಗಸ್ಟ್ 2021, 16:21 IST
ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಕಚೇರಿಯಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಎಡಿಜಿಪಿ(ಸಿಐಡಿ) ಉಮೇಶ್‌ ಕುಮಾರ್‌  ಮಾತನಾಡಿದರು. ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಹಿರಿಯ ಪೊಲೀಸ್‌ ಅಧಿಕಾರಿ ಸತೀಶ್‌ ಇದ್ದಾರೆ
ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಕಚೇರಿಯಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಎಡಿಜಿಪಿ(ಸಿಐಡಿ) ಉಮೇಶ್‌ ಕುಮಾರ್‌  ಮಾತನಾಡಿದರು. ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಹಿರಿಯ ಪೊಲೀಸ್‌ ಅಧಿಕಾರಿ ಸತೀಶ್‌ ಇದ್ದಾರೆ   

ವಿಜಯಪುರ: ಕರ್ನಾಟಕ–ಮಹಾರಾಷ್ಟ್ರ ಅಂತರರಾಜ್ಯ ಗಡಿಗಳಲ್ಲಿ ಎಷ್ಟೇ ತಪಾಸಣೆ, ನಿರ್ಬಂಧಗಳನ್ನು ಮಾಡಿದರೂ ಸ್ಥಳೀಯ ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ. ಜನರ ಸಹಕಾರವಿಲ್ಲದೇ ಕೋವಿಡ್‌ ತಡೆ ಅಸಾಧ್ಯ ಎಂದು ಎಡಿಜಿಪಿ(ಸಿಐಡಿ) ಉಮೇಶ್‌ ಕುಮಾರ್‌ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಕಚೇರಿಯಲ್ಲಿ ಡಿಸಿ, ಎಸ್‌ಪಿ, ಡಿಎಚ್‌ಒ ಅವರೊಂದಿಗೆ ಮಂಗಳವಾರ ರಾತ್ರಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರುಮಾತನಾಡಿದರು.

ಮಹಾರಾಷ್ಟ್ರದಿಂದ ಕದ್ದುಮುಚ್ಚಿ ರಾಜ್ಯಕ್ಕೆ ಬರುವವರ ಬಗ್ಗೆ ‌ಗಡಿ ಗ್ರಾಮಗಳಲ್ಲಿ ಈಗಾಗಲೇ ರಚಿಸಲಾಗಿರುವ ವಿಲೇಜ್‌ ಟಾಸ್ಕ್‌ ಪೋರ್ಸ್‌ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ADVERTISEMENT

ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರಾಜ್ಯವನ್ನು ಪ್ರವೇಶಿಸುವ ಪ್ರಮುಖ ಮಾರ್ಗಗಳಲ್ಲಿ 11 ಚೆಕ್‌ಪೋಸ್ಟ್‌ಗಳನ್ನು ಈಗಾಗಲೇ ಆರಂಭಿಸಲಾಗಿದೆ. ಪೊಲೀಸ್‌ ಮತ್ತು ಆರೋಗ್ಯ ಸಿಬ್ಬಂದಿ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹಿರಿಯ ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಮಹಾರಾಷ್ಟ್ರದಿಂದ ಬರುವ ಎಲ್ಲ ವಾಹನ, ಪ್ರಯಾಣಿಕರನ್ನು ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ. ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಇರದಿದ್ದರೆ ವಾಪಸ್‌ ಕಳುಹಿಸಲಾಗುವುದು ಎಂದು ಹೇಳಿದರು.

ರೈಲಿನ ಮೂಲಕ ಬರುವವರ ತಪಾಸಣೆಗೂ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಯಾವ ರೀತಿ ತಪಾಸಣೆ ಮಾಡಬೇಕು ಎಂಬುದರ ಬಗ್ಗೆ ಶೀಘ್ರ ಮಾರ್ಗಸೂಚಿ ರೂಪಿಸಲಾಗುವುದು ಎಂದರು.

ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ರಾಜ್ಯದ ಗಡಿ ಭಾಗದ ಹಳ್ಳಿಯ ಜನರಿಗೆ ಈಗಾಗಲೇ ಕೋವಿಡ್‌ ಲಸಿಕೆ ಎರಡು ಡೋಸ್‌ ನೀಡಿದೆ. ಜನರು ಅನವಶ್ಯಕವಾಗಿ ಹೆದರುವ ಅಗತ್ಯವಿಲ್ಲ. ಆದರೆ, ಅನಗತ್ಯವಾಗಿ ತಿರುಗಾಡಬಾರದು, ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಕರ್ನಾಟಕ–ಮಹಾರಾಷ್ಟ್ರ ಗಡಿ ಚೆಕ್‌ಪೋಸ್ಟ್‌ ದೂಳಖೇಡಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ, ಅಲ್ಲಿ ಕೈಗೊಂಡಿರುವ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲನೆ ಮಾಡಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಬಾಗಲಕೋಟೆ ಎಸ್‌ಪಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಅರಸಿದ್ದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್‌ ಇದ್ದರು.

***

ನಮ್ಮ ಮತ್ತು ನೆರೆಯ ರಾಜ್ಯಗಳ ನಡುವೆ ಇರುವುದು ಅಂತರರಾಷ್ಟ್ರೀಯ ಗಡಿಗಳಲ್ಲ. ಹೀಗಾಗಿ ಕದ್ದುಮುಚ್ಚಿ ಬರುವವರನ್ನು ಅಪರಾಧಿಗಳೆಂದು ಭಾವಿಸಲಾಗದು. ಆದರೆ,ಕೋವಿಡ್‌ ಹಿನ್ನೆಲೆಯಲ್ಲಿ ಎಚ್ಚರ ಅಗತ್ಯ.
–ಉಮೇಶ್‌ ಕುಮಾರ್‌ ,ಎಡಿಜಿಪಿ(ಸಿಐಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.