ADVERTISEMENT

ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 2:41 IST
Last Updated 18 ಫೆಬ್ರುವರಿ 2026, 2:41 IST
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಸಾಂಸ್ಕೃತಿಕ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿದರು
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಸಾಂಸ್ಕೃತಿಕ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿದರು   

ವಿಜಯಪುರ: ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಹಾಗೂ ಸಾಮಾನ್ಯ ಯೋಜನೆಯಡಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮಹಿಳಾ ಸಾಂಸ್ಕೃತಿಕ ಉತ್ಸವವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಕಾರ್ಯಕ್ರಮದ ರೂಪುರೇಷೆ, ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಸಾಂಸ್ಕೃತಿಕ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಉತ್ಸವದಲ್ಲಿ ಮಹಿಳಾ ಸಂಘ-ಸಂಸ್ಥೆಗಳು ಪಾಲ್ಗೊಳ್ಳುವ ಕುರಿತು ಅಗತ್ಯ ರೂಪುರೇಷೆ ಸಿದ್ಧಪಡಿಸುವಂತೆಯೂ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಅಧಿಕಾರಿಗಳನ್ನೊಳಗೊಂಡ ವಿವಿಧ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸೂಚಿಸಲಾಯಿತು.

ADVERTISEMENT

‘ಉತ್ಸವದಲ್ಲಿ ಮಹಿಳಾ ಕಲಾವಿದರು ಹಾಗೂ ಸ್ಥಳೀಯ ಮಹಿಳಾ ಕಲಾವಿದರನ್ನೊಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಮಹಿಳಾ ಕವಿಗೋಷ್ಠಿ, ವಿಚಾರ ಗೋಷ್ಠಿ, ಕಾವ್ಯ ಕುಂಚ ಗಾಯನ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕಿಯರೊಂದಿಗೆ ಸಂವಾದ ಹಾಗೂ ವಿಶೇಷ ಉಪನ್ಯಾಸ, ವಿದ್ಯಾರ್ಥಿನಿಯರಿಂದ ಚಿತ್ರಕಲಾ ಶಿಬಿರ ಸ್ಪರ್ಧೆ, ಮಹಿಳೆಯರು ಸಿದ್ಧಪಡಿಸಿದ ಉತ್ಪನ್ನಗಳ ಪ್ರದರ್ಶನ ಮೇಳ, ಖಾದಿ, ಕಸೂತಿ, ಕರಕುಶಲ ವಸ್ತುಗಳು ಮತ್ತು ಮಹಿಳೆಯರು ಸಿದ್ಧಪಡಿಸಿರುವ ಸ್ಥಳೀಯ ಹಾಗೂ ದೇಸಿ ತಿನಿಸು, ಉಡುಗೆ-ತೊಡುಗೆ ಹಾಗೂ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಸ್ಥಾಪನೆ, ವಿದ್ಯಾರ್ಥಿನಿಯರಿಂದ ರಸಪ್ರಶ್ನೆ, ಭಾಷಣ, ಆಶುಭಾಷಣ, ಪ್ರಬಂಧ, ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆ, ಮಹಿಳಾ ಜಾನಪದ ಜಾತ್ರೆ, ನಾಟಕೋತ್ಸವ ಹಾಗೂ ಮಹಿಳಾ ಕ್ರೀಡಾಕೂಟಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿ ವಿಜಯಾ ಕೋರಿಶೆಟ್ಟಿ, ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಶಂಕರಗೌಡ ಸೋಮನಾಳ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ. ಚವ್ಹಾಣ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪತ್ ಗುಣಾರಿ, ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರಾಹುಲ್ ಬಾವಿದೊಡ್ಡಿ, ಮಹಿಳಾ ವಿಶ್ವವಿದ್ಯಾಲಯದ ಪ್ರೊ. ಓಂಕಾರ ಕಾಕಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.