ವಿಜಯಪುರ: ‘ಲಿಂಗಾಯತ ಪಂಚಮಸಾಲಿ ಸಮಾಜ ಎಂದೂ 2ಎ ಮೀಸಲಾತಿ ಬೇಡಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡುವುದು ಬೇಡ, ಇನ್ನು ಮುಂದೆ ಅವರ ಬಳಿ ನಾವು ಕೇಳುವುದೂ ಇಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ 2 ಎ ಪ್ರವರ್ಗದಲ್ಲಿರುವ 104 ಹಿಂದುಳಿದ ಸಮಾಜಗಳ ಹಕ್ಕು ಕಸಿದುಕೊಳ್ಳಲು ನಾವು ತಯಾರಿಲ್ಲ, ಅನ್ಯಾಯ ಮಾಡುವುದಿಲ್ಲ, ಅವರ ಬುಟ್ಟಿಗೆ ಕೈಹಾಕುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಮೊದಲಿನಿಂದಲೂ ನಾವು 2 ಎ ಮೀಸಲಾತಿ ಕೇಳಿಲ್ಲ, ಪಂಚಮಸಾಲಿಗೆ 2 ಎ ಮೀಸಲಾತಿ ಬೇಕು ಎಂದು ಆರಂಭದಲ್ಲಿ ಬೆಂಕಿ ಹಚ್ಚಿದವರೇ ಕಾಂಗ್ರೆಸ್‌ನವರು’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೆಸರು ಹೇಳದೇ ಪರೋಕ್ಷವಾಗಿ ಆರೋಪಿಸಿದರು.
‘2ಡಿ’ಯಲ್ಲೇ ಪಡೆದುಕೊಳ್ಳುತ್ತವೆ:
‘ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಸಂವಿಧಾನ ವಿರೋಧಿಯಾಗಿ ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದುಹಾಕಿ, ಆ ಮೀಸಲಾತಿಯನ್ನು 2 ಸಿ ಮತ್ತು 2 ಡಿ ಎಂಬ ಹೊಸ ಪ್ರವರ್ಗಗಳನ್ನು ಸೃಷ್ಟಿಸಿ, ಲಿಂಗಾಯತರು, ಒಕ್ಕಲಿಗರು, ಮರಾಠರು, ಜೈನರು, ಕ್ರೈಸ್ತರು, ವೈಷ್ಣವರು, ಕುರುಬರು ಸೇರಿದಂತೆ ವಿವಿಧ ಸಮಾಜಗಳಿಗೆ ಹಂಚಿಕೆ ಮಾಡುವ ಸಂಬಂಧ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊಸ ಸೂತ್ರ ಕಂಡುಹಿಡಿಯಲಾಗಿತ್ತು. ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇದ್ದು, ಕಾನೂನು ಹೋರಾಟ ಮುಂದುವರಿಸುತ್ತೇವೆ. ಮುಸ್ಲಿಮರಿಗೆ ಸಂವಿಧಾನ ಬಾಹಿರವಾಗಿ ನೀಡಿರುವ ಮೀಸಲಾತಿ ರದ್ದುಗೊಳಿಸಿ, ಅದರಲ್ಲಿ ನಾವು ಮೀಸಲಾತಿ ಪಡೆದುಕೊಳ್ಳುತ್ತೇವೆ’ ಎಂದರು.
ಸಿಬಿಐಗೆ ಸಿಎಂ ಪತ್ರ ಬರೆಯಲಿ:
‘ವಕ್ಪ್ ಮಂಡಳಿ ಆಸ್ತಿ ಕಬಳಿಕೆ ಪ್ರಕರಣದಲ್ಲಿ ಮೌನವಾಗಿರುವಂತೆ ಅನ್ವರ್ ಮಾಣಿಪ್ಪಾಡಿ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ₹150 ಕೋಟಿ ಕೊಡುವ ಆಮಿಷ ಒಡ್ಡಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿಗೆ ಪತ್ರ ಬರೆಯುವ ಬದಲಿಗೆ ನೇರವಾಗಿ ಅವರೇ ಸಿಬಿಐಗೆ ಪತ್ರ ಬರೆಯ ಬಹುದಿತ್ತು. ಸಿಬಿಐಗೆ ನೇರವಾಗಿ ಪತ್ರ ಬರೆಯುವ ಅಧಿಕಾರ ಮುಖ್ಯಮಂತ್ರಿಗಳಿಗೂ ಇದೆ. ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ, ಸಿಬಿಐ ತನಿಖೆಗೆ ಶಿಫಾರಸು ಮಾಡಲು ತೀರ್ಮಾನಿಸಬಹುದು, ರಾಜ್ಯಪಾಲರಿಗೂ ಪತ್ರ ಬರೆಯಬಹುದಿತ್ತು’ ಎಂದು ಯತ್ನಾಳ ಹೇಳಿದರು.
‘ಸಿಬಿಐ, ಇಡಿ ಕೇಂದ್ರದ ಕೈಗೊಂಬೆ’ ಎಂದು ಆಪಾದಿಸುವ ಕಾಂಗ್ರೆಸ್ ಮುಖಂಡರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ವಿಜಯೇಂದ್ರ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಪ್ರಧಾನಿಗೆ ಪತ್ರ ಬರೆಯುವ ಮೂಲಕ ಸಿಬಿಐ, ಇಡಿ ಬಗ್ಗೆ ತಮಗೂ ವಿಶ್ವಾಸ ಇದೆ ಎಂದು ಒಪ್ಪಿಕೊಂಡಂತಾಯಿತು’ ಎಂದರು.
ಸಭೆ ಮಾಡಿದಷ್ಟೂ ಒಳ್ಳೆಯದು:
ಬಿ.ವೈ.ವಿಜಯೇಂದ್ರ ಬೆಂಬಲಿಗರು ದಾವಣಗೆರೆಯಲ್ಲಿ ಸಭೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ವಿರುದ್ಧ ಏನೂ ಕ್ರಮಕೈಗೊಳ್ಳಲು ಆಗದಿರುವುದಕ್ಕೆ ಅವರಿಗೆ ಹೆದರಿಕೆ ಆಗಿರಬೇಕು, ಹೀಗಾಗಿ ಸಭೆ ಮಾಡುತ್ತಿದ್ದಾರೆ, ಅವರು ಎಷ್ಟು ಸಭೆ ಮಾಡುತ್ತಾರೋ ಅಷ್ಟು ಒಳ್ಳೆಯದು’ ಎಂದು ಹೇಳಿದರು.
ದೊಡ್ಡ ಹಗರಣ:
‘ಬೆಂಗಳೂರು ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ಮೊತ್ತದ ದೊಡ್ಡ ಹಗರಣವೊಂದು ನಡೆದಿದೆ. ಸದನ ಮುಗಿದ ಬಳಿಕ ದಾಖಲೆ ಸಹಿತ ಆ ಹಗರಣವನ್ನು ಬಯಲಿಗೆಳೆಯುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.