ADVERTISEMENT

ವೈಜ್ಞಾನಿಕ ಕಸ ವಿಲೇವಾರಿಗೆ ಕ್ರಮ

ಮನೆಮನೆ ಕಸ ಸಂಗ್ರಹಣೆ ಮತ್ತು ವಿಂಗಡಣೆ ಜನಜಾಗೃತಿ ಜಾಥಾಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 13:55 IST
Last Updated 16 ನವೆಂಬರ್ 2019, 13:55 IST
ಮಡಿಕೇರಿಯಲ್ಲಿ ಶನಿವಾರ ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸು ನೀಡುವಂತೆ ನಡೆದ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಮಡಿಕೇರಿಯಲ್ಲಿ ಶನಿವಾರ ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸು ನೀಡುವಂತೆ ನಡೆದ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು   

ಮಡಿಕೇರಿ: ‘ಘನ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ನೀಡುವಂತಾಗಬೇಕು. ಆ ದಿಸೆಯಲ್ಲಿ ಎಲ್ಲರೂ ಕೈಜೋಡಿಸಬೇಕಿದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದರು.

ಜಿಲ್ಲಾಡಳಿತ, ನಗರಸಭೆ, ಸ್ಕೌಟ್ಸ್ ಮತ್ತು ಗೈಡ್ಸ್, ‘ಕೊಡಗು ಫಾರ್ ಟುಮಾರೋ’ ಹಾಗೂ ವಿವಿಧ ಸಂಘ –ಸಂಸ್ಥೆಗಳ ಸಹಕಾರದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಇಂದಿರಾ ಗಾಂಧಿ ವೃತ್ತದವರೆಗೆ ಶನಿವಾರ ಆಯೋಜಿಸಿದ್ದ ಮನೆಮನೆ ಕಸ ಸಂಗ್ರಹಣೆ ಮತ್ತು ವಿಂಗಡಣೆ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರಲ್ಲಿಯೂ ಅರಿವು ಇರಬೇಕು. ಪರಿಸರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.

ADVERTISEMENT

ಸ್ಟೋನ್ ಹಿಲ್‌ನಲ್ಲಿ ಮಡಿಕೇರಿ ನಗರದ ಎಲ್ಲಾ ಕಸವನ್ನು ಅವೈಜ್ಞಾನಿಕವಾಗಿ ಸುರಿಯಲಾಗುತ್ತಿದೆ. ಈ ಕಸವನ್ನು ಹಸಿ ಮತ್ತು ಒಣಕಸವನ್ನಾಗಿ ಬೇರ್ಪಡಿಸಿ ವೈಜ್ಞಾನಿಕವಾಗಿ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಈಗಾಗಲೇ ಟಾಟಾ ಸೇರಿದಂತೆ ವಿವಿಧ ಸರ್ಕಾರೇತರ ಸಂಸ್ಥೆಗಳೊಂದಿಗೆ ಚರ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಸ್ಟೋನ್ ಹಿಲ್‌ನಲ್ಲಿ ಸುರಿಯುತ್ತಿರುವ ಘನ ತ್ಯಾಜ್ಯದಿಂದ ಸುತ್ತಮುತ್ತಲಿನ ಜನರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ, ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಲು ಸಂಘ–ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಪ್ರತಿ ಕುಟುಂಬವು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನಗರಸಭೆ ವಾಹನ ಬಂದಾಗ ನೀಡಬೇಕು. ಎಲ್ಲೆಂದರಲ್ಲಿ ಕಸವನ್ನು ಬಿಸಾಡಬಾರದು ಎಂದು ಜಿಲ್ಲಾಧಿಕಾರಿ ಕೋರಿದರು.

ಈಗಾಗಲೇ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ, ಸಹ ರಾಜಾಸೀಟು ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಸಿ ಬಿಸಾಡುವುದು ಕಂಡುಬರುತ್ತಿದೆ. ಈ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಪ್ಲಾಸ್ಟಿಕ್ ನಿಷೇಧ ಸಂಬಂಧ ಬೀದಿನಾಟಕ ಪ್ರದರ್ಶನ ನಡೆಯಿತು.

ಜಿ.ಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ, ಪೌರಾಯುಕ್ತ ಎಂ.ಎಲ್.ರಮೇಶ್, ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ಅಧಿಕಾರಿ ಪಿ.ಕೆ.ನಾಚಪ್ಪ, ಆರೋಗ್ಯ ವಿಭಾಗದ ಅಧಿಕಾರಿ ಎಚ್.ಆರ್.ರಮೇಶ್, ಗ್ರೀನ್ ಸಿಟಿ ಪೋರಂ ಕಾರ್ಯದರ್ಶಿ ಮೋಂತಿ ಗಣೇಶ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಮ್ಮಿ ಸಿಕ್ವೇರಾ, ದಮಯಂತಿ, ‘ಕೊಡಗು ಫಾರ್ ಟುಮಾರೋ’ ಪ್ರತಿನಿಧಿಗಳಾದ ಧನ್ಯಾ, ಕಾರ್ಯಪ್ಪ, ವಿಕ್ರಮ್, ಪವನ್, ಕಾವ್ಯ ಪಾಲ್ಗೊಂಡಿದ್ದರು.

ಮಡಿಕೇರಿ ನಗರಸಭೆಯು ಘನತ್ಯಾಜ್ಯ ವಸ್ತು ವಿಲೇವಾರಿ ಕೆಲಸಕ್ಕೆ ಆದ್ಯತೆ ನೀಡುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಕಾರ್ಯಕ್ರಮದಂತೆ ಮಡಿಕೇರಿ ನಗರದ ನಿವಾಸಿಗಳು ಕಳೆದ ಎರಡು ವರ್ಷದ ಹಿಂದೆ ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆಯ ಬದಿಯಲ್ಲಿದ್ದ ಕಸದ ಬುಟ್ಟಿಗಳನ್ನು ತೆಗೆದು ಮನೆ ಮನೆಯಿಂದಲೇ ನೇರ ಕಸವನ್ನು ಸಂಗ್ರಹಿಸಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ತಮ್ಮ ಮನೆ ಬಾಗಿಲಿಗೆ ಬರುವ ನಗರಸಭಾ ಕಸದ ವಾಹನಗಳಿಗೆ ತಾವು ನೀಡುತ್ತಿರುವ ಕಸ (ತ್ಯಾಜ್ಯ)ಗಳನ್ನು ಹಸಿ ಮತ್ತು ಒಣಕಸ, ಇತರೆ ಕಸ ಎಂಬುದಾಗಿ 3 ಭಾಗಗಳಾಗಿ ವಿಂಗಡಿಸಿ ಕಸ (ತ್ಯಾಜ್ಯ)ವನ್ನು ನಗರಸಭೆ ವಾಹನಕ್ಕೆ ನೀಡುವಂತೆ ಈಗಾಗಲೇ ಹಲವು ಬಾರಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಮನೆ ಬಾಗಿಲಿಗೆ ಬರುವ ವಾಹನಗಳಲ್ಲಿ ಮೈಕ್ ಮೂಲಕ ಪ್ರಚೂರ ಪಡಿಸಲಾಗುತ್ತಿದೆ. ಆದರೂ, ಕಸ ಬೇರ್ಪಡಿಸುವ ಕೆಲಸವು ಪೂರ್ಣ ಪ್ರಮಾಣದಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ನಡೆಯದೇ ಇರುವುದರಿಂದ ಜಿಲ್ಲಾಡಳಿತ, ನಗರಸಭೆ ಮತ್ತು ಕೊಡಗು ಫಾರ್ ಟುಮಾರೊ ಘನತ್ಯಾಜ್ಯ ನಿರ್ವಹಣಾ ಚಳವಳಿ ಎಂಬ ಕಾರ್ಯಕ್ರಮದೊಂದಿಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಮತ್ತು ತ್ಯಾಜ್ಯ ವಸ್ತುವನ್ನು ಮೂಲದಲ್ಲಿ (ಮನೆಯಲ್ಲಿಯೇ) ವಿಂಗಡಿಸಿ ನಗರಸಭಾ ವಾಹನಗಳಿಗೆ ನೀಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶಾಲೆಯ ಮಕ್ಕಳು, ಸಂಘ ಸಂಸ್ಥೆಯವರು ಸಾರ್ವಜನಿಕರೊಂದಿಗೆ ಏರ್ಪಡಿಸಲಾಗಿರುತ್ತದೆ.

ಈ ಕಾರ್ಯಕ್ರಮದಲ್ಲಿ ಬೀದಿ ನಾಟಕದಿಂದ ಹಾಗೂ ಮನೆ ಮನೆ ಬಾಗಿಲಿಗೆ ಹೋಗಿ ಕರಪತ್ರ ನೀಡುವುದರೊಂದಿಗೆ ಯಾವ ರೀತಿಯಲ್ಲಿ ಕಸ ವಿಂಗಡಣೆ ಮಾಡಿ ನಗರಸಭಾ ವಾಹನಕ್ಕೆ ನೀಡಬೇಕು. ಇದರಿಂದ ಅಗುವ ಅನುಕೂಲಗಳೇನು ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವ ಬಗ್ಗೆ ಮಾಹಿತಿ ಹಾಗೂ ತ್ಯಾಜ್ಯದಲ್ಲಿನ ಹಸಿ ಕಸದಿಂದ ಆಗುವ ಪ್ರಯೋಜನಗಳು ಅತೀ ಮುಖ್ಯವಾಗಿರುತ್ತದೆ. ಮುಂದಿನ ದಿನಗಳಿಗೆ ಪರಿಸರ ಉಳಿಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ತ್ಯಾಜ್ಯ ವಿಂಗಡಣೆಯು ಅತೀ ಮುಖ್ಯ ವಿಷಯವಾಗಿದ್ದು, ಎಲ್ಲರು ಸಹಕರಿಸುವುದರೊಂದಿಗೆ ಪರಿಸರ ಉಳಿಸಲು ಪಣತೊಡಬೇಕಾಗಿರುತ್ತದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.