
ಎಲ್ಲರಿಗೂ ನಮಸ್ಕಾರ್ರಿ..
ಕೊಪ್ಪಳದಲ್ಲೀಗ 18 ದಿನಗಳ ಕಾಲ ನಿರಂತರವಾಗಿ ಜೋರು ಮಳೆ ಸುರಿದು ನಿಂತು ಹೋದ ಅನುಭವ. ಆ ಮಳೆಯಲ್ಲಿ ಮಿಳಿತಗೊಂಡು ಸಾಧನೆಯ ಬದುಕಿಗೆ ಹೊಸ ಗಮ್ಯ ಹುಡುಕಿಕೊಂಡವರು, ತಮ್ಮ ಬದುಕು ಕಟ್ಟಿಕೊಂಡವರು, ಸಾಧನೆ ಮಾಡಬೇಕು ಎನ್ನುವ ಸಂಕಲ್ಪ ಮಾಡಿಕೊಂಡವರು, ಅಜ್ಜನ ಜಾತ್ರೆ ಎನಿಸಿಕೊಳ್ಳುವ ಗವಿಮಠದ ಜನಜಾತ್ರೆಯಲ್ಲಿ ಸಮಾಧಾನ, ಸವಾಕಾಶದಿಂದ ಬೆರೆತವರು ಅದೆಷ್ಟು ಲಕ್ಷ ಜನ? ಲೆಕ್ಕ ಇನ್ನೂ ನಡೆಯುತ್ತಲೇ ಇದೆ.
ಗೊತ್ತಾತ್ತಲ್ರಿ.. ನಾನು ಯಾವುದರ ಬಗ್ಗೆ ಮಾತನಾಡ್ತಾ ಇದೀನಿ ಅಂತ. ಜನವರಿ 1ರಿಂದ 18ರ ವರೆಗೆ ನಡೆದ ಕೊಪ್ಪಳದ ಗವಿಮಠದ ಜಾತ್ರೆ ಬಗ್ಗೆ. ಈ ದಿನಗಳ ಅವಧಿಯಲ್ಲಿ ಕನಿಷ್ಠ 28ರಿಂದ 30 ಲಕ್ಷ ಜನ ಗವಿಸಿದ್ಧೇಶ್ವರ ಮಠದ ಜಾತ್ರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಜಾತ್ರೆಯ ಮಹಾರಥೋತ್ಸವ ಹಾಗೂ ವಾರಾಂತ್ಯದ ದಿನಗಳಲ್ಲಿ ಒಂದೊಂದು ದಿನವೇ ಮೂರ್ನಾಲ್ಕು ಲಕ್ಷ ಜನ ಬಂದು ಸುರಕ್ಷಿತವಾಗಿ, ಸಂತೋಷವಾಗಿ ವಾಪಸ್ ಹೋಗಿದ್ದಾರೆ ಎನ್ನುವ ವಿಷಯವೇ ಖುಷಿ ನೀಡುತ್ತದೆ.
ಇದೆಲ್ಲ ಯಾಕೆ ಹೇಳಬೇಕಾಯಿತು ಅಂದ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದವರಿಗೆ ’ಕಪ್ ಗೆಲ್ರೋ’ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಲೇ ಇದ್ದರೂ ಒಮ್ಮೆಯೂ ಗೆದ್ದಿರಲಿಲ್ಲ. 2025ರಲ್ಲಿ ಕೊನೆಗೂ ಕಪ್ ಗೆದ್ದು ಬೆಂಗಳೂರಿಗೆ ತಂದು ಸಂಭ್ರಮವನ್ನೂ ಆಚರಿಸಿದರು. 11 ಜನ ಮೃತಪಟ್ಟು, ಅನೇಕರು ಗಾಯಗೊಂಡು ಸಂಭ್ರಮದ ಸಂದರ್ಭ ಸೂತಕದ ಮನೆಯಾಯಿತು. ಅದಕ್ಕೂ ಮೊದಲು ಉತ್ತರ ಗೋವಾದ ಶಿರ್ಗೊ ಗ್ರಾಮದ ದೇವಸ್ಥಾನದ ಉತ್ಸವ ಸಮಾರಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಅರು ಜನ ಮೃತಪಟ್ಟರು. ಇದೇ ರೀತಿ ಪ್ರಯಾಗರಾಜ್ ಕುಂಭಮೇಳಕ್ಕೆ ಹೋಗಲು ಸಿದ್ಧರಾಗಿದ್ದಾಗ ರೈಲು ನಿಲ್ದಾಣದಲ್ಲಿ ನಡೆದ ಅವಘಡದಿಂದ 18 ಜನ, ಅಮೃತಸ್ನಾನಕ್ಕಾಗಿ ಸೇರಿದವರಲ್ಲಿ ಉಂಟಾದ ಕಾಲ್ತುಳಿತದಿಂದ 30 ಜನ ಹೀಗೆ ಹೇಳುತ್ತಲೇ ಹೋದರೆ ಸತ್ತವರ ಸಂಖ್ಯೆಯ ದೊಡ್ಡ ಪಟ್ಟಿಯೇ ಬೆಳೆಯುತ್ತದೆ.
ದೊಡ್ಡ ಸಮಾರಂಭವೆಂದ ಮೇಲೆ ದೊಡ್ಡ ಮಟ್ಟದಲ್ಲಿ ಜನಬರುವುದು ಕೂಡ ಸಾಮಾನ್ಯವೇ. ಆದರೂ ತಮ್ಮದಲ್ಲದ ತಪ್ಪಿಗೆ ಜೀವವನ್ನೇ ಕಳೆದುಕೊಂಡು, ಕಾರ್ಯಕ್ರಮವನ್ನೂ ಶಪಿಸಿ ಹೋದರೆ ಅದರಿಂದ ಯಾರಿಗೆ ಶುಭವಾಗುತ್ತದೆ. ಕಾಲ್ತುಳಿತ ಸಾವು, ನೋವುಗಳ ವೇದನೆಗಳ ನಿರಂತರ ಸುದ್ದಿಗಳ ನಡುವೆ ಗವಿಮಠದ ಜಾತ್ರೆಗೆ ದೊಡ್ಡ ಪ್ರಮಾಣದಲ್ಲಿ ಜನ ಬಂದರೂ ಯಾವ ಅವಘಡವೂ ನಡೆಯದಂತೆ ವ್ಯವಸ್ಥೆ ಮಾಡಿದ್ದರಲ್ಲ ಅದು ಬಹಳ ಖುಷಿ ನೀಡಿದೆ. ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ ಅಂಡ್ ಗೈಡ್ಸ್, ಹೋಂಗಾರ್ಡ್ಸ್, ಪೊಲೀಸರು, ವಿದ್ಯಾರ್ಥಿಗಳು, ಮಹಿಳಾ ತಂಡದವರು ಹೀಗೆ ಎಲ್ಲರೂ ಜಾತ್ರೆಯ ಬರುವ ಜನರ ನಿರ್ವಹಣೆಗೆ ಆಯಾಕಟ್ಟಿನ ಸ್ಥಳಗಳಲ್ಲಿ ಹಗಲಿರುಳು ದುಡಿದರು.
ಇದು ಇವರದ್ದಷ್ಟೇ ಶ್ರಮವಲ್ಲ, ಜಾತ್ರೆಗೆ ಬಂದ ಭಕ್ತರು ಕೂಡ ಅಷ್ಟೇ ಶಿಸ್ತು ತೋರಿದರು. ಅಚ್ಚುಕಟ್ಟಾದ ವ್ಯವಸ್ಥೆ ಎಂದು ನೀವೆಲ್ಲರೂ ಸಂಘಟಕರನ್ನು ಶ್ಲಾಘಿಸಿದರೂ ಅಚ್ಚುಕಟ್ಟುತನ ಪಾಲಿಸಿಕೊಂಡುಬಂದಿದ್ದು ಭಕ್ತರ ಹೆಚ್ಚುಗಾರಿಕೆ. ಅನೇಕ ಕಾರ್ಯಕ್ರಮಗಳಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಅವರನ್ನೆಲ್ಲ ಮೀರಿ ದುರಂತ ಘಟನೆಗಳು ನಡೆದ ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಗವಿಮಠದ ಜಾತ್ರೆಯಲ್ಲಿ ಮಠದಿಂದ, ಜಿಲ್ಲಾಡಳಿತದ ಮಾಡಿದ ವ್ಯವಸ್ಥೆ ಒಂದಡೆಯಾದರೆ ಭಕ್ತರು ಕೂಡ ಸ್ವಯಂಪ್ರೇರಣೆಯಿಂದ ತೋರಿದ ಶಿಸ್ತು, ಸಮಾಧಾನ ಎಲ್ಲರಿಗೂ ಲಾಭವನ್ನೇ ತಂದುಕೊಟ್ಟಿದೆ.
ಜಾತ್ರೆಗೆ ಬಂದ ಲಕ್ಷಾಂತರ ಭಕ್ತರಿಗೆ ಅಷ್ಟೇ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಸಾಧ್ಯವೇ? ಜನಪ್ರವಾಹ ನುಗ್ಗಿಬಂದರೆ ಅದನ್ನು ನಿರ್ವಹಿಸುವುದು ಸುಲಭವೇ? ಇದಕ್ಕೆಲ್ಲ ಭದ್ರತೆಯ ಕಡಿವಾಣಕ್ಕಿಂತ ಸ್ವಯಂಪ್ರೇರಣೆಯ ಶಾಂತಿಮಂತ್ರ ಬೇಕಾಗುತ್ತದೆ. ಇದಕ್ಕೆಲ್ಲ ಕಾರಣ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳುವ ಶಾಂತಿಮಂತ್ರ. ರಾಜ್ಯ, ಹೊರರಾಜ್ಯ ಹಾಗೂ ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಅವರು ’ಎಲ್ಲರನ್ನೂ ಪ್ರೀತಿಸು, ಎಲ್ಲರ ಸೇವೆ ಮಾಡು’ ಎನ್ನುವ ಮಾತೇ ಪ್ರೇರಕಶಕ್ತಿಯಂತೆ ಕಾಯುತ್ತದೆ.
ಜಾತ್ರೆಯ ಸಮಯದಲ್ಲಿ ಸ್ವಾಮೀಜಿ ಭೇಟಿಗೆ ಲಕ್ಷಾಂತರ ಭಕ್ತರು ಗಂಟೆಗಟ್ಟಲೆ ಸರತಿಯಲ್ಲಿ ನಿಂತುಕೊಳ್ಳುತ್ತಾರೆ. ಎಷ್ಟೇ ಸಮಯವಾದರೂ ತಾಳ್ಮೆಯಿಂದ ಕಾದು ಕೈಮುಗಿದು ನಮಸ್ಕರಿಸಿಯೇ ಹೋಗುತ್ತಾರೆ. ಆದರೆ ಪ್ರತಿವರ್ಷ ಮಹಾರಥೋತ್ಸವದ ಬಳಿಕ ಸ್ವಾಮೀಜಿಯೇ ಭಕ್ತರ ಮುಂದೆ ಶಿರಭಾಗಿ ಕೈ ಮುಗಿದು ’ನೀವೆಲ್ಲರೂ ಸುರಕ್ಷಿತವಾಗಿ ಮನೆಗೆ ಹೋದರೆ ನನಗೆ ಆಗ ಜಾತ್ರೆಯ ಸಂಭ್ರಮ’ ಎಂದು ವಿನೀತರಾಗಿ ಹೇಳುವ ಮಾತು ಭಕ್ತರ ಮನಸ್ಸಿಗೂ ನಾಟುತ್ತದೆ. ಅದೊಂದು ಮಾತು ಜಾತ್ರೆ ಸರಾಗವಾಗಿ ನಡೆಯಲು ಭಕ್ತರಿಗೆ ಸ್ವಯಂಪ್ರೇರಣೆಯೂ ಆಗುತ್ತದೆ.
ಬೆಳಗಾದರೆ ಸಾಕು ಕೋಮುಗಲಭೆ, ಕೋಮುವೈಷಮ್ಯ, ಧರ್ಮಗಳ ನಡುವೆ ಕಿತ್ತಾಟ, ಸಮುದಾಯಗಳ ನಡುವೆ ಹೊಡೆದಾಟ, ದೇಶದೇಶಗಳ ನಡುವೆ ಯುದ್ಧದ ಭೀಕರ ಸುದ್ದಿಗಳನ್ನೇ ಕೇಳುವಂತಾಗಿದೆ. ಕೊಪ್ಪಳದ ಜಾತ್ರೆ ಇವೆಲ್ಲವುಗಳಿಗೂ ತದ್ವಿರುದ್ಧದಂತಿತ್ತು. ಎಲ್ಲ ಧರ್ಮಗಳು, ಜಾತಿಗಳು ಹಾಗೂ ಸಮುದಾಯಗಳ ಜನರನ್ನು ಒಳಗೊಂಡು ಜನರೇ ಜನರಿಗಾಗಿ ಮಾಡಿದ, ದುಡಿದು ಶ್ರಮಸಂಸ್ಕೃತಿ ಅನಾವರಣ ಮಾಡಿದ ಜನರ ಯಾತ್ರೆ ಇದಾಗಿತ್ತು. ಜನಸಾಗರ, ಮಹಾದಾಸೋಹದ ವ್ಯವಸ್ಥೆ, ಮೈ ಕೊರೆಯುವ ಚಳಿಯ ನಡುವೆಯೂ ಮಧ್ಯರಾತ್ರಿ ಅನುಭವಿಗಳ ಮಾತು ಕೇಳುತ್ತಿದ್ದ ಜನರ ಆಸಕ್ತಿ ಕಂಡು ಜಾತ್ರೆಯ ಬಂದ ಅತಿಥಿಗಳೇ ಅಚ್ಚರಿಗೆ ಒಳಗಾದರು.
ಹೀಗೆ ನಮ್ಮೂರಿನ ಜಾತ್ರೆ ಬಗ್ಗೆ, ಜನತೋರುವ ಶಿಸ್ತಿನ ಬಗ್ಗೆ, ಅವರು ಮಠದ ಬಗ್ಗೆ ಹೊಂದಿರುವ ಪ್ರೀತಿಯ ಕುರಿತು ಹೇಳುತ್ತಲೆ ಹೋದರೆ ಮುಗಿಯದ ಕಥನವದು. ಈ ಪರಂಪರೆ ಹೀಗೆಯೇ ಮುಂದುವರಿಯಲಿ. ಗವಿಮಠದ ಜಾತ್ರೆ ಹೇಳಿದ ಜನಸಂದಣಿ ನಿರ್ವಹಣೆ ಹಾಗೂ ಭಾವೈಕ್ಯದ ಸಂದೇಶದ ಕಥನಗಳು ದಳ್ಳುರಿಯಲ್ಲಿ ಬೆಂದು ಹೋದ ಮನೆ ಹಾಗೂ ಮನಸ್ಸುಗಳನ್ನು ತಲುಪಲಿ.
ನಾನೀಗ ಹೋಗಿಬರುವೆ.
ಇಂತಿ ನಿಮ್ಮ ಪ್ರೀತಿಯ ಗವಿಮಠದ ಜಾತ್ರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.