ADVERTISEMENT

ಹುಬ್ಬಳ್ಳಿ: ಗುರು ಸೇವೆಯಲ್ಲಿ ತೃಪ್ತಿ ಕಂಡ ಸಿದ್ಧಾರೂಢರ ಜಾತ್ರೆಯ ರಥೋತ್ಸವ ಇಂದು

ರಾಹುಲ ಬೆಳಗಲಿ
Published 16 ಫೆಬ್ರುವರಿ 2026, 2:15 IST
Last Updated 16 ಫೆಬ್ರುವರಿ 2026, 2:15 IST
   

ಹುಬ್ಬಳ್ಳಿ: ಹುಬ್ಬಳ್ಳಿ ಎಂದ ಕೂಡಲೇ ಹಲವರಿಗೆ ಹಲವು ವಿಷಯಗಳು ನೆನಪಿಗೆ ಬರತೊಡಗುತ್ತವೆ. ಮೊದಲನೇಯದ್ದು ‘ಛೋಟಾ ಮುಂಬೈ’ ಎಂಬ ಬಿರುದು, ಎರಡನೇಯದ್ದು ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮತ್ತು ಅಲ್ಲಿ ಡಾ. ರಾಜ್‌ಕುಮಾರ್ ಅವರ ‘ಆಕಸ್ಮಿಕ’ ಚಲನಚಿತ್ರದ ಹಾಡು, ಮೂರನೇಯದ್ದು ಭಾರಿ ಪ್ರಮಾಣದಲ್ಲಿ ವಾಣಿಜ್ಯ ವಹಿವಾಟು. ಈ ಎಲ್ಲದರ ಮಧ್ಯೆ ಆಗಾಗ ಗಲಾಟೆ ಮತ್ತು ಅಹಿತಕರ ಘಟನೆಗಳಿಂದಲೂ ಹುಬ್ಬಳ್ಳಿ ಹೆಸರು ಹೆಚ್ಚು ಚಾಲ್ತಿಯಲ್ಲಿ ಇರುತ್ತದೆ.

ಇಷ್ಟೆಲ್ಲ ವೈವಿಧ್ಯತೆಯಿಂದ ಕೂಡಿರುವ ಹುಬ್ಬಳ್ಳಿ ಮಾರ್ಗದ ಮೂಲಕ ಯಾರೇ ಹಾದು ಹೋದರೂ ಅಥವಾ ಅನ್ಯ ಕಾರ್ಯದ ನಿಮಿತ್ತ ನಗರಕ್ಕೆ ನಿಮಿತ್ತ ಭೇಟಿ ನೀಡಿದರೂ ಒಂದು ಧಾರ್ಮಿಕ ಕ್ಷೇತ್ರ, ಇನ್ನೊಂದು ಪ್ರಾಕೃತಿಕ ಸಂಪತ್ತಿನ ಬೆಟ್ಟಕ್ಕೆ ಭೇಟಿ ನೀಡದೇ ಸಾಗಬಾರದು ಎಂಬ ಮಾತಿದೆ. ಧಾರ್ಮಿಕ ಕ್ಷೇತ್ರವೆಂದರೆ ಹಳೇಹುಬ್ಬಳ್ಳಿ ಬಳಿಯಿರುವ ಸಿದ್ಧರೂಢ ಮಠ, ಬೆಟ್ಟವೆಂದರೆ ಸಂತೋಷ ನಗರದ ಬಳಿಯಿರುವ ನೃಪತುಂಗ ಬೆಟ್ಟ.

ಫೆಬ್ರುವರಿ ತಿಂಗಳಲ್ಲಿ ಅದರಲ್ಲೂ ಶಿವರಾತ್ರಿ ಆಸುಪಾಸಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಇದ್ದರಂತೂ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಶಿವರಾತ್ರಿಗೂ ಮುಂಚಿನ ಒಂದು ವಾರದಿಂದಲೂ ಮತ್ತು ನಂತರದ ಒಂದಕ್ಕೂ ಹೆಚ್ಚು ವಾರದವರೆಗೆ ಸಿದ್ಧರೂಢ ಮಠದ ಆವರಣವು ಸಡಗರ, ಸಂಭ್ರಮದಿಂದ ಕೂಡಿರುತ್ತದೆ. ಹಗಲಿಗಿಂತ ರಾತ್ರಿ ವೇಳೆ ಜನದಟ್ಟಣೆ ಹೆಚ್ಚಾಗುತ್ತದೆ. ಕಾಲಿಡಲು ಆಗದಷ್ಟು ಜನಸಾಗರ ಆವರಿಸಿಕೊಂಡರೆ, ಅಷ್ಟೇ ವಿಶಿಷ್ಟ ರೀತಿಯಲ್ಲಿ ಧಾರ್ಮಿಕ ಆಚರಣೆಗಳು ನಡೆಯುತ್ತವೆ.

ADVERTISEMENT

ಅಪಾರ ಸಂಖ್ಯೆ ಭಕ್ತರು ಮತ್ತು ಆರಾಧಕರ ಪಾಲಿಗೆ ಸಿದ್ಧಾರೂಢರು ಆರಾಧ್ಯ ದೈವರು. ಅವರ ಮೂರ್ತಿಯ ದರ್ಶನ ಪಡೆಯದೇ ಮತ್ತು ಮಠದ ಆವರಣದಲ್ಲಿ ಕೆಲ ಹೊತ್ತು ವಿಶ್ರಮಿಸದೇ ಅಥವಾ ಸುತ್ತು ಹಾಕದೇ, ಯಾರೂ ನಿರ್ಗಮಿಸುವುದಿಲ್ಲ. ಶತಮಾನಗಳ ಇತಿಹಾಸವುಳ್ಳ ಇಲ್ಲಿನ ಸಿದ್ಧಾರೂಢ ಮಠಕ್ಕೆ ಪ್ರತಿ ದಿನವೂ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಶಿವರಾತ್ರಿ ಸಂದರ್ಭದಲ್ಲಿ ಭಕ್ತಿಯು ತಾರಕಕ್ಕೇರುತ್ತದೆ. ಈ ಸಂದರ್ಭದಲ್ಲೇ ಹೆಚ್ಚು ಜನರು ಹೆಚ್ಚು ಸಮಯ ಮಠದಲ್ಲೇ ಕಳೆಯುತ್ತಾರೆ.

ಇಂದು ರಥೋತ್ಸವ...

ಈ ವರ್ಷ ಶಿವರಾತ್ರಿ ಪ್ರಯುಕ್ತ ಸಿದ್ಧಾರೂಢರ ಜಾತ್ರಾ ಮಹೋತ್ಸವವು ಫೆಬ್ರುವರಿ 10ರಿಂದ ಆರಂಭಗೊಂಡಿದ್ದು, ಫೆಬ್ರುವರಿ 18ರವರೆಗೆ ಮುಂದುವರೆಯಲಿದೆ. ಮಹೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದು, ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಾತ್ರೆಯ ಪ್ರಯುಕ್ತ ವಿವಿಧ ಸಂಗೀತೋತ್ಸವ, ನಾಟಕ ಪ್ರದರ್ಶನ, ರಥೋತ್ಸವ ಸೇರಿ ವಿವಿಧ ಕಾರ್ಯಕ್ರಮ ನಡೆಯುತ್ತಿವೆ. ಭಾರಿ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ರಥೋತ್ಸವವು ಅದ್ಧೂರಿಯಾಗಿ ಫೆಬ್ರುವರಿ 16ರ ಸಂಜೆ ನೆರವೇರಲಿದೆ. ಫೆಬ್ರುವರಿ 17ರಂದು ಪುಷ್ಕರಣಿಯಲ್ಲಿ ‘ಆರೂಢ ಜ್ಯೋತಿ’ ನೆರವೇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವರು. ಫೆಬ್ರುವರಿ 18ರ ಸಂಜೆ ಕೌದಿ ಪೂಜೆಯೊಂದಿಗೆ ಮಹೋತ್ಸವವು ಸಮಾರೋಪಗೊಳ್ಳಲಿದೆ.

ಜಾತ್ರೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುವ ಕಾರಣ ಯಾವುದೇ ರೀತಿಯ ಸಮಸ್ಯೆ ಮತ್ತು ಅಹಿತಕರ ಘಟನೆಗಳು ಸಂಭವಿಸದಿರಲಿ ಎಂದು ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಕಾರವಿದೆ.

ಸಿದ್ಧಾರೂಢರ ಮಹಾದ್ವಾರದಿಂದ ಮಠದವರೆಗೆ ಹಾಗೂ ಮಠದ ಸುತ್ತ–ಮುತ್ತಲಿನ ಕೆಲ ಕಾಲೊನಿಯೊಳಗೆ ಒಟ್ಟು 175 ಸಿಸಿಟಿವಿ ಕ್ಯಾಮೆರಾ ಮತ್ತು ಮೂರು–ನಾಲ್ಕು ಕಡೆ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಮಹಾದ್ವಾರದಿಂದ ಮಠದವರೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹಾಗೂ 25ಕ್ಕೂ ಹೆಚ್ಚು ಮೊಬೈಲ್ ಶೌಚಾಲಯದ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಹಿರಿಯರಿಗೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ ಹಾಗೂ ಒಂದು ವರ್ಷದ ಮಕ್ಕಳಿಗೆ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಿವಯೋಗದ ದಿನ (ಫೆಬ್ರುವರಿ 15) ಭಕ್ತರಿಗೆ ಸೆಟ್ ದೋಸೆ, ಗುಲಾಬ್ ಜಾಮೂನು ಮತ್ತು ಚಿಕ್ಕು ಹಣ್ಣುಗಳನ್ನು ವಿತರಿಸಿದರೆ, ಫೆಬ್ರುವರಿ16ರಂದು ಉಪ್ಪಿಟ್ಟು, ಅನ್ನ, ಸಾರು ಮತ್ತು ಗೋಧಿ ಹುಗ್ಗಿಯ ವ್ಯವಸ್ಥೆಯಿದೆ ಎಂದು ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ ಹೇಳಿದ್ದಾರೆ.

ಸಿದ್ಧಾರೂಢರ ಹಿನ್ನೆಲೆ...

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರದಲ್ಲಿ 1836ರ ಮಾರ್ಚ್ 26ರಂದು ಗುರುಶಾಂತಪ್ಪ ಮತ್ತು ದೇವಮಲ್ಲಮ್ಮ ಅವರ ಮಗನಾಗಿ ಜನಿಸಿದ ಸಿದ್ಧಾರೂಢರು ಕಿರಿಯ ವಯಸ್ಸಿನಲ್ಲೇ ಅಧ್ಯಾತ್ಮದತ್ತ ಆಸಕ್ತಿ ಹೊಂದಿದರು. ಬಾಲ್ಯದ ದಿನಗಳಲ್ಲೇ ತಮಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲ ಗುರುವಿನ ಶೋಧದಲ್ಲಿ ತೊಡಗಿದರು. ಕುಟುಂಬ ಸದಸ್ಯರಿಂದ ದೂರವಾಗಿ, ದೇಶವ್ಯಾಪಿ ಸಂಚರಿಸಿದರು. ಆಗ ಅವರಿಗೆ ಸಿಕ್ಕ ಗುರುಗಳಾದ ಗಜದಂಡಸ್ವಾಮೀಜಿ ಅವರಿಂದ ಹಲವು ವಿಷಯಗಳನ್ನು ಕಲಿತರು. ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು. ಗುರುವಿನ ಸೇವೆಯಲ್ಲಿ ಸಂತೃಪ್ತಿ ಕಂಡುಕೊಂಡರು. ಬದುಕಿಗೆ ಮಾರ್ಗ ಕಂಡುಕೊಂಡರು ಎಂದು ಪುರಾಣದ ಕಥೆಗಳು ಹೇಳುತ್ತವೆ.

ತಪಸ್ವಿಯಾಗಿ ಬದುಕಿದ ಸಿದ್ಧಾರೂಢರು ಲೋಕಸಂಚಾರ ಕೈಗೊಂಡು, ಕೊನೆಗೆ ನೆಲೆ ನಿಂತಿದ್ದು ಹುಬ್ಬಳ್ಳಿಯಲ್ಲಿ. ತಮ್ಮನ್ನು ಭೇಟಿಯಾದವರಿಗೆಲ್ಲ ಮಾರ್ಗದರ್ಶಿಯಾದ ಅವರು, ಜ್ಞಾನ ದಾಸೋಹ ಉಣಬಡಿಸಿದರು. ಪ್ರಾರ್ಥನೆ ಮೂಲಕ ಶಾಂತಿ, ಅಧ್ಯಾತ್ಮದಿಂದ ಬದುಕನ್ನು ಅರ್ಥಪೂರ್ಣ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಜನರಿಗೆ ತಿಳಿ ಹೇಳಿದರು. ಎಲ್ಲರನ್ನೂ ಸಮಾನದೃಷ್ಟಿಯಿಂದ ನೋಡಿದ ಅವರು, ಯಾವತ್ತೂ ಜಾತಿ ತಾರತಮ್ಯ ಮಾಡಲಿಲ್ಲ. ಯಾರನ್ನೂ ಕೀಳಾಗಿ ಕಾಣಲಿಲ್ಲ. ಸೌಹಾರ್ದ ಮತ್ತು ಸಹಬಾಳ್ವೆ ಬದುಕಿನಿಂದಲೇ ಜಗತ್ತು ಸುಂದರ ಎಂದು ವಿಷಯವನ್ನು ಎಲ್ಲರಿಗೂ ಹೇಳಿದರು. ಅವರು 1929ರ ಆಗಸ್ಟ್ 21ರಂದು ಹುಬ್ಬಳ್ಳಿಯಲ್ಲಿ ನಿಧನರಾದರು. ಅವರು ನಿರ್ಗಮಿಸಿ, ಶತಮಾನ ಸಮೀಪಿಸುತ್ತ ಬಂದರೂ ಅವರ ಕುರಿತು ಭಕ್ತಿಭಾವ ಜನರಲ್ಲಿ ಹೆಚ್ಚುತ್ತಲೇ ಇದೆ. ಶ್ರದ್ಧೆ ಮತ್ತು ಆರಾಧನೆಯು ವೃದ್ಧಿಸುತ್ತಿದೆ.

ಮಠಕ್ಕೆ ಪ್ರಮುಖರ ಭೇಟಿ...

ಶತಮಾನಗಳ ಇತಿಹಾಸ ಹಿನ್ನೆಲೆಯುಳ್ಳ ಸಿದ್ಧಾರೂಢ ಮಠಕ್ಕೆ ಆಯಾ ಕಾಲಘಟ್ಟದಲ್ಲಿ ಹಲವಾರು ಪ್ರಮುಖರು ಭೇಟಿ ನೀಡಿದ್ದಾರೆ. ಸಿದ್ಧಾರೂಢರ ಜೊತೆಗೆ ಸಂವಾದ ನಡೆಸಿದ್ದಾರೆ. 1920ರಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶನದಲ್ಲಿ ಪಾಲ್ಗೊಳ್ಳಲು ಹೊರಡುವ ಮುನ್ನ ಗಾಂಧೀಜಿ ಅವರು ಮಠಕ್ಕೆ ಭೇಟಿ ನೀಡಿದ್ದರು. 1919ರಲ್ಲಿ ಬಾಲ ಗಂಗಾಧರ ತಿಲಕ್ ಭೇಟಿ ನೀಡಿದ್ದರು. ವಿವಿಧ ವಿಷಯಗಳನ್ನು ಅವರು ಸಿದ್ಧಾರೂಢರ ಜೊತೆಗೆ ಚರ್ಚಿಸಿದ್ದರು.

ಕನ್ನಡ ಮತ್ತು ಹಿಂದಿ ಚಿತ್ರರಂಗದ ನಟ, ನಟಿಯರು ಸೇರಿದಂತೆ ಖ್ಯಾತನಾಮರು ಸಿದ್ಧಾರೂಢ ಮಠಕ್ಕೆ ಭೇಟಿ ನೀಡುತ್ತಾರೆ. ಚಲನಚಿತ್ರಗಳ ಚಿತ್ರೀಕರಣ, ಮುಹೂರ್ತ, ಪ್ರಚಾರ ಮುಂತಾದವುಗಳಿದ್ದರೆ, ಅವರು ಮೊದಲು ಸಿದ್ಧಾರೂಢ ಮಠಕ್ಕೆ ಭೇಟಿ ನೀಡುತ್ತಾರೆ. ಮಠಕ್ಕೆ ಭೇಟಿ ನೀಡುತ್ತಾರೆ, ನಿರಾಳಭಾವ ಮೂಡುತ್ತದೆ. ಎಲ್ಲಾ ಕಾರ್ಯಗಳು ಸುಸೂತ್ರವಾಗಿ ಯಾವುದೇ ಅಡಚಣೆಯಿಲ್ಲದೇ ನೆರವೇರುತ್ತದೆ ಎಂಬ ನಂಬಿಕೆ ಇದೆ.

ಬಾಲಿವುಡ್ ನಟಿ ಕಾಜಲ್ ಅವರು ತಮ್ಮ ತಾಯಿ ತನುಜಾ, ತಂಗಿ ತನೀಷಾ ಮತ್ತು ಪುತ್ರ ಯುಗ್‌ ಜೊತೆಗೆ 2017ರ ನವೆಂಬರ್ 30ಕ್ಕೆ ಮಠಕ್ಕೆ ಭೇಟಿ ನೀಡಿದ್ದರು. ಮಠದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನೆರವೇರಿಸಿದ್ದರು.

ಕೈಲಾಸ ಮಂಟಪಕ್ಕೆ ನೂರರ ಸಂಭ್ರಮ...

ಸಿದ್ಧಾರೂಢ ಮಠದಲ್ಲಿ ಇರುವ ‘ಕೈಲಾಸ ಮಂಟಪ’ ಶತಮಾನದ ಸಂಭ್ರಮದಲ್ಲಿದೆ. 1926ರಲ್ಲಿ ಸಿದ್ಧಾರೂಢರೇ ಆಸಕ್ತಿ ವಹಿಸಿ ₹70 ಸಾವಿರ ವೆಚ್ಚದಲ್ಲಿ ‘ಕೈಲಾಸ ಮಂಟಪ’ ನಿರ್ಮಿಸಿದರು. ಅವರು ಯಾವಾಗಲೂ ಅಲ್ಲಿಯೇ ಪ್ರವಚನ ನೀಡುತ್ತಿದ್ದರು. ಅದು ಈಗಲೂ ಮೂಲರೂಪದಲ್ಲೇ ಇದೆ. ಅದಕ್ಕೆ ನವೀಕರಣದ ಸ್ಪರ್ಶ ಆಕರ್ಷಕ ಮಾಡಲಾಗಿದೆ.

ವಿಶಾಲವಾದ ಕೈಲಾಸ ಮಂಟಪವನ್ನು ಕಂಬಗಳನ್ನು ಹಾಗೂ ಕಬ್ಬಿಣದ ಗಾರ್ಡರ್ ಮೇಲೆ ಕಟ್ಟಿಗೆ ಹಾಕಿ ನಿರ್ಮಿಸಲಾಗಿದೆ. 18 ಮಂಟಪ, 10 ಕಂಬಗಳಿವೆ. ಪ್ರತಿಯೊಂದು ಕಂಬದ ವಿನ್ಯಾಸ ವಿಶಿಷ್ಟವಾಗಿದೆ. ಕಂಬದ ಮೇಲೆ ‘ಓಂ ನಮಃ ಶಿವಾಯ’ ಹಾಗೂ ಸಿದ್ಧಾರೂಢ ಮಹಾರಾಜ ಎಂದು ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.