ADVERTISEMENT

ದೇವಾಲಯಗಳ ಜಿಲ್ಲೆ ವಿಜಯನಗರ: ಸಾಲು ಸಾಲು ಉತ್ಸವಗಳಿಗೆ ಲಕ್ಷ ಲಕ್ಷ ಮಂದಿ! 

ಎಂ.ಜಿ.ಬಾಲಕೃಷ್ಣ
Published 27 ಡಿಸೆಂಬರ್ 2025, 20:36 IST
Last Updated 27 ಡಿಸೆಂಬರ್ 2025, 20:36 IST
   

ರಥೋತ್ಸವ, ಜಾತ್ರೆ, ದೀಪೋತ್ಸವಗಳಲ್ಲಿ ಜನಸಾಗರವೇ ಸೇರಿತ್ತು ಎಂದು ಹೇಳುವುದನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಅದು ಸರಿಯಾಗಿ ಅನ್ವಯ ಆಗುವುದು ವಿಜಯನಗರ ಜಿಲ್ಲೆಗೇ ಎನ್ನಬೇಕು. ಇಲ್ಲಿ ನಡೆಯುವ ರಥೋತ್ಸವಗಳಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಲಕ್ಷಕ್ಕಿಂತಲೂ ಅಧಿಕ ಮಂದಿ ಸೇರುವ 20ಕ್ಕೂ ಅಧಿಕ ಜಾತ್ರೆಗಳು, ರಥೋತ್ಸವಗಳು ಜಿಲ್ಲೆಯಲ್ಲಿ ಪ್ರತಿ ವರ್ಷ ನಡೆಯುತ್ತವೆ. ಮೈಲಾರ ಕಾರ್ಣಿಕೋತ್ಸವದಲ್ಲಿ 8 ಲಕ್ಷಕ್ಕೂ ಅಧಿಕ, ಕೊಟ್ಟೂರು ರಥೋತ್ಸವದಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವುದನ್ನು ಕಂಡಾಗ ಮೈ ಮನ ರೋಮಾಂಚನಗೊಳ್ಳುತ್ತದೆ. ಜನರ ಶ್ರದ್ಧೆ, ಭಕ್ತಿ ಕಂಡು ಮನಸ್ಸು ಮುದಗೊಳ್ಳುತ್ತದೆ.

ಕೊಪ್ಪಳ ಗವಿಮಠದ ರಥೋತ್ಸವ ರಾಜ್ಯದಲ್ಲೇ ದೊಡ್ಡ ರಥೋತ್ಸವ ಮತ್ತು ಶಿರಸಿ ಮಾರಿಕಾಂಬಾ ಜಾತ್ರೆ ರಾಜ್ಯದ ಅತಿದೊಡ್ಡ ಜಾತ್ರೆ ಎಂಬ ಪ್ರತೀತಿ ಇದೆ. ಕೊಪ್ಪಳದ ಪಕ್ಕಕ್ಕೇ ಇರುವ ವಿಜಯನಗರ ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳು, ಉತ್ಸವಗಳನ್ನು ಕಂಡಾಗ ಇದು ದೇವಸ್ಥಾನಗಳ ಜಿಲ್ಲೆ ಎಂಬುದು ಗೊತ್ತಾಗುತ್ತದೆ. ಏಕೆಂದರೆ ಜಿಲ್ಲೆಯಲ್ಲಿ ವರ್ಷಕ್ಕೆ 60ಕ್ಕಿಂತ ಅಧಿಕ ಪ್ರಮುಖ ಜಾತ್ರೆಗಳು, ರಥೋತ್ಸವಗಳು, ದೀಪೋತ್ಸವಗಳು ನಡೆಯುತ್ತವೆ. 30ಕ್ಕಿಂತ ಅಧಿಕ ಉತ್ಸವಗಳು ಬಹಳಷ್ಟು ಖ್ಯಾತಿ ಗಳಿಸಿದ್ದು, ಸ್ಥಳೀಯರಲ್ಲದೆ, ಪರ ಜಿಲ್ಲೆಗಳು, ಪರ ರಾಜ್ಯಗಳಿಂದಲೂ ಬರುತ್ತಾರೆ. ಹೀಗಾಗಿ ಇಲ್ಲಿನ ಜಾತ್ರೆಗಳನ್ನು, ರಥೋತ್ಸವಗಳನ್ನು ನೋಡುವುದೇ ಒಂದು  ಬಗೆಯ ಕಣ್ಣಿಗೆ ಹಬ್ಬ. ಜನಸಾಗರ ಏನೆಂದು ತಿಳಿದುಕೊಳ್ಳಬೇಕಿದ್ದರೆ ಜಿಲ್ಲೆಗೆ ಪ್ರಮುಖ ಜಾತ್ರೆ, ರಥೋತ್ಸವಗಳಂದು ಬರಬೇಕು.

ಎಲ್ಲಾ ಮೈಲಾರಗಳಿಗೂ ಮೂಲ: ಹೂವಿನಹಡಗಲಿ ತಾಲ್ಲೂಕಿನ ಮೈಲಾರದ ಮೈಲಾರಲಿಂಗೇಶ್ವರನೇ ನಾಡಿನಾದ್ಯಂತ ಇರುವ 200ಕ್ಕೂ ಅಧಿಕ ಮೈಲಾರಲಿಂಗೇಶ್ವರ ದೇವಾಲಯಗಳಿಗೆ ಮೂಲ. ಇಲ್ಲಿ ನಡೆಯುವ ಕಾರಣಿಕೋತ್ಸವ ವಿಶ್ವಖ್ಯಾತ. ಎಂಟರಿಂದ 10 ಲಕ್ಷ ಜನ ಈ ಕಾರಣಿಕೋತ್ಸವದಲ್ಲಿ ಪಾಲ್ಗೊಳ್ಳುವುದನ್ನು ನೋಡುತ್ತಿದ್ದರೆ ಜನಸಾಗರ ಎಂದರೆ ಇದು ಎಂಬ ಉದ್ಘಾರ ಗೊತ್ತಿಲ್ಲದಂತೆಯೇ ಹೊರಡುತ್ತದೆ.

ADVERTISEMENT

ನಾಡಿನ ಭವಿಷ್ಯವಾಣಿ ಎಂದೇ ಪ್ರತೀತಿ ಇರುವ ಸ್ವಾಮಿಯ ಕಾರಣಿಕ ನುಡಿ ಆಲಿಸಲು ಲಕ್ಷಾಂತರ ಕಿವಿಗಳು ತಿಂಗಳುಗಳ ಮೊದಲೇ ಕಾತರದಿಂದ ಕಾದಿರುತ್ತವೆ. ಪುರಾಣ ಪ್ರಸಿದ್ಧ ಡೆಂಕನಮರಡಿಯಲ್ಲಿ ಸಂಜೆ 5.30 ಗಂಟೆಗೆ ಸಾಂಪ್ರದಾಯಿಕ ವಿಧಿ ವಿಧಾನ ಪೂರೈಸಿ ಗೊರವಯ್ಯ ದೈವವಾಣಿಯನ್ನು ನುಡಿಯುತ್ತಾನೆ. ಈ ಕಾರಣಿಕ ನುಡಿಯನ್ನು ಮಳೆ, ಬೆಳೆ, ವಾಣಿಜ್ಯ ವ್ಯಾಪಾರ, ರಾಜಕೀಯ ಕ್ಷೇತ್ರದ ಮೇಲೆ ತಾಳೆ ಹಾಕಿ ಭಕ್ತರು ವಿಶ್ಲೇಷಣೆ ಮಾಡುತ್ತಾರೆ.

ವಿಜಯನಗರ ಮತ್ತು ನೆರೆಯ ಜಿಲ್ಲೆಯ ರೈತರು ತಮ್ಮ ಇಡೀ ಪರಿವಾರದೊಂದಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಾಂಟಾಂ ಗಾಡಿಗಳಲ್ಲಿ ಬಂದು ಜಾತ್ರಾ ಮೈದಾನದಲ್ಲಿ ವಾಸ್ತವ್ಯ ಹೂಡುತ್ತಾರೆ. ರಾಜ್ಯದ ಏಳೆಂಟು ಪ್ರಸಿದ್ಧ ನಾಟಕ ಕಂಪನಿಗಳು ತಿಂಗಳ ಕಾಲ ಇಲ್ಲಿ ಟೆಂಟ್ ಹಾಕಿ ನಾಟಕ ಪ್ರದರ್ಶನ ನಡೆಸುತ್ತವೆ.

ಹೂವಿನಹಡಗಲಿ ತಾಲ್ಲೂಕಿನ ಐತಿಹಾಸಿಕ ಸುಪ್ರಸಿದ್ಧ ಕುರುವತ್ತಿ ಕ್ಷೇತ್ರ ತುಂಗಭದ್ರೆಯ ತಟದಲ್ಲಿರುವ ಪವಿತ್ರ ಕ್ಷೇತ್ರ. ಕಲ್ಯಾಣಿ ಚಾಲುಕ್ಯರ ದೊರೆ ಒಂದನೇ ಸೋಮೇಶ್ವರನ ಆಳ್ವಿಕೆಯ 10ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಪ್ರಾಚೀನ ಮಲ್ಲಿಕಾರ್ಜುನ ದೇವಸ್ಥಾನ ಶಿಲ್ಪಕಲಾ ವೈಭವದಿಂದ ಕಣ್ಮನ ಸೆಳೆಯುತ್ತಿದೆ. ಕುರುವತ್ತಿ ಬಸವೇಶ್ವರ ಸ್ವಾಮಿಯನ್ನು ನಾಡಿನ ಅಪಾರ ಭಕ್ತರು ಮನೆದೇವರಾಗಿ ಪೂಜಿಸುತ್ತಾರೆ. ವಿಜಯನಗರ, ದಾವಣಗೆರೆ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಪಾದಯಾತ್ರೆ ಬರುತ್ತಾರೆ. ಶಿವರಾತ್ರಿ ಅಮವಾಸ್ಯೆಯಂದು ಇಲ್ಲಿ ಜನ ಕಿಕ್ಕಿರಿದು ಸೇರುತ್ತಾರೆ.

ಹರಪನಹಳ್ಳಿಯಲ್ಲೂ ಸಾಲು ಸಾಲು ಜಾತ್ರೆ:

ಹರಪನಹಳ್ಳಿ ತಾಲ್ಲೂಕಿನಲ್ಲಿ ಹತ್ತಾರು ಉತ್ಸವಗಳಿಗೆ ಸಾವಿರಾರು ಮಂದಿ ಸೇರುವುದನ್ನು ನೋಡುವುದೇ ಚೆಂದ. ಈ ಪೈಕಿ ವರ್ಷದ ಅಂತ್ಯದಲ್ಲಿ ಅರಸೀಕೆರೆ ಗ್ರಾಮದ ದಂಡಿನ ದುರುಗಮ್ಮ ದೇವಿ ಜಾತ್ರೆಯನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಈ ದೇವಸ್ಥಾನದಲ್ಲಿ ದಲಿತರೇ ಅರ್ಚಕರಾಗಿದ್ದಾರೆ, ಕೇಲುದಾರಿ ದಲಿತ ಪೂಜಾರಿಗಳ ಪಾದಸ್ಪರ್ಶಕ್ಕೆ ಎರಡು ಕಿ.ಮೀ. ದೂರದಿಂದ ಜನರು ರಸ್ತೆಯಲ್ಲಿ ಬೋರಲಾಗಿ ಮಲಗುತ್ತಾರೆ.

ವರ್ಷದ ಆರಂಭದಲ್ಲಿ ಗುಳೇದ ಲಕ್ಕಮ್ಮದೇವಿ ಜಾತ್ರೆ ನಡೆಯುತ್ತದೆ. ಇದು ಮಧ್ಯಕರ್ನಾಟಕದ ಪ್ರಸಿದ್ಧ ಜಾತ್ರೆ. ಎತ್ತಿನಬಂಡಿ, ಟ್ರ್ಯಾಕ್ಟರ್ ಮೂಲಕ ಆಗಮಿಸುವ ಲಕ್ಷಾಂತರ ಭಕ್ತರು ಟೆಂಟ್‌ಗಳನ್ನು ಹಾಕಿ, ಜಾತ್ರೆ ಮುಗಿಸಿಕೊಂಡು ಇಲ್ಲಿಂದ ತೆರಳುತ್ತಾರೆ.

ಕೂಲಹಳ್ಳಿ ಗ್ರಾಮದ ಗೋಣಿ ಬಸವೇಶ್ವರ ರಥೋತ್ಸವವು ಫೆಬ್ರುವರಿ 27ರಂದು ಜರುಗುತ್ತದೆ. ಐದು ದಿನ ನಡೆಯುವ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪಂಚಗಣಾಧೀಶ್ವರ ಮದ್ದಾನೇಶ್ವರ ಪುತ್ರ ಗೋಣಿಬಸವೇಶ್ವರನ ಜಾತ್ರೆಗೆ, ಕೊಟ್ಟೂರು ಗುರುಬಸವೇಶ್ವರ, ಅರಸೀಕೆರೆ ಕೋಲಶಾಂತೇಶ್ವರ ಜಾತ್ರೆ, ನಾಯಕನಹಟ್ಟಿ ತಿಪ್ಪೆರುದ್ರ ಜಾತ್ರೆಗೆ ನಂಟು ಇದೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಿ ಜಾತ್ರೆ ಹಾಲಮ್ಮನ ತೋಪಿನಲ್ಲಿ ಜರುಗುತ್ತದೆ.  ದೇವದಾಸಿ ಪದ್ಧತಿ ವಿಚಾರ ಹಾಗೂ ಮಾಜಿ ದೇವದಾಸಿ ಮಹಿಳೆಯರು ಹಾಗೂ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಬರುವುದರಿಂದ ಮಹತ್ವ ಪಡೆದಿದೆ.

ಹನುಮ ಜಯಂತಿ (ಈ ಬಾರಿ ಏ.2) ಆಚರಣೆ ಹರಪನಹಳ್ಳಿ ತಾಲ್ಲೂಕಿನಲ್ಲಿ ವಿಶಿಷ್ಟ ಎನ್ನಬೇಕು. ಈ ದಿನ ನೀಲಗುಂದ, ಬೆಣ್ಣಿಹಳ್ಳಿ ಗ್ರಾಮದಲ್ಲಿ ಜೋಡು ರಥೋತ್ಸವ, ಹರಪನಹಳ್ಳಿ, ಗುಂಡಗತ್ತಿ, ಬಂಡ್ರಿ ಗ್ರಾಮಗಳಲ್ಲಿ ಆಂಜನೇಯ ಸ್ವಾಮಿ, ಅರಸೀಕೆರೆಯಲ್ಲಿ ಕೋಲಶಾಂತೇಶ್ವರ ರಥೋತ್ಸವಗಳು ಜರುಗುತ್ತವೆ.

ಚಿಗಟೇರಿ ಗ್ರಾಮದಲ್ಲಿ ನಡೆಯುವ ನಾರದಮುನಿ ಜಾತ್ರೆಯೂ ವಿಶಿಷ್ಟ. ಇಲ್ಲಿ ನಾರು ಎಸೆಯುವ ಪದ್ಧತಿ ಅನಾದಿ ಕಾಲದಿಂದ ನಡೆದುಬಂದಿದೆ. ಈ ದೇವರಿಗೆ ಸಾದರ ಲಿಂಗಾಯತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಲುವಾಗಲು ಆಂಜನೇಯ ಸ್ವಾಮಿ ರಥೋತ್ಸವವು ಸಹ ಬಹಳ ಪ್ರಸಿದ್ಧಿ.

ಬಹುದೊಡ್ಡ ಕೊಟ್ಟೂರು ರಥೋತ್ಸವ:

ಕೊಟ್ಟೂರು ಪಟ್ಟಣದಲ್ಲೇ ಇರುವ ಕೊಟ್ಟೂರೇಶ್ವರ ಲಕ್ಷ ಲಕ್ಷ ಭಕ್ತರ ಮನೆದೇವರೂ ಹೌದು. ಹೀಗಾಗಿ ಇಲ್ಲಿ ನಡೆಯುವ ರಥೋತ್ಸವಕ್ಕೆ ಬರುವ ಭಕ್ತರಲ್ಲಿ 2ರಿಂದ 3ಲಕ್ಷದಷ್ಟು ಭಕ್ತರು ಪಾದಯಾತ್ರಿಕರು ಎಂಬುದು ವಿಶೇಷ. ಫೆಬ್ರುವರಿಯಲ್ಲಿ ಜರುಗುವ ಈ ರಥೋತ್ಸವದಲ್ಲಿ 5ರಿಂದ 6 ಲಕ್ಷದಷ್ಟು ಜನ ಸೇರುತ್ತಾರೆ. ಇದು ರಾಜ್ಯದ ಅತಿ ದೊಡ್ಡ ರಥೋತ್ಸವಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಈಗಾಗಲೇ ಗಳಿಸಿಕೊಂಡಿದೆ.

ಕೊಟ್ಟೂರೇಶ್ವರರು ಸಮಾನತೆಯ ಹರಿಕಾರರಾಗಿದ್ದರು. ಅವರು ಪವಾಡಗಳ ಮೂಲಕ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ವೀರಶೈವ ಧರ್ಮ ಪುನರುಜ್ಜೀವನಗೊಳಿಸಿದ ಶರಣ ಎಂಬ ಖ್ಯಾತಿಯೂ ಅವರಿಗೆ ಇದೆ. ದಲಿತ ಸುಮಂಗಲೆಯರು ಆರತಿ ಮಾಡಿದ ನಂತರ ರಥವೇರುವ ಸ್ವಾಮಿ ಇಲ್ಲಿನ ವಿಶೇಷ. ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಕೊಟ್ಟೂರು ಮಿರ್ಚಿ ಮಂಡಕ್ಕಿಯನ್ನು ರಥೋತ್ಸವದ ನಂತರ ಭಕ್ತರು ಸವಿಯುತ್ತಾರೆ.

ಕಲೆಯ ತವರೂರಾದ ಕೊಟ್ಟೂರಿನಲ್ಲಿ ರಥೋತ್ಸವದ ನಂತರ ತಿಂಗಳುಗಟ್ಟಲೆ ವಿವಿಧ ನಾಟಕ ಕಂಪನಿಗಳ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಆಟಿಕೆ ಸಾಮಾನು, ವಿವಿಧ ತಿಂಡಿ ತಿನಿಸು, ಎಕ್ಸಿಬಿಷನ್, ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಳ ಅಂಗಡಿಗಳು ತೆರೆಯುತ್ತವೆ.

ಶಿಖರ ತೈಲಾಭಿಷೇಕ:

ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಮರುಳಸಿದ್ದೇಶ್ವರಸ್ವಾಮಿ ರಥೋತ್ಸವ ಮತ್ತು ಶಿಖರ ತೈಲಾಭಿಷೇಕ ಜಿಲ್ಲೆಯ ವಿಶಿಷ್ಟ ಆಚರಣೆಗಳಲ್ಲಿ ಒಂದು. ದಕ್ಷಿಣ ಭಾರತದಲ್ಲಿ ಗೋಪುರದ ಮೇಲಿನಿಂದ ತೈಲ ಅಭಿಷೇಕ ಮಾಡುವ ಪದ್ಧತಿ ಬೇರೆಲ್ಲೂ ಕಾಣಲು ಸಿಗುವುದಿಲ್ಲ, ಅದು ಉಜ್ಜಯಿನಿಯಲ್ಲಿ ಮಾತ್ರ. ‘ಹಂಪಿಯನ್ನು ಹೊರನೋಡು ಉಜ್ಜಯಿನಿಯನ್ನು ಒಳನೋಡು’ ಎಂಬ ಮಾತಿದ್ದು, ಉಜ್ಜಯಿನಿಗೆ ಬಂದಾಗ ಈ ಮಾತು ಯಾಕೆ ಬಂತು ಎಂಬುದು ತಿಳಿಯುತ್ತದೆ. ಏಕೆಂದರೆ ದೇವಸ್ಥಾನದ ಕೆತ್ತನೆ ಕೆಲಸಗಳು ಬಹಳ ನಾಜಾಕಾಗಿದೆ.

ಪಂಚಾಪೀಠಗಳಲ್ಲಿ ಒಂದಾದ ಉಜ್ಜಯಿನಿ ಪೀಠ ದೇಶದಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ಶಾಖಾಮಠಗಳನ್ನು ಹೊಂದಿದೆ. ಇಲ್ಲಿನ ರಥೋತ್ಸವ, ತೈಲಾಭಿಷೇಕದ ಬಳಿಕವೂ ನಾಟಕ ಪ್ರದರ್ಶನಗಳು ನಡೆಯುತ್ತವೆ.

ನೋಟಿನ ದೇವಿ:

ಕೊಟ್ಟೂರು ತಾಲ್ಲೂಕಿನ ಗಾಣಗಟ್ಟಿ ಮಾಯಮ್ಮ ದೇವಿ ನೋಟಿನ ದೇವಿ ಎಂದೇ ಪ್ರಸಿದ್ಧಿ.  ವಿವಿಧ ಬಗೆಯ ಪುಷ್ಪಗಳೊಂದಿಗೆ ಹರಕೆಹೊತ್ತ ಭಕ್ತರು ನೀಡುವ ನೋಟುಗಳಿಂದ ದೇವಿಯನ್ನು ಅಲಂಕರಿಸುವುದು ಇಲ್ಲಿನ ವೈಶಿಷ್ಟ್ಯ.

ಪಂಚಲಿಂಗಗಳ ಒಡೆಯ ವಿರೂಪಾಕ್ಷ:

ಹಂಪಿಯ ವಿರೂಪಾಕ್ಷ ತನ್ನ ಐದು ದಿಕ್ಕುಗಳಲ್ಲೂ ಐದು ಶಿವಾಲಯಗಳನ್ನು ಹೊಂದಿದ್ದು, ಪಂಚಲಿಂಗಗಳಿಗೆ ಒಡೆಯನಂತೆ ಸತ್ಯಯುಗದಿಂದಲೂ ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ. ವಿಜಯನಗರ ಸಾಮ್ರಾಜ್ಯಕ್ಕೆ ಹಂಪಿ ರಾಜಧಾನಿಯಾಗಿತ್ತು, ಆಗ ವಿರೂಪಾಕ್ಷೇಶ್ವರ ದೇವಸ್ಥಾನ ಹೊಸ ರೂಪ ಪಡೆಯಿತು, ಆದರೆ ವಿರೂಪಾಕ್ಷನ ಸನ್ನಿಧಿ ಇಲ್ಲಿ ಸಾವಿರಾರು ವರ್ಷಗಳ ಮೊದಲೇ ಇತ್ತು. ಹೀಗಾಗಿ ಇಲ್ಲಿಗೆ ದಕ್ಷಿಣ ಕಾಶಿ ಎಂಬ ಹೆಸರೂ ಇದೆ. ದೇವರಿಗೆ ಕಲ್ಯಾಣೋತ್ಸವ ನಡೆಯುವುದನ್ನು ಎಲ್ಲೆಡೆ ನೋಡುತ್ತೇವೆ, ಆದರೆ ಇಲ್ಲಿ ವಿರೂಪಾಕ್ಷನಿಗೂ, ಪಂಪಾಂಬಿಕೆಗೂ ವಿವಾಹ ನಿಶ್ಚಿತಾರ್ಥವೂ ನಡೆಯುತ್ತದೆ. ಅದಕ್ಕೆ ಫಲಪೂಜೆ ಎಂದು ಹೆಸರು. 50 ಸಾವಿರಕ್ಕೂ ಅಧಿಕ ಮಂದಿ ಈ ಫಲಪೂಜೆಗೆ ಸೇರುತ್ತಾರೆ. ಇದಾದ ನಾಲ್ಕು ತಿಂಗಳಲ್ಲಿ ಹಂಪಿಯ ಜೋಡಿ ರಥೋತ್ಸವ ನಡೆಯುತ್ತದೆ. ಇದು ಗಿರಿಜಾ ಕಲ್ಯಾಣದ ಘಳಿಗೆ ಎಂದೇ ಭಾವಿಸಲಾಗಿದೆ. ಈ ರಥೋತ್ಸವಕ್ಕೂ ಅಷ್ಟೇ, ಒಂದು ಲಕ್ಷದವರೆಗೂ ಜನ ಸೇರುತ್ತಾರೆ.

ಹೊಸಪೇಟೆ ಸುತ್ತಮುತ್ತಲಿನ ಜಂಬುನಾಥ, ಹೊಸೂರಮ್ಮ, ವಡಕರಾಯ ದೇವಸ್ಥಾನ, ಹಂಪಿಯ ಯಂತ್ರೋದ್ಧಾರಕ ಆಂಜನೇಯ, ಬುಕ್ಕಸಾಗರದ ಏಳು ಹೆಡೆ ನಾಗಪ್ಪ ಸಹಿತ ಹಲವು ಕ್ಷೇತ್ರಗಳಲ್ಲಿ ವರ್ಷಾವಧಿಯಲ್ಲಿ ನಡೆಯುವ ಉತ್ಸವಗಳು, ಜಾತ್ರೆಗಳಿಗೆ ಜನ ಸೇರುವ ಪರಿ ವಿಶಿಷ್ಟ.

ಆರ್ಥಿಕತೆಗೆ ಶಕ್ತಿ:

‘ವಿಜಯನಗರ ಜಿಲ್ಲೆಯ ಜೀವಾಳವೇ ಪ್ರವಾಸೋದ್ಯಮ ಮತ್ತು ದೇವಾಲಯಗಳು. ಹೊಸಪೇಟೆಯಲ್ಲಿ ಹೋಟೆಲ್‌ ಉದ್ಯಮ, ಸಾರಿಗೆ ಉದ್ಯಮ ಬೆಳೆಯಲು ಕಾರಣ ಹಂಪಿಗೆ ಬರುವ ಭಕ್ತರು ಮತ್ತು ಪ್ರವಾಸಿಗರು. ಅದೇ ರೀತಿ ಇಡೀ ಜಿಲ್ಲೆಯಲ್ಲಿ ದೇವಸ್ಥಾನಗಳು ಆರ್ಥಿಕತೆಗೆ ಶಕ್ತಿ ತುಂಬಿವೆ. ಇದೊಂದು ಆಶಾದಾಯ ಬೆಳವಣಿಗೆ’ ಎನ್ನುತ್ತಾರೆ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ.

‘ಬೃಹತ್ ಜಾತ್ರೆಗಳು, ರಥೋತ್ಸವಗಳಿಂದ ನೂರಾರು ಜನರು ಬದುಕು ಕಟ್ಟಿಕೊಳ್ಳುತ್ತಾರೆ, ವ್ಯಾಪಾರ ವಹಿವಾಟು ಹೆಚ್ಚುತ್ತದೆ, ಇದರ ನೇರ ಲಾಭ ದೊರೆಯುವುದು ಬಹುರಾಷ್ಟ್ರೀಯ ಕಂಪನಿ ಒಡೆತನದ ಮಾಲ್‌ಗಳಿಗಲ್ಲ, ಬದಲಿಗೆ ಸ್ಥಳೀಯ ವ್ಯಾಪಾರಿಗಳಿಗೆ. ಅಲ್ಲಿ ಹಣ್ಣು, ತರಕಾರಿ, ಮಕ್ಕಳ ಆಟದ ಸಾಮಾನು, ಹೋಟೆಲ್‌ ಸಹಿತ ನೂರಾರು ಬಗೆಯ ವ್ಯಾಪಾರ ವಹಿವಾಟು ಕುದುರುತ್ತದೆ. ಇದರಿಂದ ಹಲವರ ಬದುಕು ವರ್ಷವಿಡೀ ಸಾಗುವುದಕ್ಕೆ ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ವಾರ್ಷಿಕ ಆದಾಯ ₹25 ಕೋಟಿಗಿಂತ ಹೆಚ್ಚಿಗೆ ಇದೆ. ಈ ದುಡ್ಡೆಲ್ಲವೂ ದೇವಸ್ಥಾನದ ಅಭಿವೃದ್ಧಿಗೇ ವಿನಿಯೋಗವಾಗುತ್ತದೆ. ಪರೋಕ್ಷವಾಗಿ ಜನರ ದುಡ್ಡು ಮತ್ತೆ ಜನರಿಗೇ ಸೇರುತ್ತಿದೆ’ ಎಂದು ಹೇಳುತ್ತಾರೆ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಮನೆದೇವರು: ‘ಜಿಲ್ಲೆಯಲ್ಲಿ ಅನೇಕ ಮನೆಗಳಲ್ಲಿ ಮೈಲಾರ, ಕೊಟ್ಟೂರೇಶ್ವರ, ವಿರೂಪಾಕ್ಷ ಸಹಿತ ಹಲವು ದೇವಸ್ಥಾನಗಳು ಮನೆದೇವರಾಗಿವೆ. ಹೀಗಾಗಿ ಜಾತ್ರೆ, ಉತ್ಸವಗಳಿಗೆ ಪರವೂರುಗಳಲ್ಲಿ ಇದ್ದವರೂ ಊರಿಗೆ ಬರುತ್ತಾರೆ, ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ಪರಿಸ್ಥಿತಿ ಕರಾವಳಿ, ರಾಜ್ಯದ ದಕ್ಷಿಣ ಭಾಗದ ಕೆಲವು ದೇವಸ್ಥಾನಗಳಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ವಿಜಯನಗರ ಜಿಲ್ಲೆಯ ದೇವಸ್ಥಾನಗಳ ಜಾತ್ರೆಗಳಲ್ಲಿ, ರಥೋತ್ಸವಗಳಲ್ಲಿ, ಕಾರ್ತಿಕ ಉತ್ಸವಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಾರೆ’ ಎಂದು ಹೊಸಪೇಟೆ ತಾಲ್ಲೂಕಿನ ಮುಜರಾಯಿ ದೇವಸ್ಥಾನಗಳ ಆಡಳಿತಾಧಿಕಾರಿ ಹನುಮಂತಪ್ಪ ಹೇಳುತ್ತಾರೆ.

ಇಷ್ಟೆಲ್ಲ ತಿಳಿದುಕೊಂಡ ನಿಮಗೆ ಒಮ್ಮೆ ಜಿಲ್ಲೆಯ ಉತ್ಸವಗಳ ಪರಿಚಯ ಮಾಡಬೇಕು ಎಂಬ ಮನಸ್ಸಾಯಿತೇ, ಇಲ್ಲೇ 2026ರ ಉತ್ಸವಗಳ ಪಟ್ಟಿಯೂ ಇದೆ. ಬಿಡುವು ಮಾಡಿಕೊಂಡು ಒಮ್ಮೆ ಬಂದು ನೋಡಿಬಿಡಿ. ಜಿಲ್ಲೆಯ ಧಾರ್ಮಿಕ ಪ್ರವಾಸೋದ್ಯಮದ ಅನುಭವವನ್ನೂ ಪಡೆದುಕೊಂಡು ಹೋಗಬಹುದು.

ವಿಜಯನಗರ ಜಿಲ್ಲೆಯ ಜಾತ್ರೆ, ರಥೋತ್ಸವಗಳಲ್ಲಿ ಲಕ್ಷಾಂತರ ಜನ ಸೇರುತ್ತಿರುವುದು ಖುಷಿಯ ವಿಚಾರ. ಜಿಲ್ಲೆಯ ಸಾಮಾಜಿಕ, ಧಾರ್ಮಿಕ, ಆರ್ಥಿಕ ಸ್ಥಿತಿ ಸುಧಾರಿಸಲು ಇದು ಸಹ ಸಹಕಾರಿ ಆಗಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಜನರಿಗೆ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಹ ಪ್ರಯತ್ನಗಳು ನಡೆದಿವೆ.
ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ, ವಿಜಯುನಗರ ಜಿಲ್ಲೆ

ವಿಜಯನಗರ ಜಿಲ್ಲೆ: 2026ರ ಪ್ರಮುಖ ಜಾತ್ರೆ, ರಥೋತ್ಸವಗಳ ಪಟ್ಟಿ

* 2026ರ ಫೆ.4: ಹೂವಿನಹಡಗಲಿ ತಾಲ್ಲೂಕು ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ

* ಫೆ.17: ಹೂವಿನಹಡಗಲಿ ತಾಲ್ಲೂಕು ಕುರುವತ್ತಿ ಬಸವೇಶ್ವರ ರಥೋತ್ಸವ

* ಜ.28: ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರದ ದೊಡ್ಡಬಸವೇಶ್ವರ ರಥೋತ್ಸವ

* ಜ.20ರಿಂದ: ಹರಪನಹಳ್ಳಿ ತಾಲ್ಲೂಕು ಗುಳೇದ ಲಕ್ಕಮ್ಮದೇವಿ ಜಾತ್ರೆ

* ಫೆ.27ರಿಂದ: ಹರಪನಹಳ್ಳಿ ತಾಲ್ಲೂಕು ಕೂಲಹಳ್ಳಿ ಗೋಣಿ ಬಸವೇಶ್ವರ ರಥೋತ್ಸವ

* ಮಾರ್ಚ್‌18ರಿಂದ: ಯುಗಾದಿ ಹಬ್ಬದ ಸಂದರ್ಭದಲ್ಲಿ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಿ ಜಾತ್ರೆ

* ಏ.2: ಹನುಮ ಜಯಂತಿ: ಹರಪನಹಳ್ಳಿ ತಾಲ್ಲೂಕಿನ ಆರು ಕಡೆ ರಥೋತ್ಸವ

* ಏ.17: ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ನಾರದಮುನಿ ಜಾತ್ರೆ

* ಏ.21: ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಆಂಜನೇಯ ಸ್ವಾಮಿ ರಥೋತ್ಸವ

* ಫೆ. 12: ಕೊಟ್ಟೂರಿನ ಕೊಟ್ಟೂರೇಶ್ವರ ಮಹಾರಥೋತ್ಸವ

* ಮಾರ್ಚ್‌ 4: ಕೊಟ್ಟೂರು ತಾಲ್ಲೂಕಿನ ಗಾಣಗಟ್ಟೆ ಮಾಯಮ್ಮನ ರಥೋತ್ಸವ. ಈ ದೇವಿ ನೋಟಿನ ದೇವಿ ಎಂದೇ ಪ್ರಸಿದ್ಧಿ.

* ಮಾರ್ಚ್‌ 27: ರಾಮನವಮಿ ದಿನದಂದು ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿಯ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ಜೋಡಿ ರಥೋತ್ಸವ 

* ಮಾರ್ಚ್‌ 31: ಹೊಸಪೇಟೆ ಸಮೀಪದ ಜಂಬುನಾಥ ಗುಡ್ಡದಲ್ಲಿ ಜಂಬುನಾಥೇಶ್ವರ ರಥೋತ್ಸವ

* ಏ.2: ಹಂಪಿ ವಿರೂಪಾಕ್ಷೇಶ್ವರ ದೇವರ ಜೋಡಿ ರಥೋತ್ಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.