ADVERTISEMENT

ವಿಜಯಪುರ | ಸರ್ಕಾರಿ ವೈದ್ಯಕೀಯ ಕಾಲೇಜು: ಜಯದ ಹೊಸ್ತಿಲಿನಲ್ಲಿ ಜನ ಹೋರಾಟ

ಶತ ದಿನ ಕಂಡ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಅನಿರ್ದಿಷ್ಟಾವಧಿ ಧರಣಿ

ಬಸವರಾಜ ಸಂಪಳ್ಳಿ
Published 29 ಡಿಸೆಂಬರ್ 2025, 0:30 IST
Last Updated 29 ಡಿಸೆಂಬರ್ 2025, 0:30 IST
<div class="paragraphs"><p>ವಿಜಯಪುರದಲ್ಲಿ ಸರ್ಕಾರವೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನಾ ಜಾಥಾ</p></div>

ವಿಜಯಪುರದಲ್ಲಿ ಸರ್ಕಾರವೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನಾ ಜಾಥಾ

   

ವಿಜಯಪುರ: ‘ವಿಜಯಪುರದಲ್ಲಿ ಉದ್ದೇಶಿತ ಸಾರ್ವಜನಿಕ - ಖಾಸಗಿ ಸಹಭಾಗಿತ್ವ(ಪಿಪಿಪಿ)ದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅವಕಾಶ ನೀಡಬಾರದು, ಸರ್ಕಾರವೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು’ ಎಂಬ ಬೇಡಿಕೆಯೊಂದಿಗೆ (ಸೆಪ್ಟೆಂಬರ್‌ 18) ನಡೆಯುತ್ತಿರುವ ಜನ ಹೋರಾಟ ಶತದಿನ (ಡಿಸೆಂಬರ್‌ 26) ಕಂಡಿದೆ.

ಬಹುತೇಕ ಹೋರಾಟಗಳು, ಹೋರಾಟಗಾರರು ಒಂದೆರಡು ದಿನಕ್ಕೆ, ಇಲ್ಲವೇ ಪ್ರಚಾರಕ್ಕೆ ಸೀಮಿತವಾಗಿರುವ ಇಂದಿನ ದಿನಮಾನದಲ್ಲಿ ಸರ್ಕಾರಿ ಕಾಲೇಜಿಗಾಗಿ ನಡೆಯುತ್ತಿರುವ ಹೋರಾಟ ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೇ, ಬೆದರಿಕೆಗೆ ಬಗ್ಗದೇ ನೂರು ದಿನ ಪೂರೈಸಿದೆ.

ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಏಕೈಕ ಆಶಯದೊಂದಿಗೆ ಹೋರಾಟಗಾರರು ತಮ್ಮ ಮನೆ, ಸ್ವಂತ ಕೆಲಸ ತೊರೆದು ಸ್ಥಳದಲ್ಲೇ ರಾತ್ರಿ ಮಲಗುವುದು, ಅಲ್ಲಿಯೇ ಸ್ನಾನ, ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಆಹೋರಾತ್ರಿ ಹೋರಾಟ ನಡೆಸಿದ್ದಾರೆ.

ಜಿಲ್ಲೆಯ ಜನರು ಸ್ವಯಂ ಪ್ರೇರಿತವಾಗಿ ಹೋರಾಟಗಾರರಿಗೆ ಅಗತ್ಯ ಇರುವ ಟೆಂಟ್‌ ಹಾಕಿ, ಸ್ಟೇಜ್‌ ಮಾಡಿ ಕೊಟ್ಟಿದ್ದಾರೆ. ಒಂದೊಂದು ಹೊತ್ತಿನ ಊಟ, ಉಪಹಾರವನ್ನು ಒಬ್ಬೊಬ್ಬರು ತಂದು ಕೊಡುತ್ತಿದ್ದಾರೆ. ಕುಡಿಯುವ ನೀರು, ಮೈಕಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

‘ರಾಜಕೀಯ ಪ್ರೇರಿತ ಹೋರಾಟ’, ‘ಪೇಮೆಂಟ್‌ ಗಿರಾಕಿಗಳ ಹೋರಾಟ’, ‘ಲಪೂಟರ ಹೋರಾಟ’ ಎಂದು ಹೀಗಳೆದರೂ ಮೈಕೊರೆಯುವ ಚಳಿಯನ್ನು ಲೆಕ್ಕಿಸದೇ ಪಕ್ಷಾತೀತ, ಜಾತ್ಯತೀತವಾಗಿ ರಾಜಕೀಯ ಬದಿಗಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಪಡೆಯಲೇ ಬೇಕು ಎಂಬ ಏಕ ಉದ್ದೇಶದ ಹೋರಾಟ ಅಡಚಣೆಯನ್ನು ಮೆಟ್ಟಿನಿಂತು ಮುನ್ನುಗ್ಗುತ್ತಿದೆ.

ಒಂದು ಪಕ್ಷ, ಒಂದು ಸಂಘಟನೆ, ಒಂದು ವರ್ಗದವರು ನಡೆಸುವ ಹೋರಾಟಕ್ಕೆ ಇನ್ನೊಂದು ಪಕ್ಷ, ಸಂಘಟನೆ, ವರ್ಗದವರು ಬೆಂಬಲಿಸುವುದು ಅಪರೂಪ. ಅದರಲ್ಲೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನಿರ್ಣಯದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಆಡಳಿತ ಪಕ್ಷದ ಸಚಿವರು, ಶಾಸಕರು, ಕಾಂಗ್ರೆಸ್‌ ಮುಖಂಡರು ಪಾಲ್ಗೊಂಡಿರುವುದು ವಿಶೇಷ.

ಇಷ್ಟೇ ಅಲ್ಲದೇ, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಎಎಪಿ, ಸಿ‍ಪಿಎಂ, ಸಿಪಿಐ, ಎಬಿವಿಪಿ, ಡಿವಿಪಿ, ಡಿಎಸ್‌ಎಸ್‌, ಎಐಡಿವೈಎಫ್‌, ಎಡ–ಬಲ ಸಂಘಟನೆಗಳು, ಮಹಿಳೆಯರು, ವಯೋವೃದ್ಧರೂ, ಯುವಜನರು, ರೈತರು, ವಿದ್ಯಾರ್ಥಿಗಳು, ದಲಿತರು, ಮಠಾಧೀಶರು, ಕಲಾವಿದರು, ಸಾಹಿತಿಗಳು ಸೇರಿದಂತೆ ಎಲ್ಲರೂ ಒಂದು ಉದ್ದೇಶಕ್ಕಾಗಿ ಒಂದೇ ವೇದಿಕೆಯಲ್ಲಿ ಒಗ್ಗೂಡಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದು ಪಿಪಿಪಿ ಹೆಸರಿನಲ್ಲಿ ಜಿಲ್ಲಾಸ್ಪತ್ರೆಯನ್ನು ಲಪಟಾಯಿಸಲು ಹೊಂಚು ಹಾಕಿದ್ದ ರಾಜಕಾರಣಿಗಳು, ಆಡಳಿತಗಾರರ ಎದೆಯಲ್ಲಿ ನಡುಕ ಹುಟ್ಟಿಸಿದೆ!

ಧರಣಿ, ಪ್ರತಿಭಟನೆ, ಆಹೋರಾತ್ರಿ ಧರಣಿ, ಪತ್ರ ಚಳವಳಿ, ರಕ್ತ ಸಹಿ ಚಳವಳಿ, ಮಾನವ ಸರಪಳಿ, ಪಂಜಿನ ಮೆರವಣಿಗೆ, ಪ್ರತಿಕೃತಿ ದಹನ, ರಂಗೋಲಿ ಚಳವಳಿ ಮೂಲಕ ಹೋರಾಟಗಾರರು ಗಮನ ಸೆಳೆದಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟವನ್ನು ಆರಂಭದಲ್ಲಿ ಲಘುವಾಗಿ ‍ಪರಿಗಣಿಸಿ, ನಿರ್ಲಕ್ಷ್ಯಸಿದ್ದ ರಾಜ್ಯ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಹೋರಾಟ ತೀವ್ರ ಸ್ವರೂಪ ಪಡೆಯುತ್ತಿರುವಂತೆ ಹೋರಾಟವನ್ನೇ ದಿಕ್ಕು ತಪ್ಪಿಸಲು, ಹೋರಾಟವನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ, ಅದು ಸಾಧ್ಯವಾಗದೇ ತಮ್ಮ ಬುಡಕ್ಕೆ ಕುತ್ತು ತರುತ್ತಿದೆ ಎಂಬುದನ್ನು ಅರಿತು ಇದೀಗ ಹೋರಾಟಗಾರರ ಬೇಡಿಕೆಗೆ ಸ್ಪಂದಿಸುವ ಭರವಸೆಯ ಮಾತನಾಡುತ್ತಿದ್ದಾರೆ. ಆದರೆ, ಸರ್ಕಾರ ಅಧಿಕೃತವಾಗಿ ಸಚಿವ ಸಂ‍ಪುಟದಲ್ಲಿ ಅಂಗೀಕಾರ ಕೈಗೊಂಡು, ಘೋಷಣೆ ಮಾಡುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಅಲ್ಲದೇ, ಜನವರಿ 9ರಂದು ವಿಜಯಪುರಕ್ಕೆ ಮುಖ್ಯಮಂತ್ರಿ ಆಗಮನದ ಕಾರ್ಯಕ್ರಮ ಇದ್ದು, ಅಷ್ಟರೊಳಗೆ ತಮ್ಮ ಬೇಡಿಕೆಯನ್ನು ಅಧಿಕೃತಗೊಳಿಸಬೇಕು ಎಂದು ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಒಂದು ವೇಳೆ ಸರ್ಕಾರ ಸಚಿವ ಸಂಪುಟದಲ್ಲಿ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಅನುಮೋದನೆ ನೀಡದಿದ್ದರೆ ಹೋರಾಟವನ್ನು ತೀವ್ರಗೊಳಿಸಲು ಸಿದ್ಧತೆ ನಡೆಸಿದೆ.

ವಿಜಯಪುರದಲ್ಲಿ ಸರ್ಕಾರವೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಆಗ್ರಹಿಸಿ  ನಗರದ ಪ್ರಮುಖ ವೃತ್ತಗಳಲ್ಲಿ ರಂಗೋಲಿ ಚಳವಳಿ ನಡೆಸಿದ ಮಹಿಳೆಯರು

ಸರ್ಕಾರಿ ವೈದ್ಯಕೀಯ ಕಾಲೇಜು ಏಕೆ ಬೇಕು:

ಉತ್ತರ ಕರ್ನಾಟಕದ ಕೊನೆಯ ಜಿಲ್ಲೆಯಾದ ವಿಜಯಪುರದಲ್ಲಿ ಉತ್ತಮ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಇಲ್ಲದ ಕಾರಣ ರೋಗಿಗಳು ಇಂದಿಗೂ ಉನ್ನತ ಚಿಕಿತ್ಸೆಗಾಗಿ ಈಗಲೂ ನೆರೆಯ ಸೋಲಾಪುರ, ಮಿರಜ್‌ಗೆ ಹೋಗುತ್ತಿದ್ದಾರೆ.

ಅಲ್ಲದೇ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅಗತ್ಯ ಇರುವುದಕ್ಕಿಂತ ಹೆಚ್ಚಿನ ಮೂಲಸೌಲಭ್ಯಗಳು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಇವೆ. 149 ಎಕರೆ 12 ಗುಂಟೆ ಜಮೀನು ಇದೆ. ರಾಜ್ಯದಲ್ಲಿ ಇಷ್ಟೊಂದು ಸ್ವಂತ ಜಾಗ ಹೊಂದಿರುವ ಏಕೈಕ ಸರ್ಕಾರಿ ಆಸ್ಪತ್ರೆ ಆಗಿದೆ. ಟ್ರಾಮಾ ಸೆಂಟರ್‌, ಕ್ಯಾನ್ಸರ್‌ ಘಟಕ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಇವೆ.

ಪ್ರತಿ ದಿನಕ್ಕೆ ಅಂದಾಜು 1,500ಕ್ಕೂ ಹೆಚ್ಚು ಒಳ ರೋಗಿ ಹಾಗೂ ಹೊರರೋಗಿಗಳ ದಾಖಲಾತಿ ಇರುತ್ತದೆ. ರೋಗಿಗಳ ಸಂಖ್ಯೆ ದಿನೆದಿನೇ ಹೆಚ್ಚುತ್ತಿದೆ. ನುರಿತ ತಜ್ಞರಿಂದ ಉಪಚಾರ ನೀಡಲಾಗುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ದೊಡ್ಡ ಕಟ್ಟಡ, ಪಂಚಕರ್ಮ ಮತ್ತು ಪ್ರಕೃತಿ ಚಿಕಿತ್ಸಾಲಯ ಸೌಲಭ್ಯ ಕಟ್ಟಡ, 670 ಬೆಡ್‌ಗಳ ಜನರಲ್ ಆಸ್ಪತ್ರೆ, 150 ಬೆಡ್‌ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 60 ಬೆಡ್‌ಗಳ ಟ್ರಾಮಾ ಸೆಂಟರ್, ತುರ್ತು ನಿಗಾ ಘಟಕ, ಆಕ್ಸಿಜನ್ ಪ್ಲಾಂಟ್, ತುರ್ತು ಅಪಘಾತ ಘಟಕ, ಹೈಟೆಕ್ ಶವಾಗಾರ ಸಾರ್ವಜನಿಕರ ಸೇವೆಯಲ್ಲಿದೆ. ಈಗಾಗಲೇ ಬಿ.ಎಸ್‌ಸಿ ನರ್ಸಿಂಗ್ ಕಾಲೇಜು ಇತರೆ ವೃತ್ತಿಪರ ಪ್ಯಾರಾ ಮೆಡಿಕಲ್ ಕೋರ್ಸ್ ಕಟ್ಟಡ ಹೊಂದಿ, ಕಾರ್ಯನಿರ್ವಹಿಸುತ್ತಿವೆ. ಇಷ್ಟೆಲ್ಲ ಸೌಲಭ್ಯ ಇರುವ ಜಿಲ್ಲೆಯಲ್ಲಿ ಖಾಸಗಿ ಸಹಭಾಗಿತ್ವದ ಬದಲು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬುದು ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ವೇದಿಕೆಯ ಬೇಡಿಕೆಯಾಗಿದೆ.

ಕಿಚ್ಚು ಹಚ್ಚಿದ ಶಾಸಕರ ಹೇಳಿಕೆ:

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬೆಂಗಳೂರಿನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಸರ್ಕಾರದ ಗಮನಸೆಳೆದು, ಒತ್ತಾಯಿಸಿದ್ದರು.

ಶಾಸಕ ಯತ್ನಾಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ‘ಸರ್ಕಾರದಿಂದ ಕಾಲೇಜು ಸ್ಥಾಪಿಸಲು ಅನುದಾನದ ಕೊರತೆ ಇದೆ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶವಿದೆ’ ಎಂದು ಅಧಿವೇಶನದಲ್ಲಿ ಘೋಷಣೆ ಮಾಡಿದರು.

ಆಗ ಶಾಸಕ ಯತ್ನಾಳ ಅವರು, ‘ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಸ್ಥಾಪಿಸುವುದಾದರೆ ನಾನೂ ಟೆಂಡರ್‌ನಲ್ಲಿ ಭಾಗವಹಿಸುತ್ತೇನೆ. ₹500 ಕೋಟಿ ಹೂಡಿಕೆ ಮಾಡುತ್ತೇನೆ’ ಎಂದು ಹೇಳಿಕೆ ನೀಡಿರುವುದು ಜಿಲ್ಲೆಯ ವಿವಿಧ ಜನಪರ, ಪ್ರಗತಿಪರ, ದಲಿತ, ರೈತ, ವಿದ್ಯಾರ್ಥಿ ಸಂಘಟನೆಗಳನ್ನು ಕೆರಳಿಸಿತು.

‘ಹೋರಾಟಗಾರರು ಪೇಪೆಂಟ್‌ ಗಿರಾಕಿಗಳು, ಲಪೂಟರು’ ಎಂದು ಶಾಸಕ ಯತ್ನಾಳ ನಿಂದಿಸಿದರು. ‘ರಾಜಕೀಯ ಪ್ರೇರಿತ ಹೋರಾಟ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅನುಮಾನ ವ್ಯಕ್ತಪಡಿಸಿದರು.

‘ಜಿಲ್ಲೆಯ ಜನಪ್ರತಿನಿಧಿಗಳಾದವರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುತುವರ್ಜಿ ವಹಿಸುವ ಬದಲು ಸರ್ಕಾರಿ ಕಾಲೇಜು ಸ್ಥಾಪನೆಗೆ ಮಣ್ಣುಕೊಟ್ಟು, ಸ್ವಂತ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಸಕ್ತಿ ವಹಿಸಿದ್ದಾರೆ’ ಎಂಬ ಕಾರಣಕ್ಕೆ ಆರಂಭವಾದ ಹೋರಾಟ (ಡಿಸೆಂಬರ್‌ 29) ಇದೀಗ 103 ದಿನ ಪೂರೈಸಿದೆ.

ವಿಜಯಪುರದಲ್ಲಿ ಸರ್ಕಾರವೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಆಗ್ರಹಿಸಿ  ಗಾಂಧಿವೃತ್ತದಲ್ಲಿ ಮಾನವ ಸರಪಳಿ ರಚಿಸಿ ನಡೆದ ಹೋರಾಟ

ಹೋರಾಟಕ್ಕೆ ಬಲ ನೀಡಿದ ‘ಪ್ರಜಾವಾಣಿ’

ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಕೈತಪ್ಪಿಲಿದೆ. ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರ ಮುಂದಾಗಿರುವ ವಿಷಯದ ಕುರಿತು ವಿಸ್ತೃತವಾದ ವರದಿಯನ್ನು ಮೊದಲ ಬಾರಿಗೆ ‘ಪ್ರಜಾವಾಣಿ’ ಪ್ರಕಟಿಸುವ ಜೊತೆಗೆ ಜಿಲ್ಲೆಯ ಜನಾಭಿಪ್ರಾಯ ಆಹ್ವಾನಿಸಿ, ಆಯ್ದ ಅಭಿಪ್ರಾಯವನ್ನು ಕ್ರೋಢಿಕರಿಸಿ 15 ದಿನಗಳ ಕಾಲ ನಿರಂತರವಾಗಿ ಪ್ರಕಟಿಸುವ ಮೂಲಕ ಹೋರಾಟ ಕಾವು ಪಡೆಯಲು ವೇದಿಕೆಯಾಯಿತು. ನೂರು ದಿನಗಳಿಂದ ಹೋರಾಟವನ್ನು ಆದ್ಯತೆ ಮೇರೆಗೆ ಪ್ರಕಟಿಸುವ ಮೂಲಕ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದೆ. ‘ಪ್ರಜಾವಾಣಿ’ಯ ಜನಪರ ನಿಲುವಿಗೆ ಹೋರಾಟಗಾರರು ಮುಕ್ತಕಂಠದಿಂದ ವೇದಿಕೆಯಲ್ಲಿ ಶ್ಲಾಘಿಸುತ್ತಿರುವುದು ಹೆಮ್ಮೆಯ ಸಂಗತಿ.

ಹೋರಾಟ ಬೆಂಬಲಿಸಿದ ಪ್ರಮುಖರು:

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬ ಹೋರಾಟದಲ್ಲಿ ರಾಷ್ಟ್ರೀಯ ಜನಾರೋಗ್ಯ ಅಭಿಯಾನದ ಪ್ರಮುಖ ಹಾಗೂ ಮಧ್ಯಪ್ರದೇಶದ ಸಾಮಾಜಿಕ ಚಿಂತಕ ಅಮೂಲ್ಯ ನಿಧಿ ಹಾಗೂ ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಸ್ವಿಟ್ಜರ್‌ಲ್ಯಾಂಡ್‌ನ ನತಾಲಿಯಾ ಡಿಸೋಜಾ, ಅಮೇರಿಕಾದ ರಿಚರ್ಡ್ ಗ್ರೇ ಕೂಡ ಬೆಂಬಲ ನೀಡಿದ್ದಾರೆ.

ಸಿಪಿಎಂ ಮುಖಂಡ ಸಿದ್ಧನಗೌಡ ಪಾಟೀಲ, ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ, ಹಿರಿಯ ಪತ್ರಕರ್ತರಾದ ಸನತ್‌ಕುಮಾರ ಬೆಳಗಲಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಧಾರವಾಡದ ವಾಲ್ಮಿಯ ಮಾಜಿ ನಿರ್ದೇಶಕ ರಾಜೇಂದ್ರ ಪೋದ್ದಾರ,ಸಿಪಿಐ ರಾಜ್ಯ ಕಾರ್ಯದರ್ಶಿ ಸಾ.ತಿ ಸುಂದರೇಶ್, ಧರಣಿಯಲ್ಲಿ ಪಾಲ್ಗೊಂಡು ಬೆಂಬಲಿಸಿದ್ದಾರೆ.

ಜಿಲ್ಲೆಯ ಶಾಸಕರಾದ ಯಶವಂತರಾಯಗೌಡ ಪಾಟೀಲ, ಅಶೋಕ ಮನಗೂಳಿ, ವಿಧಾನ ಪರಿಷತ್‌ ಸದಸ್ಯರಾದ ಕೇಶವಪ್ರಸಾದ್‌, ಎನ್‌.ರವಿಕುಮಾರ್‌, ಹನುಮಂತ ನಿರಾಣಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪರ ಧ್ವನಿ ಎತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹೋರಾಟದ ವೇದಿಕೆಗೆ ಬಂದು ಮನವಿ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೊಯ್ದಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸದ್ಯ ಹಣ ಇಲ್ಲ, ನೋಡೋಣ, ಮಾಡೋಣ’ ಎಂಬ ಬಾಯ್ಮಾತಿನ ಭರವಸೆ ನೀಡಿ ಕಳಿಸಿದ್ದಾರೆ. ಸಚಿವ ಶಿವಾನಂದ ಪಾಟೀಲ ಕೂಡ ಸರ್ಕಾರಿ ಕಾಲೇಜು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ಜನಪರ ಹೋರಾಟ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಹೋರಾಟ ಸಮಿತಿ ನಿರ್ಧರಿಸಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತವಾಗಿ ಘೋಷಣೆಯಾಗುವವರೆಗೂ ಹೋರಾಟ ನಿಲ್ಲಿಸದಿರಲು ನಿರ್ಧರಿಸಿದ್ದಾರೆ.

ಇಡೀ ಜಿಲ್ಲೆಯ ಜನತೆ ಮುಖ್ಯ ಬೇಡಿಕೆಯನ್ನು ಸರ್ಕಾರ ನಿರಾಕರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ರಾಜ್ಯ ಸರ್ಕಾರ ಜನ ಹೋರಾಟದ ಎದುರು ಮಂಡಿ ಊರುವುದು ಮಾತ್ರ ಬಾಕಿ ಇದೆ.

ಮುಖ್ಯಮಂತ್ರಿ ಬಳಿಗೆ ಶೀಘ್ರದಲ್ಲೇ ಹೋರಾಟಗಾರರ ನಿಯೋಗ ಕರೆದುಕೊಂಡು ಹೋಗಿ, ಪಿಪಿಪಿ ಬೇಡ, ಸರ್ಕಾರಿ ವೈದ್ಯಕೀಯ ಕಾಲೇಜು ಆದಷ್ಟು ಶೀಘ್ರ ಆಗಲಿ ಎಂದು ನಾನೇ ಸ್ಪಷ್ಟವಾಗಿ ಮನವರಿಕೆ ಮಾಡುತ್ತೇನೆ.ಪಿಪಿಪಿ ಬೇಡ ಎಂಬುದು ನನ್ನ ಸ್ಪಷ್ಟ ನಿರ್ಧಾರ, ಪಿಪಿಪಿ ಮುಗಿದ ಅಧ್ಯಾಯ
ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ, ವಿಜಯಪುರ
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿ, ಸಚಿವ ಸಂಪುಟ ಸಭೆ ಅನುಮೋದಿಸುವವರೆಗೂ ಅನಿರ್ದಿಷ್ಟಾವಧಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ
ಅನಿಲ ಹೊಸಮನಿ, ಸದಸ್ಯ, ವಿಜಯಪುರ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ
ಜನವರಿ 9ರಂದು ಸಿಎಂ ವಿಜಯಪುರಕ್ಕೆ ಬರುವುದರೊಳಗೆ ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆಯಾಗಬೇಕು. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ
ಅರವಿಂದ ಕುಲಕರ್ಣಿ,ಸದಸ್ಯ, ವಿಜಯಪುರ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.