ADVERTISEMENT

ಆಲಮಟ್ಟಿ ಎತ್ತರಿಸಿದರೆ ಬರಡು ನೆಲ ಹಸಿರು

ಮಲ್ಲೇಶ್ ನಾಯಕನಹಟ್ಟಿ
Published 15 ಜುಲೈ 2017, 8:47 IST
Last Updated 15 ಜುಲೈ 2017, 8:47 IST
ನಾರಾಯಣಪುರ ಜಲಾಶಯದ ಕ್ರೆಸ್ಟ್‌್್ ಗೇಟಗಳಿಂದ ನೀರು ಹೊರಬಿಟ್ಟಾಗ ಕಾಣಿಸುವ ಮೋಹಕ ನೋಟ
ನಾರಾಯಣಪುರ ಜಲಾಶಯದ ಕ್ರೆಸ್ಟ್‌್್ ಗೇಟಗಳಿಂದ ನೀರು ಹೊರಬಿಟ್ಟಾಗ ಕಾಣಿಸುವ ಮೋಹಕ ನೋಟ   

ಯಾದಗಿರಿ: ಆಲಮಟ್ಟಿ ಎತ್ತರಿಸುವ ಕುರಿತು ಜಿಲ್ಲೆಯ ರೈತರಲ್ಲಿ ಬಿಸಿಬಿಸಿ ಚರ್ಚೆ ನಡೆದಿದೆ. ಆಲಮಟ್ಟಿ ಜಲಾಶಯ ಎತ್ತರಿಸುವುದರಿಂದ ಯಾರಿಗೆ ಲಾಭ? ಎಂಬ ಲೆಕ್ಕಾಚಾರವೂ ಶುರುವಾಗಿದೆ. ಆಲಮಟ್ಟಿ ಎತ್ತರಿಸುವುದರಿಂದ ಒಟ್ಟು 130 ಟಿಎಂಸಿ ನೀರು ಸಿಗಲಿದೆ.

ಇದರಿಂದ ಜಿಲ್ಲೆಯಲ್ಲಿ ‘ಮಲ್ಲಾಬಾದ’ ಏತನೀರಾವರಿ ಯೋಜನೆ ಹಾಗೂ ಭೀಮಾನದಿ ಸುತ್ತಮುತ್ತಲಿನ ಪ್ರದೇಶಕ್ಕೆ ನೀರು ಒದಗಿಸುವ ಕುರಿತು ಪ್ರಸ್ತಾಪ ಇದೆ. ಈ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೆ ಜಿಲ್ಲೆಯಲ್ಲಿ ಆಗುವ ಪರಿಸರ ಆಘಾತ ಅಧ್ಯಯನ ನಡೆಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ. ಜಿಲ್ಲಾಡಳಿತ ಈಗ ಸಾರ್ವಜನಿಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಸಿದ್ಧತೆ ನಡೆಸಿದೆ ಎಂಬುದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಮಧ್ಯ–ದಕ್ಷಿಣ ಭಾರತದ ಜೀವನದಿ ಕೃಷ್ಣಾ. ಒಟ್ಟು 2,58,948 ಚದರ ಕಿಲೋ ಮೀಟರ್ ಜಲಾನಯನ ಪ್ರದೇಶವನ್ನು ವ್ಯಾಪಿಸಿರುವ ಬೃಹತ್‌ ನದಿ ಇದಾಗಿದೆ. ಅಂದರೆ ಒಟ್ಟಾರೆ ಭೌಗೋಳಿದ ಪ್ರದೇಶ ಶೇ 8ರಷ್ಟು ಭಾಗ್ಯ ಕೃಷ್ಣಾ ನದಿಯ ಜಲಾನಯನ ಪ್ರದೇಶ ಇದೆ.

ADVERTISEMENT

ಇಷ್ಟು ದೊಡ್ಡ ಜಲಾನಯನ ಪ್ರದೇಶ ಮಹಾರಾಷ್ಟ್ರದಲ್ಲಿ–69,425 ಚದರ ಕಿಲೋ ಮೀಟರ್, ಕರ್ನಾಟದಲ್ಲಿ –1,13,271 ಚದರ ಕಿಲೋ ಮೀಟರ್, ಆಂಧ್ರ ಪ್ರದೇಶದಲ್ಲಿ 76,252 ಚದರ ಕಿಲೋ ಮೀಟರ್‌ನಷ್ಟು ವ್ಯಾಪಿಸಿದೆ. ಒಟ್ಟು ಎರಡು ಹಂತದಲ್ಲಿ ಅಭಿವೃದ್ಧಿಗೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಈಗ ಮೂರನೇ ಹಂತದಿಂದಾಗಿ ಮತ್ತಷ್ಟು ಸಾಮರ್ಥ್ಯ ಹೆಚ್ಚಿ ಕೊಳ್ಳಲಿದೆ ಎಂಬುದಾಗಿ ಯುಕೆಪಿ ಅಧಿಕಾರಿಗಳು ಹೇಳುತ್ತಾರೆ.

ಒಟ್ಟು 9 ಏತ ನೀರಾವರಿ ಯೋಜನೆಗಳಿಗೆ ಅನುಷ್ಠಾನ: 1986–87ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮೊದಲ ಹಂತದಲ್ಲಿ ಯೋಜನಾ ಆಯೋಗ, ಸಿಡಬ್ಲ್ಯೂಸಿ ₹1,214.97 ಕೋಟಿ ಅಂದಾಜು ವೆಚ್ಚದಲ್ಲಿ ಒಟ್ಟು 119 ಟಿಎಂಸಿ ನೀರನ್ನು ಬಳಸಿಕೊಂಡು 4,24,900 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಯಿತು.

ಅದೇ ರೀತಿಯಲ್ಲಿ 1998–99ರಲ್ಲಿ ಎರಡನೇ ಹಂತದಲ್ಲಿ ₹ 2,355.86 ಕೋಟಿ ವೆಚ್ಚದಲ್ಲಿ ಯೋಜನೆ ಪರಿಷ್ಕರಣೆಗೊಂಡು 54 ಟಿಎಂಸಿ ನೀರನ್ನು ಬಳಸಿಕೊಂಡು 1,97,120 ಹೆಕ್ಟೇರ್‌ ಪ್ರದೇಶಕ್ಕೆ ನೀರಾ ವರಿ ಕಲ್ಪಿಸಲಾಯಿತು. ಈಗ ಮೂರನೇ ಹಂತದಲ್ಲಿ ಕೃಷ್ಣಾ ಮೇಲ್ದಂಡೆ ಅಭಿವೃದ್ಧಿಗೆ ಸಜ್ಜಾಗಿದೆ.

ಮೂರನೇ ಹಂತದಲ್ಲಿ ಯುಕೆಪಿ 130 ಟಿಎಂಸಿ ನೀರನ್ನು ಬಳಸಿಕೊಂಡು 5,62,033 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಪ್ರದೇಶ ಕಲ್ಪಿಸುವ ಉದ್ದೇಶ ಹೊಂದಿದೆ. 519 ಮೀಟರ್‌ ಇರುವ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಯೋಜನೆ ಅನುಷ್ಠಾನ ಪೂರ್ಣಗೊಂಡರೆ ನಾರಾಯಣಪುರ ಜಲಾಶಯದಿಂದ ಒಟ್ಟು 9 ಏತ ನೀರಾವರಿ ಯೋಜನೆಗಳನ್ನು ನೂತನ ವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂಬುದಾಗಿ ಯುಕೆಪಿ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಗಳು ಯಾವುವು: ಮುಳವಾಡ ಏತನೀರಾವರಿ ಯೋಜನೆ (2,27,966 ಹೆಕ್ಟೇರ್), ಚಿಮ್ಮಲಗಿ ಏತನೀರಾವರಿ ಯೋಜನೆ (78,067 ಹೆಕ್ಟೇರ್‌), ರಾಂಪುರ (ಮಂದುವರಿದ ಯೋಜನೆ) (13,923 ಹೆಕ್ಟೇರ್), ಕೊಪ್ಪಳ ಏತ ನೀರಾವರಿ ಯೋಜನೆ (86,089 ಹೆಕ್ಟೇರ್) ನಾರಾಯಣಪುರ ಬಲದಂಡೆ (61,747 ಹೆಕ್ಟೇರ್) ಮಲ್ಲಾಬಾದ (33,730 ಹೆಕ್ಟೇರ್‌), ಭೀಮಾ ಪ್ಲಾಂಕ್ (21,572 ಹೆಕ್ಟೇರ್), ಹರಕಲ್‌ (9,249 ಹೆಕ್ಟೇರ್) ಇಂಡಿ (ಮುಂದುವರಿದ ಯೋಜನೆ–20,690 ಹೆಕ್ಟೇರ್‌) ಸೇರಿದಂತೆ ಒಟ್ಟು 5,62,033 ಹೆಕ್ಟೇರ್ ಭೂಮಿಗೆ ನೀರಾವರಿ ಭಾಗ್ಯ ಸಿಗಲಿದೆ ಎಂಬುದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ನಾರಾಯಣ ಪುರ ಜಲಾಶಯ ವ್ಯಾಪ್ತಿಗೆ ಮುಳವಾಡ ಮತ್ತು ಚಿಮ್ಮಲಗಿ ಏತನೀರಾವರಿ ಯೋಜನೆ ಒಳಪಡುವುದಿಲ್ಲ ಎನ್ನುತ್ತಾರೆ ಯುಕೆಪಿ ಅಧಿಕಾರಿಗಳು.

6,275 ಹೆಕ್ಟೇರ್ ನೀರಾವರಿ ಪ್ರದೇಶ ವಿಸ್ತರಣೆ: ಮಲ್ಲಾಬಾದ ಏತನೀರಾವರಿ ಯೋಜನೆಯನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಬಲಬಟ್ಟಿ ಗ್ರಾಮದ ಬಳಿಯಿಂದ ಜೆಬಿಸಿ ಮುಖ್ಯಕಾಲುವೆ 20.90 ಕಿಲೋ ಮೀಟರ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಎರಡನೇ ಭಾಗದಲ್ಲಿ ಜೇವರ್ಗಿ ತಾಲ್ಲೂಕಿನ ಜಮಖಂಡಿ ಗ್ರಾಮದ ಬಳಿ ಎಂಬಿಸಿ ಮುಖ್ಯ ಕಾಲುವೆಯನ್ನು 20 ಕಿಲೋ ಮೀಟರ್ ನಿರ್ಮಿಸಲು ಉದ್ದೇಶಿಸಲಾಗಿದೆ.

ಮೂರನೇ ಭಾಗದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗ ನೂರು ಹತ್ತಿರ ಎಂಬಿಸಿ ಮುಖ್ಯ ಕಾಲುವೆ ಯನ್ನು 5.40 ಕಿಲೋ ಮೀಟರ್‌ನಷ್ಟು ನಿರ್ಮಿಸಲು ಉದ್ದೇಶಿಸಲಾಗಿದೆ. ಒಟ್ಟು 28.5 ಮೀಟರ್ ಎತ್ತರಕ್ಕೆ 1.60 ಮೀಟರ್ ಅಳತೆಯ ಕೊಳವೆಗಳ ಮೂಲಕ 311 ಎಚ್‌ಪಿ ಪಂಪ್‌ಸೆಟ್‌ ಗಳನ್ನು ಅಳವಡಿಸಿ ನೀರು ಲಿಫ್ಟ್‌ ಮಾಡಲಾಗುತ್ತದೆ. ಇದರಿಂದ ಸುರಪುರ ತಾಲ್ಲೂಕಿನ ಒಟ್ಟು 6,275 ಹೆಕ್ಟೇರ್ ನೀರಾವರಿ ಪ್ರದೇಶ ವಿಸ್ತರಿಸಲಿದೆ ಎಂಬು ದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ವರದಿ ತಿಳಿಸುತ್ತದೆ.

ಭೀಮಾ ಪ್ಲಾಂಕ್‌ ಯೋಜನೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ ಮೂರರಡಿ ಭೀಮಾ ಪ್ಲಾಂಕ್‌ ಯೋಜನೆ ಕೂಡ ಒಂದಾಗಿದೆ. ‘ಭೀಮಾ ಪ್ಲಾಂಕ್‌’ ಭೀಮಾ ಮತ್ತು ಕೃಷ್ಣಾ ನದಿಗಳ ಮಧ್ಯೆ ಬರುವ ಭೂಭಾಗ. ಶಹಾಪುರ ತಾಲ್ಲೂಕಿನಲ್ಲಿ ಎಸ್‌ಬಿಸಿ ಮುಖ್ಯ ಕಾಲುವೆಯನ್ನು 75 ಕಿಲೋಮೀಟರ್ ನಿರ್ಮಾಣ ಮಾಡಿ 21,571 ಹೆಕ್ಟೇರ್ ರೈತರ ಜಮೀನು ಗಳಿಗೆ ನೀರಾವರಿ ಕಲ್ಪಿಸುವ ಉದ್ದೇಶ ಇದೆ. ಒಟ್ಟು 4 ಟಿಎಂಸಿ ನೀರು ಈ ಭಾಗಕ್ಕೆ ಸಿಗಲಿದ್ದು, ಒಟ್ಟು 36 ಗ್ರಾಮಗಳ ರೈತರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.

ಭ್ರಷ್ಟಾಚಾರ ಮುಕ್ತವಾಗಿರಲಿ
ಈ ಹಿಂದೆ ಏತನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಅನುದಾನ ಪೋಲಾಗಿದೆ. ಹನ್ನೊಂದರಲ್ಲಿ ಇದೂ ಒಂದು ಎನ್ನುವಂತಾಗಬಾರದು. ಭ್ರಷ್ಟಾಚಾರ ಮುಕ್ತ ಹಾಗೂ ಗುಣಮಟ್ಟದ ಕಾಮಗಾರಿಗಾಗಿ ಜಿಲ್ಲಾಡಳಿತ ಹದ್ದಿನ ಕಣ್ಣಿಡಬೇಕು. ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗೆ ಅದೆಷ್ಟೋ ಏತನೀರಾವರಿ ಯೋಜನೆಗಳು ಯಶಸ್ವಿ ಕಂಡಿಲ್ಲ ಎಂದು ಹಸಿರುಸೇನೆ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು.

ಹಸಿರಾಗಲಿರುವ ಬರಡು ಭೂಮಿ
ಆಲಮಟ್ಟಿ ಎತ್ತರಿಸುವುದರಿಂದ ಮಳೆಯಾಶ್ರಿತ ಬರಡು ಭೂಮಿ ಏತ ನೀರಾವರಿ ಯೋಜನೆಗಳಿಂದ ಹಸಿರಾಗಲಿದೆ. ಆದರೆ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಭಾಗದಲ್ಲಿ ಹೆಚ್ಚು ಭೂಮಿ ಮುಳುಗಡೆಯಾಗಲಿದೆ. ಅವರಿಗೂ ಪುನರ್ವಸತಿ ಕಲ್ಪಿಸಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು ಎನ್ನುತ್ತಾರೆ ಭೀಮರಾಯನಗುಡಿ ‘ಕಾಡಾ’ ಅಧ್ಯಕ್ಷ ಜಕ್ಕಪ್ಪ ಸುಬಾಸ ಯಡವೆ.

ಮಲ್ಲಾಬಾದ ಯೋಜನೆಗೆ ಒಳಪಡುವ ಗ್ರಾಮಗಳು
ನಗನೂರು, ಕೆಂಭಾವಿ, ಖಾನಾಪುರ, ಯೇವೂರ್, ಗುಂಡಪುರ, ಚಂದಪುರ, ಚಾಮ್ನಾಳ, ಕಡಮಾಗೆರಾ, ನದಿಹಾಲ್, ಕಕ್ಕಾಸ್ಗೇರಾ, ವಸ್ಸೆರಾ, ರಾಜನ್‌ಪುರ್, ಚೆನ್ನೂರು, ಕಾರ್ಕಿಹಳ್ಳಿ, ಬುಡ್ನೂರು, ದರ್ಶನಾಪುರ, ಹಾರಣಗೇರಾ, ರಾಜನಳ್ಳಿ, ಉಕ್ಕಿನಾಳ, ದಂಡಸೋಲಾಪುರ.

ಭೀಮಾ ಪ್ಲಾಂಕ್‌ ಯೋಜನೆಗೆ ಒಳಪಡುವ ಗ್ರಾಮಗಳು
ತುಮಕೂರು, ಚಿಗತ್ತಗಿ, ಹೆಬ್ಸಿಹಾಳ, ರೋತನಡಗಿ, ಬೂದಿನಾಳ, ಮಾಚನೂರು, ಖದ್ರಾಪುರ, ಬೆನಕನಹಳ್ಳಿ, ಬೆಂಡೆಗುಂಬಳಿ, ಶಿವಪುರ, ಕೋಡ್ಲೂರ, ಗವನಾಳ, ಜೋಳದಡಗಿ, ಕೋಂಗಂಡಿ, ಸೂಗೂರ, ಗೌಡ್ಲೂರು, ಅಗ್ನಾಳ್, ತಂಗಡಗಿ, ಬಲ್ಕಲ್, ನಾಲತ್ವಾಡಗಿ, ಚಿಂತನಹಳ್ಳಿ, ಇಬ್ರಾಹಿಂಪುರ, ಗಡ್ಡೆಸೂಗೂರ, ಬಿರ್‍್ನಾಳ್, ಗುರಸಣಗಿ, ಹಾಲಬಾವಿ, ಗೌಡ್ಲಿ, ಕುಮ್ನೂರ್, ಅರ್ಜುನಗಿ, ಕಂಡಳ್ಳಿ, ಬಿಳ್ಹಾರ, ಅನಕಸೂಗೂರ, ಕುರಿಹಾಳ, ಕೋಂಥಾಳ, ಚೆನ್ನೂರು.

ನದಿ ಪಾತ್ರದ ಅಂಕಿ–ಅಂಶ
2,58,948 ಕೃಷ್ಣಾ ನದಿಯ ಜಲಾನಯನ ಪ್ರದೇಶ

5,62,033 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿಕಲ್ಪಿಸುವ ಉದ್ದೇಶ

519 ಮೀಟರ್‌ ಆಲಮಟ್ಟಿ ಜಲಾಶಯದ ಈಗಿರುವ ಎತ್ತರ

524 ಮೀಟರ್‌ ಜಲಾಶಯ ಎತ್ತರಿಸಿದ ನಂತರದ ಎತ್ತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.