
ಸುರಪುರ: ‘ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಪತ್ರಕರ್ತರು ಸ್ವಾಸ್ಥ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ’ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ಪತ್ರಕರ್ತರು ತಮ್ಮ ವೈಯಕ್ತಿಕ ಜೀವನದ ಕಾರ್ಯಚಟುವಟಿಕೆ ಬದಿಗೊತ್ತಿ ಸಮಾಜದ ಆಗು-ಹೋಗುಗಳನ್ನು ಜನರಿಗೆ ತಿಳಿಸುವ ಅವರ ಸೇವೆ ಅನುಪಮ’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿ, ‘ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ. ಇಲ್ಲಿಯ ಪತ್ರಿಕಾ ಭವನ ನಿರ್ಮಾಣವಾದ ನಂತರ ಭವನಕ್ಕೆ ಎರಡು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡುವೆ’ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಯಾದಗಿರಿ ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಪ್ಪ ಸಂಕೀನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಪತ್ರಕರ್ತರ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷ ಸಿದ್ದಯ್ಯ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ನಗರಸಭೆ ಪೌರಾಯಕ್ತ ಜೀವನಕುಮಾರ ಕಟ್ಟಿಮನಿ, ಸಿಡಿಪಿಒ ಅನಿಲ ಕಾಂಬ್ಳೆ, ಪಿಡಬ್ಲ್ಯುಡಿ ಎಇಇ ಎಸ್.ಜಿ. ಪಾಟೀಲ, ಬಿಸಿಎಂ ಅಧಿಕಾರಿ ತಿಪ್ಪಾರಡ್ಡಿ, ಸಮಾಜ ಕಲ್ಯಾಣ ಎ.ಡಿ ಡಾ.ಎಂ. ಶ್ರುತಿ, ಪತ್ರಕರ್ತರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ಕಾಮನಟಗಿ, ಜಿಲ್ಲಾ ಉಪಾಧ್ಯಕ್ಷ ಗುಂಡಭಟ್ಟ ಜೋಶಿ, ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ, ಪತ್ರಿಕಾ ಸಂಪಾದಕ ಸಿದ್ದಪ್ಪ ಲಿಂಗೇರಿ, ಅಬ್ದುಲ್ ಗಫಾರ ನಗನೂರಿ ವೇದಿಕೆಯಲ್ಲಿದ್ದರು.
ಆಗಲಿದ ಶಾಸಕರಿಗೆ ಮತ್ತು ಪತ್ರಕರ್ತರಿಗೆ ಸಂತಾಪ ಸೂಚಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು, ರಾಜಕೀಯ ಮುಖಂಡರು, ವರ್ತಕರು, ಅನೇಕ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಾರ್ವಜನಿಕರು, ಪತ್ರಕರ್ತರ ಸಂಘದ ಉಪಾಧ್ಯಕ್ಷ ಶ್ರೀಕರಭಟ್ ಜೋಷಿ, ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು.
ರಾಜು ಕುಂಬಾರ ನಿರೂಪಿಸಿದರು. ಪರಶುರಾಮ ನಾಯಕ ಮಲ್ಲಿಬಾವಿ ಸ್ವಾಗತಿಸಿದರು. ಪುರುಷೋತ್ತಮ ನಾಯಕ ದೇವತ್ಕಲ್ ಪರಿಚಯಿಸಿದರು. ಕ್ಷೀರಲಿಂಗಯ್ಯಸ್ವಾಮಿ ಹಿರೇಮಠ ವಂದಿಸಿದರು.
ಪ್ರಶಸ್ತಿ ಪ್ರದಾನ: ಹಿರಿಯ ಪತ್ರಕರ್ತರಾದ ಮಲ್ಲು ಗುಳಗಿ, ಮಹಾದೇವ ಬೊಮ್ಮನಳ್ಳಿ ಅವರಿಗೆ ದಿ.ಶ್ರೀಮತಿ ಸುನೀತಾ ಹೊನ್ನಪ್ಪ ತೇಲ್ಕರ್ ಹಸನಾಪುರ ಅವರ ಸ್ಮರಣಾರ್ಥ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಧಿರೇಂದ್ರ ಕುಲಕರ್ಣಿ, ಮಲ್ಲು ಗುಳಗಿ, ಗಿರೀಶ್ ಶಾಬಾದಿ, ಪವನ್ ಕುಲಕರ್ಣಿ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಡಿ.ಸಿ.ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.