ADVERTISEMENT

`ಉತ್ತಮ ಸಾಹಿತ್ಯದ ಸಿಂಚನವಾಗಲಿ'

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 10:13 IST
Last Updated 8 ಜುಲೈ 2013, 10:13 IST

ಕೆಂಭಾವಿ: ಕವಿ ಮತ್ತು ಸಾಹಿತಿ ನಮ್ಮ ದೇಶದ ಅತ್ಯುನ್ನತ ಆಸ್ತಿ. ಇವರಿಬ್ಬರು ದೇಶದಲ್ಲಿ ನಡೆಯುವ ಅನೇಕ ಘಟನೆಗಳನ್ನು ಕವನದ ಮತ್ತು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ತಲುಪುವಂತೆ ಮಾಡುತ್ತಾರೆ ಎಂದು ಸಾಹಿತಿ ಸಿದ್ಧರಾಮ ಹೊನಕಲ್ ಹೇಳಿದರು.

ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಹಾಗೂ ಗುರು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಮುಂಗಾರು ಕವಿಗೋಷ್ಠಿ  ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಆಸೆಗೆ ಮಿತಿ ಇರಬೇಕು. ಭಗವಂತ ನಮಗೆ ಕೊಟ್ಟಿದ್ದನ್ನು ಭೋಗಿಸಿ ತೃಪ್ತಿ ಪಡಬೇಕು ಎಂಬ ಟಾಲ್‌ಸ್ಟಾಯ್ ಅವರ ಕಥೆಯನ್ನು ವಿವರಿಸಿದ ಅವರು, ಕವಿ ಮತ್ತು ಸಾಹಿತಿಗಳು ಅನಧಿಕೃತ ಶಾಸಕರಿದ್ದಂತೆ. ಶಾಸಕರು ಜನರಿಗಾಗಿ ಕೆಲಸ ಮಾಡಿದರೆ, ಇವರು ನಮ್ಮ ಸುತ್ತಲಿನ ಅನೇಕ ಪ್ರಸಂಗಗಳನ್ನು ಕವನ ಹಾಗೂ ಸಾಹಿತ್ಯದ ಸಿಂಚನದ ಮೂಲಕ ತಿಳಿ ಹೇಳುತ್ತಾರೆ ಎಂದರು.
ಚುಟುಕು ಸಾಹಿತ್ಯ ಪರಿಷತ್ ಸುರಪುರ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶರಣಪ್ಪ ಶಿರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗನಗೌಡ ಮಾಲಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ, ಮಲ್ಲನಗೌಡ ಪಾಟೀಲ, ಮಹಾಂತೇಶ ಝಳಕಿ, ನಾಗರೆಡ್ಡಿ, ದೇವಿಂದ್ರಪ್ಪ, ಕೊಡೇಕಲ್ ವಲಯ ಘಟಕದ ಅಧ್ಯಕ್ಷ ಗುರುರಾಜ ಜೋಶಿ ಇದ್ದರು.

ವೀರಣ್ಣ ಕಲಕೇರಿ ಸ್ವಾಗತಿಸಿದರು. ನಿವೇದಿತಾ ನಿರೂಪಿಸಿದರು. ಕೆಂಭಾವಿ ವಲಯ ಘಟಕದ ಅಧ್ಯಕ್ಷ ವಿಠ್ಠಲ ಚವ್ಹಾಣ ವಂದಿಸಿದರು.
ಇದಕ್ಕೂ ಮುನ್ನ ಇತ್ತೀಚಿಗೆ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೀಮಾಚಾರ್ಯ ಪುರೋಹಿತ ಅವರ ಗೌರವಾರ್ಥ ಮೌನಾಚರಣೆಯ ಮಾಡಲಾಯಿತು.

ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಅಧ್ಯಕ್ಷತೆಯಲ್ಲಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ಯಾದಗಿರಿ, ಗುಲ್ಬರ್ಗ, ವಿಜಾಪುರ ಜಿಲ್ಲೆಗಳ ಸುಮರು 70 ಕವಿಗಳು, ಸಾಹಿತಿಗಳು ಕವನ ವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.