ಸುರಪುರ: ಕಕ್ಕೇರಾ ಗ್ರಾಮ ಪಂಚಾಯಿತಿ 44 ಸದಸ್ಯರನ್ನು ಹೊಂದಿದ್ದು ರಾಜ್ಯದಲ್ಲಿಯೇ ಅತಿ ದೊಡ್ಡ ಪಂಚಾಯಿತಿಗಳಲ್ಲಿ ಒಂದಾಗಿದೆ. ಇದನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಲು ಅನೇಕ ಹೋರಾಟಗಳು ನಡೆದಿವೆ. ಈ ಬಗ್ಗೆ ಒಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ ಘಟನೆಯೂ ನಡೆದಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ನಾನು ಸಚಿವ ಬಾಲಚಂದ್ರ ಜಾರಕಿಹೊಳೆ ಅವರ ಜೊತೆ ಚರ್ಚಿಸುತ್ತೇನೆ. ಶೀಘ್ರದಲ್ಲಿಯೆ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಲಿದೆ ಎಂದು ಎಂದು ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮ ಸ್ವರಾಜ್ ಯೋಜನೆಯಡಿ ಅಂದಾಜು ರೂ. 22 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಕ್ಕೇರಾ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಕಕ್ಕೇರಾ ಪಟ್ಟಣಕ್ಕೆ ಸಾಕಷ್ಟು ಅನುದಾನ ಒದಗಿಸಿದ್ದೇನೆ. ರೂ. 30 ಕೋಟಿ ವೆಚ್ಚದಲ್ಲಿ ಪಟ್ಟಣದ ಎಲ್ಲೆಡೆ ಸಿ.ಸಿ. ರಸ್ತೆಗಳ ಕಾಮಗಾರಿ ನಡೆದಿದೆ. ರೂ. 1 ಕೋಟಿ ವೆಚ್ಚದ ಆಸ್ಪತ್ರೆ ಮಂಜೂರಾಗಿದೆ.
ವೀರಶೈವ ಭವನ, ಹಾಲುಮತ ಭವನ, ವಾಲ್ಮೀಕಿ ಭವನ, ಶಾದಿ ಮಹಲ್, ಅಂಬೇಡ್ಕರ್ ಭವನಗಳನ್ನು ಮಂಜೂರಿ ಮಾಡಿಸಿದ್ದೇನೆ. ಸೋಮನಾಥ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಹೆಸರಾಂತ ಕಲಾವಿದರನ್ನು ಆಹ್ವಾನಿಸಲಾಗುವುದು ಎಂದರು.
ತಾಲ್ಲೂಕಿಗೆ ದಾಖಲೆ ಮಟ್ಟದ ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. ಕಕ್ಕೇರಾ ಪಟ್ಟಣಕ್ಕೆ ಇನ್ನಷ್ಟು ಮನೆಗಳನ್ನು ಒದಗಿಸಲು ಯತ್ನಿಸುತ್ತೇನೆ. ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಯತ್ನಿಸಿದ್ದೇನೆ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿ ಕೈಜೋಡಿಸಿದರೆ ತಾಲ್ಲೂಕು ಮಾದರಿಯಾಗುತ್ತದೆ ಎಂದು ಅವರು ನುಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ಹವಾಲ್ದಾರ್ ಮಾತನಾಡಿ, ಕಕ್ಕೇರಾದಲ್ಲಿ ಮಹಿಳಾ ಶೌಚಾಲಯ ಮಂಜೂರು ಮಾಡಬೇಕು. ಕಾಲೇಜು ಕಟ್ಟಡ ನಿರ್ಮಾಣಕ್ಕೆ ಯುಕೆಪಿ ಜಾಗವನ್ನು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ರಮೇಶ ಶೆಟ್ಟಿ ಮಾತನಾಡಿದರು.
ಭೂದಾನಿ ದಿವಂಗತ ದೇವಿಂದ್ರಪ್ಪ ಬೋಯಿ ಅವರ ಪುತ್ರ ಸೋಮನಿಂಗಪ್ಪ ಬೋಯಿ ಅವರನ್ನು ಸನ್ಮಾನಿಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಹಾರಾವ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗುರುನಾಥ ನಾವದಗಿ ನಿರೂಪಿಸಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಿ. ಎಂ. ಹನುಮಂತರಾಜು ವಂದಿಸಿದರು.
ನಂದಣ್ಣಪ್ಪ ಪುಜಾರಿ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಂಗಮ್ಮ ಪುಜಾರಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹಣಮವ್ವ ಸೋಲಾಪುರ, ವಿರೋಧ ಪಕ್ಷದ ನಾಯಕ ಎಚ್. ಸಿ. ಪಾಟೀಲ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ದಂಡಿನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸಯ್ಯಸ್ವಾಮಿ, ಪ್ರಮುಖರಾದ ಯಲ್ಲಪ್ಪ ಕುರಕುಂದಿ, ಪರಮಣ್ಣ ಪುಜಾರಿ, ಚಿದಾನಂದ ಕಮತಗಿ, ನಿಂಗಯ್ಯ ಬೂದಗುಂಪಿ, ರಾಮಯ್ಯಶೆಟ್ಟಿ, ವೆಂಕೋಬ ದೊರೆ, ಪರಮಣ್ಣ ತೇರಿನ್, ವಿ. ಎಸ್. ಜೋಶಿ, ನಿಂಗಣ್ಣ ಚಿಂಚೋಡಿ, ಸಂಗಣ್ಣ ಬಾಕ್ಲಿ, ಇ.ಓ. ಪ್ಯಾರೆ ಮಹ್ಮದ್ ಕುತಬುದ್ದೀನ್, ತಹಸೀಲ್ದಾರ್ ಮಹ್ಮದ್ ಗೌಸುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.