ADVERTISEMENT

ಕುಂಟುತ್ತಿದೆ ಲೋಕಾಯುಕ್ತರ ತನಿಖೆ, ಬೇಸರ...!

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:35 IST
Last Updated 9 ಅಕ್ಟೋಬರ್ 2012, 9:35 IST

ಶಹಾಪುರ: ಯಾದಗಿರಿ ಜಿಲ್ಲಾ ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ಫಿರ್ಯಾದಿ ಸಲ್ಲಿಸಿ ನಂತರ ವಿಚಾರಣೆಗಾಗಿ ಲೋಕಾಯುಕ್ತ ಪೊಲೀಸ ಅಧಿಕಾರಿಗೆ ನಿರ್ದೇಶನ ನೀಡಿದ ತಾಲ್ಲೂಕಿನ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ತನಿಖೆಯು ಕುಂಟುತ್ತಾ ಸಾಗಿದೆ. ಲೋಕಾಯುಕ್ತ ಇಲಾಖೆಯನ್ನು ಅನುಮಾನಗಣ್ಣಿನಿಂದ ನೀಡುವ ದುಸ್ಥಿತಿ ಬಂದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಲೋಕಾಯುಕ್ತ ಕಾಯ್ದೆಯನ್ನು ಸದ್ಬಳಕೆ ಮಾಡಿಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಜನತೆಗೆ ತಾತ್ಕಾಲಿಕವಾಗಿ ತುಸು ಹಿನ್ನಡೆ ಉಂಟಾಗಿದೆ. ಬೆಂಗಳೂರು ನಂತರ ಅತ್ಯಧಿಕ ಲೋಕಾಯುಕ್ತ ಕೋರ್ಟ್‌ನಲ್ಲಿ ಪ್ರಕರಣಗಳು ಯಾದಗಿರಿ ಜಿಲ್ಲೆಯಲ್ಲಿ ದಾಖಲಾಗಿವೆ. ಕೋರ್ಟ್ ಜನಪರ ಕಾಳಜಿಯನ್ನು ವ್ಯಕ್ತಪಡಿಸಿ ತ್ವರಿತವಾಗಿ ವಿಚಾರಣೆ ನಡೆಸಿ ವರದಿ ಒಪ್ಪಿಸುವಂತೆ ನಿರ್ದೇನ ನೀಡಿದೆ.

 ಸಿಬ್ಬಂದಿ ಕೊರತೆ ಹಾಗೂ ಆಮೆಗತಿಯ ತನಿಖೆಯಿಂದ ಯಾಕಾದರು ಪ್ರಕರಣಗಳನ್ನು ದಾಖಲಿಸಬೇಕು.  ನ್ಯಾಯಕ್ಕಾಗಿ ಇನ್ನೆಷ್ಟು ವರ್ಷ ಹೋರಾಟ ನಡೆಸಬೇಕು. ವಂಚನೆ ಮಾಡಿದ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದುಕೊಂಡು ಹಾಗೂ ಅಕ್ರಮವಾದ ಬಗ್ಗೆ ತನಿಖೆ ನೀಡಿದ ಅಧಿಕಾರಿಗಳ ವರದಿ ಆಧಾರದ ಮೇಲೆ ದೂರು ಸಲ್ಲಿಸಿರುವಾಗ ಲೋಕಾಯುಕ್ತ ಪೊಲೀಸರು ಯಾಕೆ ದಿಟ್ಟ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಸಿದ್ದಯ್ಯ ಹಿರೇಮಠ ಪ್ರಶ್ನಿಸಿದ್ದಾರೆ.

ವರ್ಷದ ಹಿಂದೆ ಕೃಷ್ಣಾಕಾಡಾ ಅಧೀನದಲ್ಲಿ 2010-11 ಸಾಲಿನಲ್ಲಿ ಲ್ಯಾಟರಲ್‌ಗಳಿಗೆ 206 ಗೇಟು ಅಳವಡಿಸುವಲ್ಲಿ ಅಕ್ರಮದ ವಾಸನೆ ಬಂದಾಗ ಕೃಷ್ಣಾ ಕಾಡಾದ ಆಡಳಿತಾಧಿಕಾರಿ ಮುನೀಷ್ ಮೌದ್ಗೀಲ್ ತನಿಖೆ ನಡೆಸಿ 18.99ಲಕ್ಷ ಹಣ ದುರ್ಬಳಕೆಯಾಗಿದೆ. ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ವೈ.ಬಿ.ಜುಮ್ಮನಾಳ ಸೇರಿದಂತೆ ನಾಲ್ವರ ಎಂಜಿನಿಯರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ರೈತ ಮುಖಂಡ ಎಸ್.ಎಂ.ಸಾಗರ  ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಸಮಗ್ರವಾದ ದಾಖಲೆಗಳನ್ನು ಪಡೆದುಕೊಂಡು ಭ್ರಷ್ಟಾಚಾರ ಎಸಗಿದ ಭ್ರಷ್ಟ ಎಂಜಿನಿಯರಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಲೋಕಾಯುಕ್ತ ಹಾಗೂ ಸೇಷನ್ಸ್ ಕೋರ್ಟ್‌ನ ಮುಂದೆ ಖಾಸಗಿ ಫಿರ್ಯಾದಿ ಸಲ್ಲಿಸಿದ್ದರು. ಜಿಲ್ಲಾ ಸೇಷನ್ಸ್ ಕೋರ್ಟ್‌ನ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ ವಿಚಾರಣೆ ನಡೆಸಿ ವರದಿ ಒಪ್ಪಿಸುವಂತೆ ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿಗೆ ನಿರ್ದೇನ ನೀಡಿದ್ದರು.

ವರ್ಷಗತಿಸಿದರು ಕೂಡಾ ತನಿಖೆಯ ವರದಿಯನ್ನು ಕೋರ್ಟ್‌ಗೆ ಒಪ್ಪಿಸದೆ ವಿಳಂಬ ನೀತಿಯನ್ನು ಲೋಕಾಯುಕ್ತ ಪೊಲೀಸರು ನಡೆಸಿದ್ದಾರೆ. ಪ್ರತಿ ಮುದ್ದತ್ತಿನ ದಿನಾಂಕದಂದು  ಕೋರ್ಟ್‌ಗೆ ಅಲೆದು ನಮಗೂ ಸಾಕಾಗಿದೆ ಎಂದು ಸಾಗರ ಬೇಸರ ವ್ಯಕ್ತಪಡಿಸಿದ್ದಾರೆ.

ಅದರಂತೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಕಾಲೇಜಿಗೆ ಬೇಕಾಗುವ ಪಿಠೋಪಕರಣ ಹಾಗೂ ಸಾಮಗ್ರಿ ಖರೀದಿಯಲ್ಲಿ 22.49ಲಕ್ಷ ಮೌಲ್ಯದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಸಿದ್ದಯ್ಯ ಹಿರೇಮಠ ಲೋಕಾಯುಕ್ತ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.

ತನಿಖೆ ಮಾತ್ರ ಪೂರ್ಣಗೊಂಡಿಲ್ಲ. ಅಕ್ರಮ ಎಸಗಿದ ಆರೋಪಿಗಳು ನಮ್ಮ ವಿರುದ್ಧ ಸೇಡಿನ ಮನೋಭಾವದಿಂದ ನೋಡುತ್ತಿದ್ದಾರೆ. ದೂರುಗಳನ್ನು ವಾಪಸ್ಸು ಪಡೆದುಕೊಳ್ಳುವಂತೆ ಹಿಂಬಾಲಕರ ಮೂಲಕ ಒತ್ತಡ ಹೇರುತ್ತಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ರಕ್ಷಿಸುತ್ತಿದ್ದಾರೆ ಎಂಬ ಗುಮಾನಿ ನಮ್ಮನ್ನು ಕಾಡುತ್ತಲಿದೆ ಎಂದು ಸಿದ್ದಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಗೋಗಿ ಗ್ರಾಮದ 500 ಮನೆ ಗುಳುಂ ಹಗರಣಕ್ಕೆ ಸಂಬಂಧಿಸಿದಂತೆ 10 ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಿರ್ದೇನ ನೀಡಿದ್ದಾರೆ. ಅಕ್ರಮದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಲೋಕಾಯುಕ್ತ ಕೋರ್ಟ್‌ನಲ್ಲಿ ಸಾಹೇಬಗೌಡ ಬಿಳಾರ ಎನ್ನುವರು ದೂರು ಸಲ್ಲಿಸಿದ್ದಾರೆ.

ಇದರಂತೆ ಹಲವಾರು ಪ್ರಕರಣಗಳಲ್ಲಿ ತನಿಖೆಯು ನಿರೀಕ್ಷಿತ ಪ್ರಮಾಣದಲ್ಲಿ ಸಾಗುತ್ತಿಲ್ಲ. ನಮಗೆ ಎಂತಹ ಸಂದಿಗ್ದ ಪರಿಸ್ಥಿತಿ ಬಂದಿದೆ ಎಂದರೆ ಶೀಘ್ರ ವಿಚಾರಣೆ ನಡೆಸಿ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಲೋಕಾಯುಕ್ತ ಕಚೇರಿ ಮುಂದೆ ಧರಣಿ ಇಲ್ಲವೆ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ ಎನ್ನುತ್ತಾರೆ ಎಸ್.ಎಂ.ಸಾಗರ.

ಕೆಲ ಭ್ರಷ್ಟ ಅಧಿಕಾರಿಗಳು ಕೋರ್ಟ್‌ನ ಮೆಟ್ಟಿಲು ಹತ್ತಿದಾಗ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕೃರಿಸಿವೆ. ಲೋಕಾಯುಕ್ತ ಪೊಲೀಸ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ತನಿಖೆಯನ್ನು ಚುರುಕುಗೊಳಿಸಬೇಕು ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಲೋಕಾಯುಕ್ತ ಕೋರ್ಟ್‌ನಲ್ಲಿ ದೂರು ಸಲ್ಲಿಸಿದ ಅರ್ಜಿದಾರರು ಎಚ್ಚರಿಕೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.