ADVERTISEMENT

ಕೆಂಭಾವಿಯಲ್ಲಿ ಮಳೆ: ರಸ್ತೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 6:35 IST
Last Updated 1 ಜೂನ್ 2011, 6:35 IST

ಕೆಂಭಾವಿ: ಪಟ್ಟಣದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ರಸ್ತೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡಿದ್ದವು. ನಗರದ ವಿವಿಧ ಬಡಾವಣೆಗಳಲ್ಲಿ ಮಳೆಯ ನೀರಿನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಪಟ್ಟಣದ ವಿವಿಧ ಬಡಾವಣೆಗಳ ರಸ್ತೆಗಳ ಮೇಲೆ ನೀರು ನಿಂತಿದ್ದರಿಂದ ರಸ್ತೆ ಯಾವುದು, ಚರಂಡಿ ಯಾವುದು ಎಂಬುದು ತಿಳಿಯದಂತಾಗಿತ್ತು. ಟಿಪ್ಪು ಸುಲ್ತಾನ್ ವೃತ್ತ, ಮುಖ್ಯ ಬಜಾರ್, ಬಸ್ ನಿಲ್ದಾಣ, ಯಡಿಯಾಪುರ ರಸ್ತೆಗಳಲ್ಲಿ ನೀರು ನಿಂತಿದೆ. ಭಾರಿ ಮಳೆಗೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕೆಲ ಮಳಿಗೆಗಳಿಗೆ ನೀರು ನುಗ್ಗಿದ್ದು, ಅಲ್ಪ ಹಾನಿ ಸಂಭವಿಸಿದೆ.

ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದು ಹಾಗೂ ಚರಂಡಿಗಳು ಚಿಕ್ಕದಾಗಿರುವುದರಿಂದ ಭಾರಿ ಪ್ರಮಾಣದ ನೀರು ಒಮ್ಮೆಲೆ ಹರಿದು ಬಂದಿದ್ದು, ರಸ್ತೆಗಳಲ್ಲಿ ನೀರು ನಿಲ್ಲುವಂತಾಗಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ತೀವ್ರ ಪರದಾಡುವಂತಾಯಿತು.

ಇನ್ನೊಂದೆಡೆ ಬೆಲೆ ಇಲ್ಲದೇ ರಸ್ತೆಗಳ ಪಕ್ಕದಲ್ಲಿ ಶೇಖರಣೆ ಮಾಡಿರುವ ಬತ್ತದ ರಾಶಿಗೂ ಮಳೆಯಿಂದಾಗಿ ಹಾನಿ ಉಂಟಾಗಿದೆ. ಮೇಲ್ಭಾಗದಲ್ಲಿ ಮಳೆ ನೀರು ಸಿಡಿದಿಲ್ಲವಾದರೂ, ನೆಲದಲ್ಲಿನ ತೇವಾಂಶದಿಂದಾಗಿ ಬತ್ತಕ್ಕೆ ಹಾನಿಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

ಈಗಾಗಲೇ ಹಲವಾರು ಬಾರಿ ಮನವಿ ಮಾಡಿದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಗಾಲ ಆರಂಭವಾಗುತ್ತಿದ್ದು, ಬತ್ತವನ್ನು ಸಂಗ್ರಹಣೆ ಮಾಡಿಟ್ಟುಕೊಳ್ಳುವುದು ದುಸ್ತರವಾಗಲಿದೆ. ಕೊನೆಗೆ ಸಿಕ್ಕಷ್ಟು ಬೆಲೆಗೆ ಮಾರುವ ಪರಿಸ್ಥಿತಿ ತಲೆದೋರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.