ADVERTISEMENT

ಕೊಠಡಿಗಳೇ ಇಲ್ಲ: ಮರವೇ ಎಲ್ಲ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 8:00 IST
Last Updated 17 ಸೆಪ್ಟೆಂಬರ್ 2011, 8:00 IST

ಯಾದಗಿರಿ: “ಕುಂತ ಓದಾಕ ಒಂದ ರೂಮ್ ಇದ್ರ ಸಾಕರಿ. ಒಂದ ರೂಮನ್ಯಾಗ ಎರಡ ಕ್ಲಾಸಿನ ಹುಡಗೋರ ಕುಂತೇವ ನೋಡ್ರಿ. ಇದು ಇಲ್ಲಂದ್ರ, ಗಿಡದ ಕೆಳಗ ಕುಂತ ಪಾಠ ಕೇಳಬೇಕಾಗೈತಿ. ನಾವು ಯಾರಿಗೆ ಅಂತ ಹೇಳೋಣ್ರಿ. ನಾವು ಸಾಲಿ ಕಲ್ಯಾಕ ಬಂದೇವಿ. ನಮಗೇನ ಗೊತ್ತಾಗುದ್ರಿ”

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಗೋಳಿ ಇದು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂಬ ಕಾಯ್ದೆ ಜಾರಿಗೆ ಬಂದಿರುವುದು ಒಂದೆಡೆಯಾದರೆ, ಪಾಠ ಬೋಧಿಸಿ ಎಂದು ಬರುವ ವಿದ್ಯಾರ್ಥಿಗಳೂ ಸೌಕರ್ಯಕ್ಕಾಗಿ ಪರದಾಡುವ ಸ್ಥಿತಿ ಜಿಲ್ಲೆಯಲ್ಲಿ ಉದ್ಭವಿಸುತ್ತಿದೆ. ಕುಳಿತುಕೊಳ್ಳಲು ಡೆಸ್ಕ್ ಇಲ್ಲದಿದ್ದರೂ ಸರಿ, ಕುಳಿತುಕೊಳ್ಳಲು ಒಂದು ಕೊಠಡಿಯನ್ನಾದರೂ ಒದಗಿಸಿ ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.

ಜಿಲ್ಲೆಯ ಬಹುತೇಕ ಗ್ರಾಮಗಳ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಾದ ಶಾಲಾ ಕೊಠಡಿಗಳ ಕೊರತೆ ಎದ್ದು ಕಾಣುತ್ತಿದೆ. ಸರ್ವ ಶಿಕ್ಷಣ ಅಭಿಯಾನದಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಮುಂದಾಗಿದ್ದರೂ, ವಿದ್ಯಾರ್ಥಿಗಳು ಮಾತ್ರ ಮರದ ನೆರಳಲ್ಲಿ ಪಾಠ ಕೇಳುವ ತಾಪತ್ರಯ ತಪ್ಪುತ್ತಿಲ್ಲ.

ಒಂದಿಲ್ಲೊಂದು ಕಾರಣಕ್ಕಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಕೊಠಡಿಗಳೇ ಇಲ್ಲದಾಗಿದ್ದು, ಪಾಠ ಕೇಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಾಲೆಗೆ ಬಂದೊಡನೆ ಮತ್ತೆ ಯಾವಾಗ ಮನೆಯತ್ತ ಹೋಗುವುದು ಎಂಬ ಚಿಂತೆ ಮಕ್ಕಳನ್ನು ಆವರಿಸುವಂತಾಗಿದೆ.

ಯಾದಗಿರಿ ತಾಲ್ಲೂಕಿನ ಕ್ಯಾಸಪನಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ಏಳು ತರಗತಿಗಳಿವೆ. ಆದರೆ ಕೋಣೆಗಳಿರುವುದು ಮಾತ್ರ ಕೇವಲ ನಾಲ್ಕು. ನಲಿ-ಕಲಿ ಅಡಿ ಕಲಿಯುತ್ತಿರುವ 1, 2 ಹಾಗೂ 3 ನೇ ತರಗತಿಯ ಮಕ್ಕಳನ್ನು ಒಂದೇ ಕೋಣೆಯಲ್ಲಿ ಕೂಡ್ರಿಸಲಾಗುತ್ತದೆ. 5 ಮತ್ತು 6 ನೇ ತರಗತಿಯ ಮಕ್ಕಳೂ ಒಂದೇ ಕೊಠಡಿಯಲ್ಲಿ ಪಾಠ ಕೇಳಬೇಕು. ಇನ್ನು 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಗಳಿವೆ. 4 ಮತ್ತು 5 ನೇ ತರಗತಿಯ ಮಕ್ಕಳು ಒಂದೇ ಕೋಣೆಯಲ್ಲಿ ಕೂಡ್ರುವುದರಿಂದ ಯಾರಿಗೆ, ಯಾವ ಪಾಠ ಬೋಧನೆ ಮಾಡಲಾಗುತ್ತಿದೆ ಎಂಬುದೇ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಚಾಮನಾಳ ಶಾಲೆಯಲ್ಲೂ ಇದೇ ಸ್ಥಿತಿ ಇದೆ. ಇದಕ್ಕಾಗಿ ಶಾಲೆಯ ಶಿಕ್ಷಕರು ಹೊಸ ಉಪಾಯ ಕಂಡು ಹಿಡಿದಿದ್ದು, ಶಾಲೆಯ ಹೊರಗೋಡೆಗಳ ಮೇಲೆಯೇ ಕಪ್ಪು ಹಲಗೆಯನ್ನು ಬರೆಸಿದ್ದಾರೆ. ಶಾಲೆಯ ಹೊರಗಡೆಯೇ ಮೂರು ತರಗತಿಯ ಮಕ್ಕಳನ್ನು ಕೂಡ್ರಿಸಿ ಪಾಠ ಮಾಡುತ್ತಾರೆ.

ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಅವರ ಸ್ವಗ್ರಾಮವಾದ ಅರಕೇರಾ ಬಿ. ಗ್ರಾಮದಲ್ಲೂ ಶಾಲಾ ಕೋಣೆಯ ದುರಸ್ತಿ ಇರುವುದರಿಂದ ಮಕ್ಕಳು ಮರದ ನೆರಳಿನಲ್ಲಿಯೇ ಪಾಠ ಕೇಳುವಂತಾಗಿದೆ. ಕಾರಣ ಕೇಳಿದರೆ, ದುರಸ್ತಿ ಮಾಡಲಾಗುತ್ತಿದೆ ಎಂಬ ಉತ್ತರ ಕೇಳಿ ಬರುತ್ತಿದೆ.

143 ಕೊಠಡಿ ಕೊರತೆ: ಜಿಲ್ಲೆಯಲ್ಲಿ 143 ಪ್ರಾಥಮಿಕ ಶಾಲಾ ಕೊಠಡಿಗಳ ಕೊರತೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸ್ಸಣ್ಣ ಮಹಾಂತಗೌಡ ಹೇಳುತ್ತಾರೆ.

ಸದ್ಯಕ್ಕೆ 4899 ಶಾಲಾ ಕೊಠಡಿಗಳಿದ್ದು,, 143 ಕೊಠಡಿಗಳು ಬೇಕಾಗಿವೆ. ಸರ್ವ ಶಿಕ್ಷಣ ಅಭಿಯಾನ, ಮತ್ತಿತರ ಯೋಜನೆಗಳ ಅಡಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಬಹುತೇಕ ಗ್ರಾಮಗಳಲ್ಲಿ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ನಿವೇಶನದ ಕೊರತೆ ಎದುರಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಇದರ ಜೊತೆಗೆ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಒಂದೆಡೆ ಅವುಗಳನ್ನು ಪರಿಗಣಿಸ ಬೇಕೋ, ಬೇಡವೋ ಎಂಬ ಜಿಜ್ಞಾಸೆ ಶಿಕ್ಷಕರನ್ನು ಆವರಿಸುತ್ತಿದ್ದು, ಕೊನೆಯ ಕ್ಷಣದಲ್ಲಿ ಇಂತಹ ಕೊಠಡಿಗಳನ್ನು ಬಳಕೆಯಲ್ಲಿರುವುದಾಗಿ ಪರಿಗಣಿಸಲಾಗುತ್ತಿದೆ. ವಾಸ್ತವವಾಗಿ ಅಪಾಯಕಾರಿ ಆಗಿರುವುದರಿಂದ ಇಂತಹ ಕೊಠಡಿಗಳಲ್ಲಿ ಪಾಠ ಬೋಧನೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

ಇನ್ನೊಂದೆಡೆ ಪ್ರೌಢಶಾಲೆಗಳಲ್ಲೂ ಕೊಠಡಿಗಳ ಕೊರತೆ ಇದ್ದು, ಈ ವರ್ಷ ಎಲ್ಲ ಕೊಠಡಿಗಳು ನಿರ್ಮಾಣವಾಗಲಿವೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಪ್ರತಿಯೊಂದು ಪ್ರೌಢಶಾಲೆಗೂ 8 ತರಗತಿಯ ಕೊಠಡಿ ಹಾಗೂ 8 ಇತರ ಕೊಠಡಿಗಳನ್ನು ನಿರ್ಮಿಸಲು ಅವಕಾಶವಿದೆ. ಕಳೆದ ಮೂರು ವರ್ಷಗಳಿಂದ ಈ ಯೋಜನೆಗೆ ಮಂಜೂರಾತಿ ನೀಡಿದ್ದರೂ, ಯೋಜನೆ ಜಾರಿಗೊಳಿಸುವ ಸಂಸ್ಥೆಗಾಗಿ ಹುಡುಕಾಟ ನಡೆದಿದೆ. ಈ ವರ್ಷ ಒಂದು ಸಂಸ್ಥೆಗೆ ಯೋಜನೆಯ ಜವಾಬ್ದಾರಿ ವಹಿಸಲಿದ್ದು, ಮೂರೂ ವರ್ಷದ ಯೋಜನೆ ಒಂದೇ ವೇಳೆ ಕಾರ್ಯರೂಪಕ್ಕೆ ಬರಲಿವೆ. ಹೀಗಾಗಿ ಪ್ರೌಢಶಾಲೆಗಳಲ್ಲಿ ಯಾವುದೇ ಕೊಠಡಿಯ ಕೊರತೆ ಎದುರಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.