ADVERTISEMENT

ಖಾಸಗಿ ಕಟ್ಟಡದಲ್ಲಿ ವಸತಿ ನಿಲಯ ಆರಂಭ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 6:15 IST
Last Updated 22 ಅಕ್ಟೋಬರ್ 2012, 6:15 IST
ಖಾಸಗಿ ಕಟ್ಟಡದಲ್ಲಿ ವಸತಿ ನಿಲಯ ಆರಂಭ!
ಖಾಸಗಿ ಕಟ್ಟಡದಲ್ಲಿ ವಸತಿ ನಿಲಯ ಆರಂಭ!   

ವಾಡಿ: ಗ್ರಾಮೀಣ ಪ್ರದೇಶದ ಪ್ರೌಢ ಶಾಲಾ ಬಾಲಕಿಯರ ಸಲುವಾಗಿ ಲಕ್ಷಂತಾರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಬಾಲಕಿಯರ ವಸತಿ ನಿಲಯ ಕಾಮಗಾರಿ ಕಟ್ಟಡ ನಿಗದಿತ ಸಮಯಕ್ಕೆ ಪೂರ್ಣಗೊಂಡಿಲ್ಲ. ಇದರಿಂದ ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಳ್ಳುವದಕ್ಕಾಗಿ ಖಾಸಗಿ ಕಟ್ಟಡವೊಂದರಲ್ಲಿ ವಸತಿ ನಿಲಯ ಆರಂಭಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಸಮೀಪ ಇರುವ ನಾಲವಾರ ಗ್ರಾಮದ ಹೊರ ವಲಯದ ಮುಖ್ಯ ರಸ್ತೆ ಪಕ್ಕದಲ್ಲಿ 2009ರಲ್ಲಿ (ಕೆ.ಜಿ.ಬಿ.ವಿ) ಡಾ.ನಂಜುಂಡಪ್ಪ ವರದಿಯನ್ವಯ ವಿಶೇಷ ಅಭಿವೃದ್ಧಿ ಯೋಜನೆ ಅಡಿ ಸುಮಾರು 69.85ಲಕ್ಷ ರೂಪಾಯಿ ವೆಚ್ಚದಲ್ಲಿ ಬಾಲಕಿಯರ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.

ಅಂದು ಈ ಕಟ್ಟಡಕ್ಕೆ ಚಿತ್ತಾಪುರ ಶಾಸಕ ವಾಲ್ಮೀಕ ನಾಯಕ ಅಡಿಗಲ್ಲು ನೆರವೇರಿಸಿದ್ದರು. ಆದರೂ ಇಲ್ಲಿಯವರೆಗೆ ವಸತಿ ನಿಲಯದ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಕೇವಲ ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಲಾಗಿದೆ. ಆದರೆ ಒಳಾಂಗಳ ಕಾಮಗಾರಿ ಸೇರಿದಂತೆ ಉಳಿದ ಕೋಣೆಗಳ ಕಾಮಗಾರಿ ಕಟ್ಟಡ ಇನ್ನೂ ಮುಗಿದಿಲ್ಲ. ಇದರಿಂದ ಈ ಭಾಗದ ವಿದ್ಯಾರ್ಥಿನಿಯರಿಗೆ ಶಾಲೆಗೆ ಬರುವದಕ್ಕೆ ತುಂಬ ಕಷ್ಟವಾಗುತ್ತಿದೆ.

ಆದರೆ ಶಾಸಕರೂ ನಾಲವಾರ ರಸ್ತೆ ಮಾರ್ಗದಲ್ಲೇ ಹಲವು ಬಾರಿ ಸಂಚಾರ ಮಾಡುತ್ತಾರೆ. ಆದರೂ ಒಂದು ಬಾರಿಯಾದರೂ ಕಟ್ಟಡ ಸ್ಥಳಕ್ಕೆ ಭೇಡಿ ನೀಡಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗುವದಕ್ಕೆ ಕಾರಣವಾಗಿದೆ ಎಂದು ಶಾಸಕರ ವಿರುದ್ಧ ಗ್ರಾಮಸ್ಥರು ಅಸಮದಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ಪ್ರೌಢ ಶಾಲಾ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿ ಕಳೆದ ವರ್ಷದ ಹಿಂದೆಯೇ ಮುಗಿಯಬೇಕಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಬಾಲಕಿಯರಿಗೆ ಸರಿಯಾದ ಸಾರಿಗೆ ಸಂಪರ್ಕ ಇಲ್ಲದ ಪರಿಣಾಮ ನಾಲವಾರ ಗ್ರಾಮದ ಪ್ರೌಢ ಶಾಲೆಗೆ ಬರುವದಕ್ಕೆ ತುಂಬ ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ನೋವು ತೊಡಿಕೊಂಡರು.

ಮಾಹಿತಿ ಕೇಳಿದ ಸರ್ಕಾರ
ನಾಲವಾರ ಗ್ರಾಮದಲ್ಲಿನ ಬಾಲಕಿಯರ ವಸತಿ ನಿಲಯದ ಬಗ್ಗೆ ಇನ್ನೂ ಸರ್ಕಾರಕ್ಕೆ ಯಾವುದೇ ರೀತಿ ಮಾಹಿತಿ ಬಂದಿಲ್ಲ. ಆದ್ದರಿಂದ ಕೂಡಲೇ ವಸತಿ ನಿಲಯದ ಬಗ್ಗೆ ವರದಿ ಸಲ್ಲಿಸುವಂತೆ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸರ್ಕಾರ ನೋಟಿಸ್ ನೀಡಿದೆ.

ಆದರೆ ವಸತಿ ನಿಲಯ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಅಧಿಕಾರಿಗಳು ಖಾಸಗಿ ಕಟ್ಟಡದಲ್ಲಿ ವಸತಿ ನಿಲಯ ಆರಂಭಿಸುವದಕ್ಕೆ ಚಿಂತನೆ ನಡೆಸಿದ್ದಾರೆ.

ಪ್ರತಿಭಟನೆ ಎಚ್ಚರಿಕೆ
ಒಂದು ವೇಳೆ ಖಾಸಗಿ ಕಟ್ಟಡದಲ್ಲಿ ವಸತಿ ನಿಲಯ ಆರಂಭಿಸಿದರೆ. ವಿದ್ಯಾರ್ಥಿಗಳು ವಿವಿಧ ಮೂಲಸೌಕರ್ಯ ಎದುರಿಸಬೇಕಾಗುತ್ತದೆ. ಆದ್ದರಿಂದ ಇಂಥ ಪ್ರಸ್ತಾಪ ಕೈಬಿಟ್ಟು. ಕೂಡಲೇ ಬಾಲಕಿಯರ ವಸತಿ ನಿಲಯ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ~ ಎಂದು ಸ್ಥಳೀಯ ಜೈಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವುಕುಮಾರ ಸುಣಗಾರ್ ಎಚ್ಚರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.