ADVERTISEMENT

ಖಾಸಗಿ ಶಾಲೆಗಳಿಂದ ಉತ್ತಮ ಸೇವೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 8:55 IST
Last Updated 15 ಫೆಬ್ರುವರಿ 2012, 8:55 IST

ಕೆಂಭಾವಿ: ಗ್ರಾಮೀಣ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು ಸರ್ಕಾರಿ ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದೆ ಇವೆ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೆಗೌಡ ಮರಕ್ಕಲ್ ಹೇಳಿದರು.

ಅವರು ಪಟ್ಟಣದ ನವೋದಯ ಎಜ್ಯುಕೇಶನ್ ಸೊಸೈಟಿಯ ವಿದ್ಯಾಲಕ್ಷ್ಮೀ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ಮೇಳ ಕಾರ್ಯಕ್ರಮದ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಸರ್ಕಾರ ಏನೆಲ್ಲ ವ್ಯವಸ್ಥೆ ಕಲ್ಪಿಸಿಕೊಟ್ಟರೂ ಖಾಸಗಿ ಶಾಲೆಗಳನ್ನು  ಹಿಂದೆ ಹಾಕುವಲ್ಲಿ ವಿಫಲವಾಗುತ್ತಿವೆ ಎಂದ ಅವರು ಶಾಲೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕಾರ್ಖಾನೆಗಳಿದ್ದಂತೆ, ಶಿಕ್ಷಕರು ಉತ್ತಮ ಕೆಲಸ ನಿರ್ವಹಿಸಿದರೆ ಮಾತ್ರ ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡಬಹುದು, ಅದ್ದರಿಂದ ಶಿಕ್ಷಕರ ಪಾತ್ರ ಮಹತ್ತರದಾಗಿದ್ದು, ನಿಸ್ವಾರ್ಥ ಸೇವೆ ಸಲ್ಲಿಸುವಂತೆ ಅವರು ಕಿವಿಮಾತು ಹೇಳಿದರು.

ಸಿದ್ದಬಸವ ಕಬೀರ ಸ್ವಾಮಿಗಳು ಮಾತನಾಡಿ, ಈ ವೈಜ್ಞಾನಿಕ ಯುಗದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಮೂಢನಂಬಿಕೆಗಳನ್ನು ಬಿಟ್ಟು ವಿದ್ಯಾಭ್ಯಾಸದ ಕಡೆ ಗಮನಕೊಡಿ, ಶಿಕ್ಷಕರು ಪ್ರಶಸ್ತಿಗಳ ಬೆನ್ನು ಹತ್ತದಿರಿ ನೀವು ಉತ್ತಮ ಕೆಲಸಗಳನ್ನು ಮಾಡಿದರೆ ಪ್ರಶಸ್ತಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಗೌಡ ಪೊಲೀಸ ಪಾಟೀಲ ಮಾತನಾಡಿ ಖಾಸಗಿ ಶಾಲೆಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಳ್ಳದೆ ಗ್ರಾಮೀಣ ಪ್ರದೇಶದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲಿ ಎಂದು ಹೇಳಿದರು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
 
ಅಧ್ಯಕ್ಷತೆಯನ್ನು ಶರಣಬಸವ ಡಿಗ್ಗಾವಿ ವಹಿಸಿದ್ದರು, ಸಂಸ್ಥೆಯ ಕಾರ್ಯದರ್ಶಿ ರಾಮು, ತಾಲ್ಲೂಕು ಪಂಚಾಯತಿ ಸದಸ್ಯ ಖಾಜಾ ಪಟೇಲ ಕಾಚೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೆಪ್ಪ ಮ್ಯಾಗೇರಿ, ಉಪಾಧ್ಯಕ್ಷ ರೇವಣಸಿದ್ದಪ್ಪ ಯಾಳಗಿ, ಭೀಮನಗೌಡ ಕಾಚಾಪುರ, ಜಗದೀಶ ಸಜ್ಜನ್, ಬಸವರಾಜ ತಳವಾರ, ಶಿವಪುತ್ರಪ್ಪ, ಮಹಿಪಾಲರದ್ದಿ ಡಿಗ್ಗಾವಿ, ಶಿವಶರಣಪ್ಪ ಸಿರೂರ, ದೇವರಾಜ ನಾಯಕ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ 15 ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ ಉಪಕರಣ ಬಗ್ಗೆ ಮಾಹಿತಿ ತಿಳಿದುಕೊಂಡರು. 18 ಮಳಿಗೆಗಳನ್ನು ತೆರೆಯಲಾಗಿತ್ತು ಒಂದೊಂದು ಮಳಿಗೆಯಲ್ಲಿ ಒಂದೊಂದು ವಿಶೇಷತೆಗಳು ಮಕ್ಕಳು ಹಾಗೂ ಪಾಲಕರನ್ನು ಆಕರ್ಶಿಸಿದವು.ಬಿ.ಎಸ್. ಪಾಟೇಲ ನಿರೂಪಿಸಿದರು, ಎಸ್ ನಾಗಮಣಿ ಸ್ವಾಗತಿಸಿದರು, ಭಾರತಿ  ಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.