ADVERTISEMENT

ಗ್ರಾಪಂ ನೌಕರರ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 9:20 IST
Last Updated 16 ಫೆಬ್ರುವರಿ 2011, 9:20 IST

ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟ ಅವಧಿಯ ಧರಣಿ ಆರಂಭಿಸಲಾಯಿತು. ರೈಲು ನಿಲ್ದಾಣ ದಿಂದ ಬೃಹತ್ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು, ದಾರಿ ಯುದ್ದಕ್ಕೂ ಘೋಷಣೆ ಕೂಗಿದರು.ನಂತರ ಜಿ.ಪಂ. ಕಚೇರಿ ಎದುರು ಧರಣಿ ಸತ್ಯಾಗ್ರಹ ವನ್ನು ಮುಂದುವರಿಸಿದರು.

ಕಳೆದ ಎರಡು ವರ್ಷಗಳಿಂದ ಗ್ರಾ.ಪಂ. ನೌಕರರಿಗೆ ಸರ್ಕಾರ ನಿಗದಿ ಪಡಿಸಿದ ವೇತನ ಸಿಗುತ್ತಿಲ್ಲ. ಗ್ರಾ.ಪಂ. ಗಳಲ್ಲಿ ಆದಾಯದ ಕೊರತೆ ಹಾಗೂ ಬಂದಂತಹ ಆದಾಯ ಗ್ರಾಮೀಣಾ ಭಿವೃದ್ಧಿಗೆ ಬಳಕೆ ಆಗುತ್ತಿರುವುದರಿಂದ ಸಿಬ್ಬಂದಿ ವೇತನ ಇಲ್ಲದಂತಾಗಿದೆ. ಸರ್ಕಾರ ಕೂಡಲೇ ಗ್ರಾ.ಪಂ. ನೌಕರರ ಪ್ರತ್ಯೇಕ ಶೀರ್ಷಿಕೆಯನ್ನು ರಚಿಸಿ, ಶೇ.40 ರಷ್ಟು ಶಾಸನಬದ್ಧ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾ.ಪಂ. ನೌಕರರ ಭವಿಷ್ಯ ನಿಧಿ ಯೋಜನೆ, ಜನಶ್ರೀ ಯೋಜನೆ ಜಾರಿ ಮಾಡಲು ಸರ್ಕಾರ ಆದೇಶ ಮಾಡಿ ಎರಡು ವರ್ಷ ಗತಿಸಿದರೂ, ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ಜಾರಿಯಾಗಿಲ್ಲ. ಕೆಳ ಹಂತದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದ ರಿಂದಾಗಿ ನೌಕರರು ಸೌಲಭ್ಯದಿಂದ ವಂಚಿತರಾಗುವಂತೆ ಆಗಿದೆ. ಕೂಡಲೇ ಯೋಜನೆಯ ಜಾರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಬರುವ ಗ್ರಾ.ಪಂ.ಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ವೇತನ ಸಿಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಅಕ್ರಮವಾಗಿ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್, ಪಂಪ್ ಆಪರೇಟರ್, ಇತರೇ ಸಿಬ್ಬಂದಿ ನೇಮಕ ಮಾಡುವ ವಿಷಯ ತಿಳಿದು ಬಂದಿದೆ. ಕೂಡಲೇ ಈ ಅಕ್ರಮ ನೇಮಕಾತಿಗಳನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಿದರು. ಗ್ರೇಡ್-2 ಕಾರ್ಯದರ್ಶಿ ಹುದ್ದೆ ಗಳನ್ನು ಸಂಪೂರ್ಣವಾಗಿ ಕರವಸೂಲಿ ಗಾರ, ಗುಮಾಸ್ತ, ಬೆರಳಚ್ಚುಗಾರರಿಗೆ ಮೀಸಲಿಡಬೇಕು.

ಸೇವಾ ನಿಯಮ ಗಳಲ್ಲಿ ತೋರಿಸುವ ಲಿಖಿತ ಪರೀಕ್ಷೆ ಹಾಗೂ ಅರ್ಹತಾ ಅಂಕಗಳ ಆಧಾರದ ಮೇಲೆ ನೇಮಕಾತಿಯನ್ನು ಕೈಬಿಡ ಬೇಕು. ಕಳೆದ 20 ವರ್ಷದಿಂದ ಎಸ್ಸೆಸ್ಸೆಲ್ಸಿ ಪಾಸಾದ 10 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಲಾಗುತ್ತಿತ್ತು. ಈಗಲೂ ಅದನ್ನೇ ಮುಂದುವರಿಸುವ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಂಘದ ಪದಾಧಿಕಾರಿಗಳಾದ ಮಹ್ಮದಅಲಿ ಜಮಾದಾರ್, ಗುರು ರಾಜ ಜೋಶಿ, ಅಬ್ದುಲ್‌ಬಾಷಾ ಚೌಧರಿ, ಕೆ. ಮಂಜೂರ ಪಟೇಲ್, ಬಸವರಾಜ ದೇವಾಪೂರ, ರವೀಂದ್ರ ಹಳಗೇರಾ, ಚಂದಪ್ಪ ಹೊಸಗೇರಾ ಸೇರಿದಂತೆ ನೂರಾರು ನೌಕರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.