ADVERTISEMENT

ತುಂಡು ಗುತ್ತಿಗೆ ಅನುದಾನ ಕಡಿತ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:32 IST
Last Updated 6 ಸೆಪ್ಟೆಂಬರ್ 2013, 6:32 IST

ಯಾದಗಿರಿ: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈ ಹಿಂದೆ ರೂ. 5 ಲಕ್ಷದವರೆಗಿನ ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಆ ಅನುದಾನವನ್ನು ಕಡಿತಗೊಳಿಸಿ ಕೇವಲ ರೂ. 1ಲಕ್ಷಕ್ಕೆ ಸೀಮಿತಗೊಳಿಸಿದೆ. ಇದು ಅಧಿಕಾರ ವಿಕೇಂದ್ರಿಕರಣ ನೀತಿಯನ್ನು ದಮನ ಮಾಡುವ ಹುನ್ನಾರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ ಆರೋಪಿಸಿದ್ದಾರೆ.

ಗುರುವಾರ ಪ್ರತಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದಾಗ ತುರ್ತು ಪರಿಸ್ಥಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ರೂ. 5 ಲಕ್ಷವರೆಗಿನ ಅನುದಾನವನ್ನು ತುಂಡು ಗುತ್ತಿಗೆ ಮೂಲಕ ಬಳಕೆ ಮಾಡಲು ಅವಕಾಶ ನೀಡಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ಕಡಿತಗೊಳಿಸಿದೆ ಎಂದರು. 

ಇದು ಶಾಸಕರು ಮತ್ತು ಸಂಸದರಿಗೆ ಅನ್ವಯವಾಗುವುದಿಲ್ಲ. ಮತದಾರರಿಂದ ಆಯ್ಕೆಯಾದ ಜನಪ್ರತಿನಿಧಿಗಳಲ್ಲಿಯೇ ಈ ರೀತಿಯ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿಯ 4702 ಶೀರ್ಷಿಕೆಯ ಅನುದಾನವನ್ನು ಶಾಸಕರ ವ್ಯಾಪ್ತಿಗೆ ತರಲಾಗಿದೆ. ಆದರೆ ಇದನ್ನು ಜಿಲ್ಲಾ ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು. 5054 ಶೀರ್ಷಿಕೆಯ ಅನುದಾನವನ್ನು ಕೂಡ ಶಾಸಕರ ನಿಧಿಗೆ ನೀಡಲಾಗಿದೆ. ಬಿಆರ್‌ಜಿಎಫ್ ಅನುದಾನದಲ್ಲಿ ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಶೇ. 20. ರಷ್ಟು ನೀಡಲಾಗುತ್ತಿತ್ತು. ಅದನ್ನು ಮೊಟಕುಗೊಳಿಸಿ ಶೇ. 10ಕ್ಕೆ ಇಳಿಸಲಾಗಿದೆ. ಇದರಿಂದ ಅಭಿವೃದ್ಧಿಗೆ ಹಿನ್ನೆಡೆ ಆಗುತ್ತದೆ ಎಂದು ದೂರಿದರು.

ಪಕ್ಷ ಭೇದ ಮರೆತು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ನಿಯೋಗವನ್ನು ತೆಗೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಅಧಿಕಾರ ವಿಕೇಂದ್ರಿಕರಣಕ್ಕೆ ಕುತ್ತಾಗಿರುವ ನಿಯಮವನ್ನು ರದ್ದು ಪಡಿಸಲು ಒತ್ತಾಯಿಸಲಾಗುವುದು ಎಂದರು.

ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ನಿಯಮದಂತೆ ವಸತಿ ಯೋಜನೆಯಡಿ ಗ್ರಾಮಸಭೆ ಮಾಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ರಾಜೀವ್‌ಗಾಂಧಿ ವಸತಿ ನಿಗಮ ಅಧಿಕಾರಿಗಳು ಈ ಪಟ್ಟಿಯನ್ನು ರದ್ದುಗೊಳಿಸಿರುವುದು ಸರಿಯಾದ ಕ್ರಮವಲ್ಲ. ಆಯ್ಕೆ ಪಟ್ಟಿಯಲ್ಲಿ ಲೋಪದೋಷವಿದ್ದರೆ, ಉನ್ನತ ಅಧಿಕಾರಿಗಳು ಪರಿಶೀಲನೆ ಮಾಡಿ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಖಂಡ್ರೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿವೆ. ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರು ಆಗೊಮ್ಮೆ, ಈಗೊಮ್ಮೆ ಭೇಟಿ ನೀಡುತ್ತಿದ್ದಾರೆ. ಸರಿಯಾದ ಸಮಯ ಕೂಡ ನೀಡದೇ ಇರುವುದರಿಂದ ಆಡಳಿತ ಯಂತ್ರ ಕುಸಿದಿದೆ. ಸಚಿವ ಸಂಪುಟದ ಬೇರೆ ಇಲಾಖೆಗಳ ಯಾವುದೇ ಸಚಿವರು ಜಿಲ್ಲೆಗೆ ಭೇಟಿ ನೀಡಿಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕಾಣಲು ಸಾಧ್ಯ.

ಬಜೆಟ್‌ನಲ್ಲಿ ಸರ್ಕಾರ ಜಿಲ್ಲೆಗೆ ಅಂತರ ರಾಷ್ಟ್ರೀಯ ಜವಳಿ ಪಾರ್ಕ್ ನಿರ್ಮಾಣ ಯೋಜನೆ ಮಾತ್ರ ಘೋಷಣೆ ಬಿಟ್ಟರೆ, ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಿಲ್ಲ. ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಶಂಕ್ರಪ್ಪ ಶಾಣ್ಯಾನೋರ್ ಮಾತನಾಡಿ, ಸರ್ಕಾರ ತುಂಡು ಗುತ್ತಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿರುವುದು ಸರಿಯಾದ ಕ್ರಮವಲ್ಲ. ಜನರ ಸಮಸ್ಯೆಗಳಿಗೆ ಅನುಸಾರವಾಗಿ ಅಗತ್ಯ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಇದರಿಂದ ಸದಸ್ಯರು ಜನರ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.