ADVERTISEMENT

ತುಮಕೂರು ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 8:50 IST
Last Updated 17 ಅಕ್ಟೋಬರ್ 2012, 8:50 IST
ತುಮಕೂರು ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ
ತುಮಕೂರು ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ   

ಯಾದಗಿರಿ: ರೈತರಿಗೆ ಹಲವಾರು ಭರವಸೆ ನೀಡಿದ ಸಕ್ಕರೆ ಕಾರ್ಖಾನೆ ಆರಂಭಿಸಲಾಗಿದ್ದು, ನೀಡಿರುವ ಆಶ್ವಾಸನೆಗಳ ಪೂರೈಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ಸಮೀಪದ ತುಮಕೂರಿನ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಗ್ರಾಮದ ರೈತರು ಸಕ್ಕರೆ ಕಾರ್ಖಾನೆಗಾಗಿ ಹೆಚ್ಚಿನ ಪ್ರಮಾಣದ ಭೂಮಿ ನೀಡಿದ್ದಾರೆ. ಕುಟುಂಬ ವರ್ಗಕ್ಕೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಸ್ಥಳೀಯರಿಗೆ ಶೇ. 70ರಷ್ಟು ಉದ್ಯೋಗ ನೀಡುವುದು, ತುಮಕೂರು ಮತ್ತು ವಡಗೇರಾ ಗ್ರಾಮಗಳಿಗೆ ಕಂಪೆನಿಯಿಂದ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿದರು.

ಕಾರ್ಖಾನೆಯಿಂದ ಹೊರ ಹಾಕುವ ವಿಷಪೂರಿತ ನೀರನ್ನು ಪಕ್ಕದ ಹಳ್ಳಕ್ಕೆ ಬಿಡಲಾಗುತ್ತಿದ್ದು, ಕೂಡಲೇ ಅದನ್ನು ನಿಲ್ಲಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಮಂಜೂರಾದ ಭೂಮಿಯನ್ನು ರೈತರು ಒಪ್ಪಂದ ಪ್ರಕಾರ ಕಂಪೆನಿಗೆ ಹಸ್ತಾಂತರಿಸಿದ್ದಾರೆ. ಅಂತಹ ರೈತರಿಗೆ ಬೇರೆಡೆ ಭೂಮಿ ಕೊಡಿಸಿ ಅವರ ಹೆಸರಿಗೆ ವರ್ಗಾವಣೆ ಮಾಡಿ ಭೂಮಿ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದರು.

ರೈತರ ಜಮೀನುಗಳಿಗೆ ಏತ ನೀರಾವರಿ ಸೌಲಭ್ಯ ಮತ್ತು ನದಿಯಿಂದ ನೀರಾವರಿ ಸೌಲಭ್ಯ ಒದಗಿಸಬೇಕಾಗಿದೆ. ವೇತನ ತಾರತಮ್ಯವನ್ನು ತಕ್ಷಣವೇ ನಿಲ್ಲಿಸುವಂತೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.  ಸಕ್ಕರೆ ಕಾರ್ಖಾನೆ ಆರಂಭವಾದ ಮೇಲೆ ದಿನದ 24 ಗಂಟೆ ವಿದ್ಯುತ್ ನೀಡುವುದಾಗಿ ಹೇಳಿದ ಕಾರ್ಖಾನೆ, ಇದೀಗ ತನ್ನ ಜವಾಬ್ದಾರಿ ನುಣುಚಿಕೊಳ್ಳುತ್ತಿದೆ. ನಮ್ಮ ಬೇಡಿಕೆಗಳಿಗೆ ಈಡೇರಿಸಲು ನಿರ್ಲಕ್ಷ್ಯ ತೋರಿದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಂದಿನ ಗುಲ್ಬರ್ಗದ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ತುಮಕೂರು ಮತ್ತು ವಡಗೇರಾ ಗ್ರಾಮಸ್ಥರು ಕಾರ್ಖಾನೆಗೆ ಭೂಮಿ ನೀಡಿದ್ದಾರೆ. ಎರಡು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕಿದೆ. ಆದರೆ ಜಮೀನು ಕೊಟ್ಟ ರೈತರಿಗೆ ಇದೀಗ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಕಾರ್ಖಾನೆಯಲ್ಲಿ ಬೇರೆ ರಾಜ್ಯದವರಿಗೆ ಉದ್ಯೋಗ ನೀಡಲಾಗುತ್ತಿದ್ದು, ಸ್ಥಳೀಯರನ್ನು ಕಡೆಗಣಿಸಲಾಗುತ್ತಿದೆ. ಇಂತಹ ಪವೃತ್ತಿ ಬಿಡಬೇಕು. ಇದೇ ರೀತಿ ನಡೆದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಕ್ಕರೆ ಕಾರ್ಖಾನೆಗೆ ಜಮೀನು ನೀಡಿದ ರೈತರ ಕುಟುಂಬ ಸದಸ್ಯರಿಗೆ ಉದ್ಯೋಗ ಕೂಡ ನೀಡದೇ ಮೋಸ ಮಾಡಲಾಗಿದೆ. ಫಲವತ್ತಾದ ಭೂಮಿಯನ್ನು ರೈತರು ಕಳೆದುಕೊಂಡಿದ್ದಾರೆ. ಇದನ್ನು ಅರಿತುಕೊಂಡು ಕಾರ್ಖಾನೆಯವರು ಕರ್ತವ್ಯ ನಿರ್ವಹಿಸಲು ಮುಂದಾಗಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ಧಣ್ಣಗೌಡ ಕಾಡಂನೋರ್, ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ಜವಾಬ್ದಾರಿ ಕಾರ್ಖಾನೆ ಮೇಲಿದೆ. ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಬೇಕಿದೆ. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. 

ಕಾರ್ಖಾನೆಯ ವ್ಯವಸ್ಥಾಪಕರು ಬೇಡಿಕೆಗಳನು ಈಡೇರಿಸುವುದಾಗಿ ಭರವಸೆ ನೀಡಿದರು. ತಹಸೀಲ್ದಾರ ಎಂ. ರಾಚಪ್ಪ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ, ಹೋಬಳಿ ಘಟಕದ ಅಧ್ಯಕ್ಷ ಶಿವಕುಮಾರ ಕೊಂಕಲ್, ರಂಗ್ಯಯ್ಯ ಮುಸ್ತಾಜೀರ್, ಚೌಡಯ್ಯ ಬಾವೂರ, ಅಬ್ದುಲ್ ಚಿಗಾನೂರ, ಇಶಾಕ್, ವಿಜಯಕುಮಾರ ಸಾಲಿಮನಿ, ಭೀಮು, ಅಬ್ದುಲ್ ಖತಾಲಿ, ಮಲ್ಲು, ಅಯ್ಯಪ್ಪ, ಚನ್ನಮ್ಮ ಬಿಳ್ಹಾರ, ಹಣಮಂತ ಟೇಕರಾಳ, ತಾವರು, ಅಜ್ಮೀರ, ಮಲ್ಲು ಜಡಿ, ರೈತ ಮುಖಂಡರಾದ ಬಸವರಾಜ ನೀಲಹಳ್ಳಿ, ಅನಂತರಾವ, ನಾರಾಯಣ, ಇಮಾಮ್, ಗೋವಿಂದ ತುಮಕೂರ, ಕೇಶವರಡ್ಡಿ, ಶರಣಪ್ಪಗೌಡ, ಶ್ರೀನಿವಾಸ, ದಂಡಪ್ಪ, ರಹೇಮಾನಸಾಬ, ಬಸಚ್ಯಿು, ಶರಣಯ್ಯಸ್ವಾಮಿ, ಪ್ರಭು ಬೆನಕನಳ್ಳಿ, ದಂಡಪ್ಪ ಗುರಸಣಗಿ, ರಹೀಂಸಾಬ್, ಶರಣಪ್ಪ ಮುಂದಲಮನಿ, ಮರಿಲಿಂಗಪ್ಪ, ವೆಂಕಟೇಶ ಮುಸ್ತಾಜೀರ್, ಅದಂಸಾಬ, ಮಲ್ಲಪ್ಪ ಬಿಸೆಟಿ, ಸಾಬಣ್ಣ  ಹಾಗೂ ಎರಡು ಗ್ರಾಮದ ಸುಮಾರು ಮೂರು ನೂರು ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.