ADVERTISEMENT

ದೇವದಾಸಿ ನಿರ್ಧಾರ ಕೈಬಿಟ್ಟ ಯುವತಿ

ಸುರಪುರ: ಸಾರ್ಥಕವಾದ ಪುನರ್ವಸತಿ ಯೋಜನಾಧಿಕಾರಿಗಳ ಶ್ರಮ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 9:10 IST
Last Updated 13 ಜುಲೈ 2013, 9:10 IST

ಸುರಪುರ: ಅಧಿಕಾರಿಗಳ ನಿರಂತರ ಶ್ರಮದಿಂದ ತಾಲ್ಲೂಕಿನ ಹಾಲಭಾವಿ ಗ್ರಾಮದಲ್ಲಿ ಮುತ್ತು ಕಟ್ಟಿಕೊಳ್ಳಲು (ದೇವದಾಸಿ) ಸಿದ್ಧತೆ ನಡೆಸಿದ್ದ ಯುವತಿ ರೇಣುಕಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಸಮ್ಮತಿ ನೀಡಿ ಶುಕ್ರವಾರ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿದ್ದಾಳೆ.

ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ದೇವದಾಸಿ ಪುನರ್ವಸತಿ ಜಿಲ್ಲಾ ಯೋಜನಾಧಿಕಾರಿ ಎಸ್. ಎನ್. ಹಿರೇಮಠ ಮತ್ತು ಯೋಜನೆಯ ತಾಲ್ಲೂಕು ಅನುಷ್ಠಾನಾಧಿಕಾರಿ ಮಲ್ಲಿಕಾರ್ಜುನ ಅಣಬಿ ಯುವತಿಯ ಪತ್ತೆಗೆ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಅಧಿಕಾರಿಗಳು ಪಟ್ಟಣದ ಪಾಳದಕೇರಿ ಮತ್ತು ರತ್ತಾಳ ಗ್ರಾಮಕ್ಕೂ ಭೇಟಿ ನೀಡಿ ಪತ್ತೆಯ ಯತ್ನ ನಡೆಸಿ ನಿರಾಶರಾಗಿದ್ದರು.

ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗೆಟ್ರೂಡ್ ವೇಗಸ್, ಸಿ.ಡಿ.ಪಿ.ಓ. ದೇನೂಸಿಂಗ್ ಚವ್ಹಾಣ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ರಾಜಕುಮಾರ ವಾಜಂತ್ರಿ, ಆದಿ ಜಾಂಬವ ಕಲ್ಯಾಣ ಸಂಘದ ಗೌರವಾಧ್ಯಕ್ಷ ಯಲ್ಲಪ್ಪ ಹುಲಿಕಲ್ ಮತ್ತು ಇತರ ಅಧಿಕಾರಿಗಳೊಂದಿಗೆ ಮತ್ತೆ ಗ್ರಾಮಕ್ಕೆ ಭೇಟಿ ನೀಡಿದರು.

ಯುವತಿ ಊರಲ್ಲಿ ಇರಲಿಲ್ಲ. ಯುವತಿಯನ್ನು ಕರೆಸುವವರೆಗೂ ಇಲ್ಲೆ ಬಿಡಾರ ಹೂಡುವುದಾಗಿ ಅಧಿಕಾರಿಗಳು ತಿಳಿಸಿದರು. ದೇವದಾಸಿ ಪದ್ಧತಿ ಕೈಗೊಂಡರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.

ಅಧಿಕಾರಿಗಳ ಒತ್ತಡಕ್ಕೆ ಮಣಿದ ಯುವತಿಯ ಅಜ್ಜಿ ಕೊನೆಗೂ ಯುವತಿಯನ್ನು ಅಧಿಕಾರಿಗಳ ಮುಂದೆ ಹಾಜರಪಡಿಸಿದಳು.

ಯುವತಿಯೊಂದಿಗೆ ಚರ್ಚೆ ನಡೆಸಿದ ಅಧಿಕಾರಿಗಳು ದೇವದಾಸಿ ಪದ್ಧತಿಯಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಿದರು. ಈ ಪದ್ಧತಿ ಕಾನೂನು ಬಾಹಿರವಾಗಿದ್ದು ಇದಕ್ಕೆ ದಂಡದ ಜೊತೆಗೆ ಜೈಲು ವಾಸದ ಶಿಕ್ಷೆಯೂ ಇದೆ ಎಂದು ತಿಳಿಸಿದರು. ನಿರ್ಧಾರದಿಂದ ಹಿಂದೆ ಸರಿದರೆ ಉದ್ಯೋಗಿನಿ ಯೋಜನೆಯಡಿ ಉಪ ಜೀವನಕ್ಕೆ ಸಾಲ, ಸೌಲಭ್ಯ ಒದಗಿಸಲಾಗುವುದು ಎಂದು ತಿಳಿ ಹೇಳಿದರು.

ಅಧಿಕಾರಿಗಳ ಮಾತಿಗೆ ಸಮ್ಮತಿಸಿದ ಯುವತಿ ತಾನು ದೇವದಾಸಿಯಾಗುವುದಿಲ್ಲವೆಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಳು.

ಎರಡು ದಿನಗಳವರೆಗೆ ಯುವತಿಯ ಪತ್ತೆಗೆ ಸತತ ಪ್ರಯತ್ನಿಸಿದ ಅಧಿಕಾರಿಗಳು ಕೊನೆಗೂ ನಿಟ್ಟುಸಿರು ಬಿಡುವಂತಾಯಿತು. ಗ್ರಾಮದ ಮುಖಂಡರಾದ ಅಯ್ಯಣ್ಣ ಹಾಲಬಾವಿ, ಬಾಲರಾಜ ದೊರೆ, ಅಂಗನವಾಡಿ ಮೇಲ್ವಿಚಾರಕಿ ಸರೋಜಮ್ಮ, ಕಾರ್ಯಕರ್ತೆ ಭೀಮಬಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.