ಹುಣಸಗಿ: ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ಶನಿವಾರ ರಾತ್ರಿ ನೀರು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಭಾನುವಾರ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಮುಖಂಡರೊಂದಿಗೆ ನಾರಾಯಣಪುರಕ್ಕೆ ತೆರಳಿ ಕೃಷ್ಣಾ ಭಾಗ್ಯ ಜಲ ನಿಮಗದ ಅಧಿಕಾರಿಗಳನ್ನು ಭೇಟಿ ಮಾಡಿದರು.
ರೈತರ ಬೆಳೆಗಳಿಗೆ ಒಂದು ವಾರ ನೀರಿನ ಅವಶ್ಯಕತೆ ಇದ್ದು ರೈತರ ಹಿತ ಕಾಪಾಡಲು ಮಾರ್ಚ್ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸಬೇಕು ಎಂದು ಮುಖ್ಯ ಎಂಜಿನಿಯರ್ ಎನ್.ಕ್ಷೇತ್ರಪಾಲ್ ಅವರಿಗೆ ಮನವಿ ಮಾಡಿದರು.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕಾಳು ಕಟ್ಟುತ್ತಿದೆ. ಈ ಹಂತದಲ್ಲಿ ನೀರು ಇಲ್ಲದಿದ್ದರೇ ಸಂಪೂರ್ಣ ಬೆಳೆ ಹಾನಿಯಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಎಂಜಿನಿಯರ್ ಕ್ಷೇತ್ರಪಾಲ, ಬಸವ ಸಾಗರ ಜಲಾಶಯದಲ್ಲಿ ಕೇವಲ 1.309 ಟಿಎಂಸಿ ನೀರಿನ ಸಂಗ್ರಹವಿದೆ. ಈ ನೀರನ್ನು ಬೇಸಿಗೆಯಲ್ಲಿ 40 ಹಳ್ಳಿಗಳಿಗೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಕೃಷಿಗೆ ಬಳಸುವ ನೀರನ್ನು ಸಂಪೂರ್ಣವಾಗಿ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರ ನೀಡಬೇಕು ಎಂದರು.
ನಂತರ ಮುಖ್ಯ ಎಂಜಿನಿಯರ್ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆರ್.ವಿ.ನಾಯಕ, ರೈತರಿಗೆ ನೀರು ಒದಗಿಸಲು ಜಲಸಂಪನ್ಮೂಲ ಸಚಿವರೊಂದಿಗೆ ಮಾತನಾಡಿದ್ದು, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ನೀರು ಹರಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನೆರಡು ದಿನದಲ್ಲಿ ನಿರ್ಣಯ ತಿಳಿಸುವುದಾಗಿ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ಪಾಟೀಲ, ಗೋಪಾಲದಾಸ ಲಡ್ಡಾ, ಮುಖಂಡರಾದ ಬಸನಗೌಡ ಯಡಿಯಾಪುರ, ಸೂಲಪ್ಪ ಕಮತಗಿ, ವಿಠ್ಠಲ್ ಯಾದವ, ಯಂಕೋಬ ಮಂಗಳೂರ, ರಾಜಾ ವೇಣುಗೋಪಾಲ, ಮಾರ್ತಾಂಡಪ್ಪ, ನಾಗಪ್ಪ, ಶಾಂತಪ್ಪ ಮೇಸ್ತಕ, ಅಮರೇಶ, ನಾಗರಾಜ ಜೋಗುರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.