ADVERTISEMENT

ನೂರಾರು ಭಕ್ತರಿಂದ ಶ್ರೀಶೈಲ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:02 IST
Last Updated 4 ಏಪ್ರಿಲ್ 2013, 8:02 IST
ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಹೊರಟ ಯಾದಗಿರಿ ತಾಲ್ಲೂಕಿನ ಮಲ್ಹಾರ ಮತ್ತು ಸಾವೂರ ಗ್ರಾಮದ ಭಕ್ತರು
ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಹೊರಟ ಯಾದಗಿರಿ ತಾಲ್ಲೂಕಿನ ಮಲ್ಹಾರ ಮತ್ತು ಸಾವೂರ ಗ್ರಾಮದ ಭಕ್ತರು   

ಯಾದಗಿರಿ: ಬಿಸಿಲ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒಂದೆಡೆಯಾದರೆ, ಬೇಸಿಗೆಯ ಈ ಉರಿ ಬಿಸಿಲನ್ನು ಲೆಕ್ಕಿಸದೇ ಶಿವ ನಾಮ ಸ್ಮರಣೆ ಮಾಡುತ್ತ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಮಾಡುವ ಭಕ್ತರು ಇನ್ನೊಂದೆಡೆ.

ತಾಲ್ಲೂಕಿನ ಮಲ್ಹಾರ ಹಾಗೂ ಸಾವೂರ ಗ್ರಾಮಗಳ ನೂರಕ್ಕೂ ಹೆಚ್ಚು ಭಕ್ತರು ಸತತ ಹದಿಮೂರು ವರ್ಷಗಳಿಂದಲೂ ಪಾದಯಾತ್ರೆಯ ಮೂಲಕ ಸಂಚರಿಸಿ ಯುಗಾದಿಯಂದು ನಡೆಯುವ ವಿಶೇಷ ಲಿಂಗ ದರ್ಶನ ಪಡೆಯುವರು. ಪ್ರತಿ ವರ್ಷದಂತೆ ಈ ವರ್ಷವು ಲಿಂಗ ದರ್ಶನ ಪಡೆಯಲು ಹೊರಟ ಪಾದಚಾರಿಗಳು, ಸೈದಾಪುರ ಸಮೀಪದ ಕ್ಯಾತನಾಳದ ಇಂದಿರಾ ನಗರದ ಜಿಂದಪ್ಪ ಎಂಬುವವರ ಮನೆಯಲ್ಲಿ ಉಪಹಾರವನ್ನು ಸೇವಿಸಿ, ಪಾದಯಾತ್ರೆ ಮುಂದುವರಿಸಿದರು.

350 ಕಿ.ಮೀ. ದೂರದ ಶಿವ ತಾಣ ಶ್ರೀಶೈಲ ಅನ್ನು ಏಳು ದಿನಗಳಲ್ಲಿ ಭಕ್ತರು ತಲುಪುವರು. ತಲೆಗೆ ಬಿಸಿ, ಕಾಲು ಸುಡುವುದನ್ನು ಲೆಕ್ಕಿಸದ ಭಕ್ತರು, ಶಿವನಾಮ ಸ್ಮರಣೆ ಮಾಡುತ್ತ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಸಾವಿರಾರು ಭಕ್ತರು ಪಾದಯಾತ್ರೆಯ ಮೂಲಕ ಮಲ್ಲಿಕಾರ್ಜುನನ ದರ್ಶನ ಪಡೆಯುತ್ತಾರೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಭಕ್ತರಿಗಾಗಿ ನೀರಿನ ಅರವಟಿಗೆ, ಉಪಹಾರ, ಹಾಗೂ ದಣಿವಾರಿಸಿಕೊಳ್ಳಲು ವಿಶ್ರಾಂತಿ ತಾಣಗಳನ್ನು ಏರ್ಪಡಿಸಿರುತ್ತಾರೆ ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡ ಮರೆಪ್ಪ ಮಲ್ಹಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.