ADVERTISEMENT

ಪಹಣಿಗೆ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:53 IST
Last Updated 25 ಜೂನ್ 2013, 10:53 IST
ಯಾದಗಿರಿ ಸಮೀಪದ ದೋರನಳ್ಳಿ ಗ್ರಾಮದ ನಾಡ ಕಚೇರಿಗೆ ಭೇಟಿ ನೀಡಿದ ತಹಶೀಲ್ದಾರ ಕೆ.ಎಲ್.ಭಜಂತ್ರಿ ಪರಿಶೀಲಿಸಿದರು
ಯಾದಗಿರಿ ಸಮೀಪದ ದೋರನಳ್ಳಿ ಗ್ರಾಮದ ನಾಡ ಕಚೇರಿಗೆ ಭೇಟಿ ನೀಡಿದ ತಹಶೀಲ್ದಾರ ಕೆ.ಎಲ್.ಭಜಂತ್ರಿ ಪರಿಶೀಲಿಸಿದರು   

ಯಾದಗಿರಿ: ಸಮೀಪದ ದೋರನಳ್ಳಿ ಹೋಬಳಿ ಕೇಂದ್ರದಲ್ಲಿರುವ ನಾಡ ಕಚೇರಿಗೆ ತಹಶೀಲ್ದಾರ ಕೆ.ಎಲ್.ಭಜಂತ್ರಿ ಭೇಟಿ ನೀಡಿ ಪರಿಶೀಲಿಸಿದರು.
ದೋರನಳ್ಳಿ ಹೋಬಳಿ ಕೇಂದ್ರಕ್ಕೆ 23 ಗ್ರಾಮಗಳು ಒಳಪಡುತ್ತಿದ್ದು, ರೈತರು, ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ. ದಿನ ಪೂರ್ತಿ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಪಹಣಿಗಾಗಿ ಅಲೆದಾಡಿದರೂ ಸಿಗುತ್ತಿಲ್ಲ ಎಂದು ರೈತರು ದೂರಿದರು.

ಈಗ ಬ್ಯಾಂಕ್ ಸಾಲಕ್ಕಾಗಿ ಪಹಣಿ ಅವಶ್ಯಕ. ನಾಡ ಕಾರ್ಯಾಲಯದಲ್ಲಿ ಸಮರ್ಪಕ ವ್ಯವಸ್ಥೆ ಇರದೇ ಇದ್ದುದರಿಂದ ರೈತರು, ವಿದ್ಯಾರ್ಥಿಗಳಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ  ತಹಶೀಲ್ದಾರ ಕೆ.ಎಲ್.ಭಜಂತ್ರಿ ಭೇಟಿ ನೀಡಿ ಪರಿಶೀಲಿಸಿದರು. ಹೋಬಳಿ ಕೇಂದ್ರವಾದ ದೋರನಳ್ಳಿಯ ನಾಡ ಕಾರ್ಯಾಲಯದಲ್ಲಿ ರೈತರಿಗೆ ಪಹಣಿಗಳು ಸಕಾಲಕ್ಕೆ ಸಿಗುತ್ತಿಲ್ಲ. ರೈತರು ದಿನದ ಕೃಷಿ ಚಟುವಟಿಕೆಗಳನ್ನು ಬಿಟ್ಟು, ಬಸ್‌ಗೆ ಹಣ ವ್ಯವಯಿಸಿ, ಪಹಣಿ ಪಡೆಯಲು ರೂ. 500 ಖರ್ಚು ಮಾಡಬೇಕಾಗುತ್ತೆದೆ.

ನಾಡ ಕಾರ್ಯಾಲಯದಲ್ಲಿ ಇಂಟರ್‌ನೆಟ್ ವ್ಯವಸ್ಥೆ, ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ. ನಿತ್ಯ ಕಚೇರಿ ಎದುರು ಕಾಲ ಕಳೆಯುವಂತಾಗಿದೆ ಎಂದು ರೈತರು ಅವಲತ್ತುಕೊಂಡರು. ರೈತರ ಸಮಸ್ಯೆಗಳನ್ನು ಆಲಿಸಿದ  ಭಜಂತ್ರಿ, ರಸ್ತೆ ವಿಸ್ತಾರದ ಸಮಯದಲ್ಲಿ ಬಿಎಸ್‌ಎನ್‌ಎಲ್ ಕೇಬಲ್ ಕಡಿತಗೊಂಡಿದ್ದರಿಂದ ಸಮಸ್ಯೆ ಉಂಟಾಗಿದೆ. ಈಗ ಹೋಬಳಿ ಕೇಂದ್ರಗಳಲ್ಲಿ ನಾಡ ಕಾರ್ಯಾಲಯ ಆರಂಭಿಸಿದ್ದು, ಆಸ್ಪತ್ರೆ ಹತ್ತಿರ ಇರುವ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತದೆ.

ರೈತರ  ತೊಂದರೆ ಗಮನಿಸಿ, ಮೇಲಾಧಿಕಾರಿಗಳು ಈಗಾಗಲೇ ಬಿಎಸ್‌ಎಲ್‌ಎನ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇನ್ನು 2-3 ದಿನದೊಳಗೆ ನಾಡ ಕಾರ್ಯಾಲಯದಲ್ಲಿ ರೈತರ ಪಹಣಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭಜಂತ್ರಿ ಹೇಳಿದರು. ಕಂದಾಯ ನೀರಿಕ್ಷಕ ಸೇತು ಮಾಧವ ,ಗ್ರಾಮ ಲೆಕ್ಕಾಧಿಕಾರಿ ಭೀಮರೆಡ್ಡಿ, ರೈತ ಮುಖಂಡ ಶರಣಬಸ್ಸಪ್ಪ ಬಿರಾದಾರ ಕುರುಕುಂದಾ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು  ಹಾಗೂ ಗ್ರಾಮದ ಸುತ್ತಮುತ್ತಲಿನ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.