ADVERTISEMENT

ಪಿತ್ರಾರ್ಜಿತ ಆಸ್ತಿ: ಮಹಿಳೆಯರಿಗೂ ಸಮಪಾಲು’

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 10:32 IST
Last Updated 7 ಅಕ್ಟೋಬರ್ 2017, 10:32 IST

ಶಹಾಪುರ: ‘ಕೆಲ ನಿಬಂಧನೆಗಳಿಗೆ ಒಳಪಟ್ಟು ಮಹಿಳೆಯು ಪಿತ್ರಾರ್ಜಿತ ಆಸ್ತಿಯಲ್ಲಿ ಪುರಷನಷ್ಟೆ ಸಮಪಾಲು ಪಡೆಯಲು ಅವಕಾಶವಿದೆ. ಕಾನೂನುನಲ್ಲಿ ಲಿಂಗ ತಾರತಮ್ಯವಿಲ್ಲ. ಮಹಿಳೆಯರ ರಕ್ಷಣೆಗೆ ಪ್ರಬಲವಾದ ಕಾನೂನು ಇರುವಾಗ ಅದರ ಅರಿವು ಪಡೆದುಕೊಂಡಾಗ ಸಾರ್ಥಕವಾಗುತ್ತದೆ’ ಎಂದು ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಎ.ಸಾತ್ವಿಕ್‌ ಹೇಳಿದರು.

ತಾಲ್ಲೂಕಿನ ಕನ್ಯಾಕೊಳ್ಳೂರ ಗ್ರಾಮದಲ್ಲಿ ಶುಕ್ರವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಇನ್ನಿತರ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನದ ಮೂರನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಕಾನೂನು ಜ್ಞಾನ ಪಡೆಯಬೇಕು. ವಿದ್ಯಾರ್ಥಿನಿಯರಿಗೆ ಪೋಲಿ ಹುಡುಗರು ಚುಡಾಯಿಸಿದರೆ ಹೆದರದೆ ಠಾಣೆಗೆ ದೂರು ನೀಡಿ ಇಲ್ಲವೆ, ಶಾಲೆಯ ಮುಖ್ಯಸ್ಥರ ಗಮನಕ್ಕೆ ತರಬೇಕು. ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ’ ಎಂದರು.

ADVERTISEMENT

ಹಿರಿಯ ವಕೀಲ ಆರ್.ಎಂ.ಹೊನ್ನಾರಡ್ಡಿ ಮಾತನಾಡಿ, ‘ಮಹಿಳೆಯರಿಗೆ ರಾಜಕೀಯವಾಗಿ ಸಾಕಷ್ಟು ಮೀಸಲಾತಿ ಕೊಟ್ಟಿರುವಾಗ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಅವಕಾಶ ಮಹಿಳೆಯರು ದಕ್ಕಿಸಿಕೊಳ್ಳಬೇಕು. ಯಾವುದೇ ವ್ಯಕ್ತಿಯ ಕೈಗೊಂಬೆಯಾಗಬಾರದು. ನಮ್ಮ ಹಕ್ಕುಗಳನ್ನು ಹಾಗೂ ಅಧಿಕಾರವನ್ನು ಸ್ವತಂತ್ರವಾಗಿ ಚಲಾಯಿಸುವ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕಾದರೆ ಕಾನೂನು ಜ್ಞಾನ ಸಂಪಾದಿಸಬೇಕು’ ಎಂದು ಹೇಳಿದರು.

‘ಮಹಿಳೆಯರಿಗೆ ಹೆಚ್ಚಿನ ಕಾನೂನು ಬಲ ನೀಡಿದೆ ಎಂಬ ಮಾತ್ರಕ್ಕೆ ಅದನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವಿದೆ. ಯಾವುದೇ ಕಾನೂನು ನಮ್ಮ ರಕ್ಷಣೆಗೆ ಇದೆಯೇ ವಿನಃ ದುರ್ಬಳಕೆಗೆ ಅಲ್ಲ ಎಂಬುವುದು ಯಾರು ಮರೆಯಬಾರದು’ ಎಂದರು.

ವಕೀಲ ಶ್ರೀಮಂತ ಕಂಚಿ ‘ಮೋಟಾರ ಕಾಯ್ದೆ’ ಬಗ್ಗೆ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಅಮರೇಶ ದೇಸಾಯಿ, ಸಂಘದ ಕಾರ್ಯದರ್ಶಿ ಹೇಮರಡ್ಡಿ ಕೊಂಗಂಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದಲಿಂಗಪ್ಪಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಗೌಡ ಪಾಟೀಲ, ಸುರೇಶ ಬಾಬು ಹೊಸ್ಮನಿ ಹಾಗೂ ವಕೀಲರಾದ ಭಾಸ್ಕರರಾವ ಮುಡಬೂಳ, ಸಯ್ಯದ್‌ ಇಬ್ರಾಹಿಂ ಜಮಾದಾರ, ಮಲ್ಕಪ್ಪ ಪಾಟೀಲ, ಯೂಸೂಫ್ ಸಿದ್ದಕಿ, ಸಾಲೋಮನ್ ಆಲ್‌ಫ್ರೇಡ್, ರಾಮಣ್ಣಗೌಡ ಕೊಲ್ಲೂರ, ಶಿವಶರಣಪ್ಪ ಹೊತಪೇಟ, ಮಲ್ಲಿಕಾರ್ಜುನ ಬುಕ್ಕಲ್, ವಿಶ್ವನಾಥರಡ್ಡಿ ಸಾಹು, ಸಂತೋಷ ದೇಶಮುಖ, ಎಸ್‌.ಎಂ.ಸಜ್ಜನ, ಎಲ್‌.ಎಸ್.ಕುಲಕರ್ಣಿ, ಉಮೇಶ ಕುಲಕರ್ಣಿ, ಈರಣ್ಣ ಹೊಸ್ಮನಿ, ಶರಣಪ್ಪ ಹೊಸ್ಮನಿ, ವೇಣುಗೋಪಾಲ, ಸಂದೀಪ ದೇಸಾಯಿ, ಎಸ್‌.ಗೋಪಾಲ, ರಮೇಶ ಸೇಡಂಕರ್ ಇದ್ದರು. ನಂತರ ಕಾನೂನು ಸಾಕ್ಷರತಾ ರಥವು ಬೆನಕನಹಳ್ಳಿ (ಜೆ) ಹಾಗೂ ತಿಪ್ಪನಹಳ್ಳಿ ಗ್ರಾಮಕ್ಕೆ ತೆರಳಿ ಕಾನೂನು ಅರಿವು ನೆರವು ಅಭಿಯಾನ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.