ADVERTISEMENT

ಬಡತನದಲ್ಲಿ ಬೆಂದ ಬೀಡಿ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 1 ಮೇ 2012, 9:35 IST
Last Updated 1 ಮೇ 2012, 9:35 IST

ಯಾದಗಿರಿ: ಬೆವರು ಸುರಿಸಿ, ದಿನವೀಡಿ ದುಡಿದರೂ, ಸಂಪಾದನೆ ಅಷ್ಟಕ್ಕಷ್ಟೇ. ಬದುಕಿನ ಬಂಡಿ ಸಾಗಿಸಲು ಪರದಾಡುವ ಸ್ಥಿತಿ. ಇನ್ನು ಮಕ್ಕಳ ಶಿಕ್ಷಣ, ಅವರಿಗೊಂದು ಸೂರು ಕನಸಿನ ಮಾತೇ ಸರಿ.

ಕಷ್ಟ-ಕಾರ್ಪಣ್ಯಗಳ ಮಧ್ಯೆ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಅಂತಹದರಲ್ಲಿ ನಗರದ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ಬೀಡಿ ಕಟ್ಟುವುದನ್ನೇ ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದಾರೆ. ತುತ್ತು ಅನ್ನಕ್ಕಾಗಿ ಹೊತ್ತು ಮುಳುಗುವವರೆಗೆ ಬೀಡಿ ಕಟ್ಟುತ್ತಾರೆ. ಇದೇ ಅವರ ಒಪ್ಪತ್ತಿನ ಊಟಕ್ಕಾಗುವಷ್ಟು ದುಡಿಮೆ. ನಿಜಕ್ಕೂ ಬೀಡಿ ಕಟ್ಟುವ ಕಾರ್ಮಿಕರ ಬದುಕು ಶೋಚನೀಯವಾಗಿದ್ದು, ಸಹಾಯದ ಕೂಗು ಮಾತ್ರ ಸರ್ಕಾರದ ಕಿವಿಗೆ ಬೀಳುತ್ತಿಲ್ಲ.

ಈ ಹಿಂದೆ ನಗರದಲ್ಲಿ ಸುಮಾರು 10 ಕ್ಕೂ ಹೆಚ್ಚು ಬೀಡಿ ಕಾರ್ಖಾನೆಗಳಿದ್ದವು. 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದನ್ನೇ ನಂಬಿ ಬದುಕು ಸಾಗಿಸುತ್ತಿದ್ದವು. ಗೋಲ್ಡನ್ ಬೀಡಿ, ಇಲಿಯಾಸ್, ಇಸ್ಪಿಕ್ ಎಕ್ಕಾ,   ನಂ ಒನ್ ಹೀಗೆ ಹಲವು ಕಂಪೆನಿಗಳು ಈಗ ಬಾಗಿಲು ಮುಚ್ಚಿವೆ. ತಂಬಾಕು ಮತ್ತು ಬೀಡಿ ಕಟ್ಟುವ ಎಲೆ ದುಬಾರಿಯಾದ ಹಿನ್ನೆಲೆಯಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಸದ್ಯಕ್ಕೆ ಒಂದೆರಡು ಮಾತ್ರ ಕೆಲಸ ಮಾಡುತ್ತಿದ್ದು, 300 ಕುಟುಂಬಗಳು ಬೀಡಿ ಕಟ್ಟುವ ಕೆಲಸದಲ್ಲಿ ತೊಡಗಿವೆ. ಉಳಿದ ಕುಂಟುಂಬಗಳ ಸದಸ್ಯರು ಬದುಕಿಗಾಗಿ ಬೇರೆ ದಾರಿ ಹುಡುಕಿಕೊಂಡಿದ್ದಾರೆ.

“ದಿನಾಲು 800 ರಿಂದ 1000 ಬೀಡಿ ಕಟ್ತಿವ್ರಿ. ತಂಬಾಕು, ದಾರ ಕಂಪನಿಯವ್ರ ಕೋಡ್ತಾರ. ಆದ್ರೆ ಎಲಿಗೆ ಮಾತ್ರ ದಿನಕ್ಕೆ 10 ರೂಪಾಯಿ ನಾವ ಕೋಡ್ತಿವಿ. ಇದರಿಂದ ದಿನಾಲು 40 ರಿಂದ 50 ರೂಪಾಯಿ ಸಿಗತದ್ರಿ. ಅದರಲ್ಲಿ ನಮ್ಮ ಬದುಕು ಸಾಗಿಸುತ್ತಿವ್ರಿ ಸಾಹೇಬ್ರ” ಎಂಬ ನೋವಿನ  ಮಾತುಗಳು ಎಂಥವರ ಮನವನ್ನು ಕಲಕುತ್ತವೆ.

ಈ ಕಾರ್ಮಿಕರದ್ದು ನಿತ್ಯದ ಕಥೆ ಇದು. ಬದುಕು ಬೆಸೆಯಲು ಬೀಡಿ ಕಟ್ಟಿ ಅದರಿಂದ ಬರುವ ಆದಾಯದಲ್ಲಿಯೇ ಜೀವನ ನಡೆಸುವ ಅನಿವಾರ್ಯತೆ ಇವರದ್ದು. ತಮ್ಮ ನೋವನ್ನು ಹಲವರ ಬಳಿ ಹಂಚಿಕೊಂಡರೂ, ಪ್ರಯೋಜನವಿಲ್ಲ. ತುತ್ತು ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ ಎಂದು ಬೀಡಿ ಕಾರ್ಮಿಕರು ಹೇಳುತ್ತಾರೆ.

ಇವರಿಗೆ ಸಿಗಬೇಕಾದ ಯಾವುದೇ ಸರ್ಕಾರದ ಸವಲತ್ತುಗಳು ಲಭ್ಯವಾಗಿಲ್ಲ. ಈಗಲಾದರೂ ಸರ್ಕಾರ ಇಂಥವರ ಕುಟುಂಬಗಳ ನಿರ್ವಹಣೆಗಾಗಿ ಯೋಜನೆಯೊಂದನ್ನು ರೂಪಿಸಿ ಸವಲತ್ತುಗಳನ್ನು ಒದಗಿಸಬೇಕು ಎಂಬುದು ಕಾರ್ಮಿಕರ ಬೇಡಿಕೆ.

ನಿರ್ಲಕ್ಷ್ಯ: ಬೀಡಿ ಕಾರ್ಮಿಕರ ಬಗ್ಗೆ ಕಾರ್ಮಿಕ ಕಲ್ಯಾಣ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಗರದಲ್ಲಿ 3000ಕ್ಕೂ ಹೆಚ್ಚು ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ ಎಂಬುದು ಇಲಾಖೆಯ ಅಂಕಿ ಸಂಖ್ಯೆಯ ಮಾಹಿತಿ. 

ಆದರೆ ಗುರುತಿನ ಚೀಟಿ ಸಿಕ್ಕಿದ್ದೇ ಬಂತು. ಸರ್ಕಾರದ ಸೌಲಭ್ಯಗಳು ಮಾತ್ರ ಇನ್ನೂ ಮರೀಚಿಕೆಯಾಗಿವೆ. ಇಲಾಖೆಯಿಂದ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ. ಈಗಲೂ ಅಷ್ಟೇ. ಚುನಾವಣೆಗಳು ಬಂದಾಗ ಮಾತ್ರ ಈ ಬೀಡಿ ಕಾರ್ಮಿಕರು ನೆನಪಾಗುತ್ತಾರೆ ಎಂದು ಕಾರ್ಮಿಕ ಮುಖಂಡರು ಹೇಳುತ್ತಾರೆ.

ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಈ ಕಾರ್ಮಿಕರನ್ನು ಸರ್ಕಾರಿ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ ಹುಸಿ ಭರವಸೆ ನೀಡಿದ್ದು ಬಿಟ್ಟರೆ, ಮತ್ತಾವ ಪ್ರಯೋಜನವೂ ಆಗಿಲ್ಲ ಎಂಬ ದೂರು ಬೀಡಿ ಕಾರ್ಮಿಕರದ್ದು.

ಶುರುವಾಗದ ಆಸ್ಪತ್ರೆ ಕಟ್ಟಡ ಕಾಮಗಾರಿ:
ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕಳೆದ ಎಂಟು ತಿಂಗಳ ಹಿಂದೆಯೇ ಬೀಡಿ ಕಾರ್ಮಿಕರ ಅತ್ಯಾಧುನಿಕ ಆಸ್ಪತ್ರೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಇದುವರೆಗೂ ಕಟ್ಟಡ ಬುನಾದಿಯೂ ಶುರುವಾಗಿಲ್ಲ.

ನಿತ್ಯವೂ ತಂಬಾಕಿನ ಘಾಟು ವಾಸನೆ ಸೇವಿಸುತ್ತಲೇ ಕೆಲಸ ಮಾಡುತ್ತಿರುವ ಬೀಡಿ ಕಾರ್ಮಿಕರಿಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತಿದ್ದು, ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣ ಇದುವರೆಗೂ ಆರಂಭವಾಗದೇ ಇರುವುದು ಆತಂಕವನ್ನು ಉಂಟು ಮಾಡಿದೆ.

 ಸದ್ಯಕ್ಕೆ ಇರುವ ಆಸ್ಪತ್ರೆಯನ್ನೇ ನೆಲಸಮ ಮಾಡಿ, ಹೊಸ ಆಸ್ಪತ್ರೆ ನಿರ್ಮಿಸುವುದಾಗಿ ಹೇಳಲಾಗಿತ್ತು. ಇನ್ನೂ ಹಳೆಯ ಕಟ್ಟಡವೂ ಹಾಗೆ ಇದ್ದು, ಕಟ್ಟಡ ಕಾಮಗಾರಿಯ ಹಿನ್ನೆಲೆಯಲ್ಲಿ ಈಗಿರುವ ಆಸ್ಪತ್ರೆಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಎಷ್ಟು ವರ್ಷ ಬೇಕಾಗುತ್ತದೆಯೋ ಎಂಬ ಪ್ರಶ್ನೆಯನ್ನು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ, ಬಿಜೆಪಿ ಮುಖಂಡ ದೇವರಾಜ ನಾಯಕ ಪ್ರಶ್ನಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.