ADVERTISEMENT

ಮಕ್ಕಳಿಗೆ ಶಿಕ್ಷಣ ಅವಶ್ಯ: ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:50 IST
Last Updated 15 ಅಕ್ಟೋಬರ್ 2012, 8:50 IST

ಕೆಂಭಾವಿ: ಪ್ರತಿಯೊಂದು ಮಗು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಅತ್ಯವಶ್ಯವಿದೆ. ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವ ಮೂಲಕ ಶಿಕ್ಷಣವಂತರನ್ನಾಗಿ ಮಾಡಿ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ಭಾನುವಾರ ಸಮೀಪದ ಮಾಲಗತ್ತಿ ಗ್ರಾಮದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ (ನಂಜುಂಡಪ್ಪ ವರದಿ 2009-10 ನಿಧಿಯಲ್ಲಿ) ಕರ್ನಾಟಕ ಭೂಸೇನಾ ನಿಗಮದ ವತಿಯಿಂದ ನಿರ್ಮಿಸಲಾದ ನೂತನ ಪ್ರೌಢಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ವಿದ್ಯಾರ್ಥಿ ಜೀವನ ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಉತ್ತಮ ಕೆಲಸ ನಿರ್ವಹಿಸುವ ಮೂಲಕ ಉತ್ತಮ ಸಮಾಜ ಕಟ್ಟುವ ಕೆಲಸ ಮಾಡಬೇಕು. ಈಗಾಗಲೇ ಈ ಶಾಲೆಗೆ ರೂ. 1.5 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ, ಕುಡಿಯುವ ನೀರು ಒದಗಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಕಂಪೌಂಡ್ ಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದರು.

ಸುರಪುರ-ಹುನಗಂದ ರಾಜ್ಯ ಹೆದ್ದಾರಿಯಲ್ಲಿರುವ ಈ ಕಟ್ಟಡ ನೋಡಲು ಸುಂದರವಾಗಿದ್ದು, ಇದಕ್ಕೆ ಬೇಕಾಗುವ ಎಲ್ಲ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದ ಅವರು, ಈ ಶಾಲೆಯ ಕಟ್ಟಡಕ್ಕೆ ಭೂ ದಾನ ಮಾಡಿದ ಬಸವರಾಜ ಮಾಲಗತ್ತಿ ಮತ್ತು ಅವರ ಕುಟುಂಬ ವರ್ಗದವರನ್ನು ಅಭಿನಂದಿಸಿದರು.

ಭೂದಾನಿಗಳಾದ ಡಿಎಸ್ಪಿ ಬಿ.ಎಸ್. ಮಾಲಗತ್ತಿ ಮಾತನಾಡಿ, ಸಮಾಜದಲ್ಲಿ ಮೌಢ್ಯತೆಯನ್ನು ತಿದ್ದಬೇಕಾದರೆ ಶಿಕ್ಷಣ ಅಗತ್ಯ. ಶಿಕ್ಷಕರು ಜವಾಬ್ದಾರಿಯನ್ನು ಅರಿತು ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಮುಖ್ಯಾಧ್ಯಾಪಕ ಬಸವರಾಜ ಮಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭೀಮರಾಯಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಗಿರಿಜಾಬಾಯಿ ಮಾಲಿಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ, ಎಪಿಎಂಸಿ ಸದಸ್ಯ ಮಲ್ಲಣ್ಣ ಹೆಗ್ಗೇರಿ, ಎಸ್‌ಡಿಎಂಸಿ ಅಧ್ಯಕ್ಷ ಸಣ್ಣಕೆಪ್ಪ ಸಾಹುಕಾರ, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗನಗೌಡ ಮಾಲಿಪಾಟೀಲ, ಬಸಣ್ಣ ಬುದೂರ, ಮಲ್ಲಣ್ಣ ಮೇಟಿ, ಶಿವಮಹಾಂತ ಚಂದಾಪುರ, ವಾಮನರಾವ ದೇಶಪಾಂಡೆ, ಕೃಷ್ಣಯ್ಯ ಗುತ್ತೆದಾರ, ಗಿರೆಪ್ಪ ಮ್ಯೋಗೇರಿ, ಗದ್ದೆಪ್ಪ ನಾಯಕೋಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಖಾಜಾಪಟೇಲ ಕಾಚೂರ, ದೊಡ್ಡನಿಂಗಣ್ಣ, ಶಂಕ್ರೆಪ್ಪ ಶಾಣ್ಯಾನೋರ್, ಕ್ಷೇತ್ರ ಶೀಕ್ಷಣಾಧಿಕಾರಿ ಕೆಂಪರಂಗಯ್ಯ, ಭೂಸೇನಾ ನಿಗಮದ ಸಹ ನಿರ್ದೇಶಕ ಎಲ್.ಜೆ. ಪಾಟೀಲ, ಸಹಾಯಕ ಎಂಜಿನಿಯರ್ ಸೂರ್ಯಪ್ರಕಾಶ ಭಾಗವಹಿಸಿದ್ದರು.

ಶರಣಗೌಡ ಪಾಟೀಲ ನಿರೂಪಿಸಿದರು. ಶಿವಾನಂದ ಮಾಳಗಿ ಸ್ವಾಗತಿಸಿದರು. ಪಿಡ್ಡಪ್ಪ ಚನ್ನೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.