ಕೆಂಭಾವಿ: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತುಗಳು ಗೋಡೆಗಳ ಮೇಲೆ ಕಾಣುತ್ತವೆ. ಮಹಿಳೆಯರು ಸಾಕ್ಷರರಾದರೆ, ಎಂತಹ ಸಾಧನೆಯನ್ನಾದರೂ ಮಾಡಬಹುದು. ಇದಕ್ಕೊಂದು ಉದಾಹರಣೆ ಎನ್ನುವಂತಿದ್ದಾರೆ ಯಾದಗಿರಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿ.
ಜಿಲ್ಲೆಯ ಸಂಪೂರ್ಣ ಆಡಳಿತ ಮಹಿಳೆಯರ ಕೈಯಲ್ಲಿದ್ದಾಗಲೇ ಯಾದಗಿರಿ ಜಿಲ್ಲೆಯ ಆಯುಷ್ ಅಧಿಕಾರಿಯಾಗಿ ಬಂದ ಡಾ. ವಂದನಾ ಗಾಳಿ, ಪರಿಚಯವೇ ಇಲ್ಲದಂತಿದ್ದ ಆಯುಷ್ ಇಲಾಖೆಯನ್ನು ಮನೆ ಮಾತಾಗಿಸಿದ್ದಾರೆ. ಆಯುಷ್ ಅರಿವು, ಮನೆ ಮದ್ದು, ಆಯುಷ್ ಆರೋಗ್ಯ ಶಿಬಿರಗಳು, ಶಾಲಾ ಮಕ್ಕಳ ಆರೋಗ್ಯಕ್ಕಾಗಿ ಶಾಲಾ ಶಿಕ್ಷಕರಿಗೆ ಯೋಗ, ಆರೋಗ್ಯ ಪ್ರಶಿಕ್ಷಣ ಕಾರ್ಯಾಗಾರ, ಶಾಲಾ ಆರೋಗ್ಯ ಕಾರ್ಯಕ್ರಮ, ಆಯುಷ್ ಆರೋಗ್ಯ ಮೇಳ, ಜಿಲ್ಲಾ ಮಟ್ಟದ ಆಯುಷ್ ಕಾರ್ಯಾಗಾರ, ತಾಲ್ಲೂಕು ಮಟ್ಟದ ಆಯುಷ್ ವಿಚಾರ ಸಂಕಿರಣ, ಸೇರಿದಂತೆ ನಿತ್ಯ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಆಯುಷ್ ಇಲಾಖೆಯನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ಕೊಂಡೊಯ್ದ ಕೀರ್ತಿ ಅವರದ್ದು.
2010–-11ರಲ್ಲಿ ಆಗ ತಾನೇ ನೂತನ ಜಿಲ್ಲೆಯಾಗಿ ರೂಪಗೊಂಡಿದ್ದ ಯಾದಗಿರಿ ಜಿಲ್ಲೆಯಲ್ಲಿ ಇಲಾಖೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕೆ ಆದ್ಯತೆ ನೀಡಿದ ಅವರು, ಶಾಲೆಗಳಲ್ಲಿ , ಅಂಗನವಾಡಿ ಸಹಾಯಕಿಯರಿಗೆ, ಗ್ರಾಮ ಪಂಚಾಯಿತಿ ಸದಸ್ಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಜನಸಮಾನ್ಯರಿಗೆ ಇಲಾಖೆ ವತಿಯಿಂದ ದೊರೆಯಬಹುದಾದ ಆರೋಗ್ಯ ಸಂಬಂಧಿ ಚಿಕಿತ್ಸೆಗಳ ಬಗ್ಗೆ 266 ಆಯುಷ್ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
2011–-12ರಲ್ಲಿ 120, 2012–-13 ರಲ್ಲಿ -558 ಆಯುಷ್ ಅರಿವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ, ದೊರೆಯಬಹುದಾದ ಚಿಕಿತ್ಸೆಗಳ ಬಗ್ಗೆ ತಿಳಿವಳಿಕೆ ಮೂಡಿಸಿದರು. ಜೊತೆಗೆ 2012–-13ರಲ್ಲಿ ಜಿಲ್ಲೆಯಲ್ಲಿ ಹೆಮ್ಮಾರಿಯಾಗಿ ಕಾಡಿದ ಡೆಂಗೆ ಜ್ವರದ ಬಗ್ಗೆ ಅರಿವು ಮೂಡಿಸುವ ಹಾಗೂ ಡೆಂಗೆ ಜ್ವರ ಬಾರದಂತೆ ತಡೆಗಟ್ಟುವ ಮುಂಜಾಗ್ರತ ಕ್ರಮಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡರು.
3ವರ್ಷಗಳಲ್ಲಿ 115 ಮನೆ ಮದ್ದು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮನೆಗಳಲ್ಲಿಯೇ ಇರುವ ಔಷಧಿಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಿದರು. 21 ಆಯುಷ್ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿದ್ದಾರೆ.
ಇವರ ಸೇವೆಯನ್ನು ಪರಿಗಣಿಸಿದ ಜಿಲ್ಲಾಡಳಿತವು ಈ ವರ್ಷ ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ. ವಂದನಾ ಗಾಳಿ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿದೆ.
ಬೆಳಕಿಗೆ ಬಂದ ಆಯುಷ್ ಇಲಾಖೆ:
ಡಾ. ವಂದನಾ ಗಾಳಿ ಅವರು ಯಾದಗಿರಿ ಜಿಲ್ಲಾ ಆಯುಷ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಿರಂತರ ಕಾರ್ಯಕ್ರಮಗಳ ಮೂಲಕ ಇಲಾಖೆಯನ್ನು ಮನೆ ಮಾತಾಗಿಸಿದ್ದಾರೆ.
ಅಲ್ಲದೇ ಇಲಾಖೆಗೆ ಬೇಕಾದ ಸಿಬ್ಬಂದಿ, ಕಟ್ಟಡ, ಆಯುಷ್ ಚಿಕಿತ್ಸಾಲಯದಂತಹ ಸೌಲಭ್ಯಗಳನ್ನು ಒದಗಿಸುವ ಮೂಲಕ ಜಿಲ್ಲೆಯಲ್ಲಿ ಇಲಾಖೆಗೆ ಒಂದು ಹೊಸ ದಿಕ್ಕು ತೋರಿಸಿದ್ದಾರೆ. ಇದೀಗ ಜಿಲ್ಲಾ ಕೇಂದ್ರದಲ್ಲಿ ಆಯುಷ್ ಚಿಕಿತ್ಸಾಲಯದ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಪೂರ್ಣಗೊಂಡ ನಂತರ ಜಿಲ್ಲೆಯ ಜನರಿಗೆ ಪಂಚಕರ್ಮ ಸೇರಿದಂತೆ ಆಯುರ್ವೇದ ಚಿಕಿತ್ಸೆ ದೊರೆಯಲಿದೆ.
ಬಿಎಎಂಎಸ್ ಪದವಿ ಪಡೆದಿರುವ ಡಾ. ವಂದನಾ ಗಾಳಿ, ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಆಯುರ್ವೇದ ಚಿಕಿತ್ಸಾಲಯದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಆರಂಭಿಸಿದರು.
2005 ರಲ್ಲಿ ಬಡ್ತಿ ಪಡೆದ ಅವರು, 2007 ರಲ್ಲಿ ಜಿಲ್ಲಾ ಆಯುಷ್ ಅಧಿಕಾರಿಯಾಗಿ ಹಾವೇರಿಯಲ್ಲಿ ಕಾರ್ಯ ನಿರ್ವಹಿಸಿದರು. 2010 ರಲ್ಲಿ ಯಾದಗಿರಿ ಜಿಲ್ಲಾ ಆಯುಷ್ ಅಧಿಕಾರಿ ಅಧಿಕಾರ ವಹಿಸಿಕೊಂಡಿದ್ದಾರೆ.
‘ಸಹೋದ್ಯೋಗಿಗಳು, ಜನರ ಸಹಕಾರದಿಂದ ಸಾಧ್ಯ’
‘ಆಯುಷ್ ಇಲಾಖೆಯಲ್ಲಿ ಏನಾದರೂ ಪ್ರಗತಿ ಆಗಿದ್ದರೆ ಅದಕ್ಕೆ ಇಲಾಖೆಯ ಪ್ರತಿಯೊಬ್ಬ ವೈದ್ಯಾಧಿಕಾರಿಗಳು ಹಾಗೂ ಜನರ ಸಹಕಾರವೇ ಕಾರಣ. ಇಲಾಖೆಯ ವತಿಯಿಂದ ಇರುವ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿರುವ ತೃಪ್ತಿ ನನಗಿದೆ’ ಎನ್ನುತ್ತಾರೆ ಡಾ. ವಂದನಾ ಗಾಳಿ.
‘ಸಾರ್ವಜನಿಕರಲ್ಲಿ ಆಯುಷ್ ಅರಿವು ಹೆಚ್ಚಿಸಿದಂತಾಗಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅನುಕೂಲವಾಗಿದೆ. ಆಯುಷ್ ಇಲಾಖೆಯಿಂದ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕುವಂತಾಗಿದೆ. ಅಲ್ಲದೇ ಸ್ಥಳೀಯ ಔಷಧಿ ಸಸ್ಯಗಳು, ಮನೆಮದ್ದು ಬಳಕೆಯಿಂದ ಉತ್ತಮ ಆರೋಗ್ಯಕ್ಕಾಗಿ ಸಾರ್ವಜನಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗಿದೆ. ಇಲಾಖೆಯ ವೈದ್ಯರ ಶ್ರಮ ಹಾಗೂ ಜನರು ನೀಡಿದ ಸಹಕಾರದಿಂದ ಇಂತಹ ಕಾರ್ಯ ಮಾಡಲು ಸಾಧ್ಯವಾಗಿದೆ’ ಎಂದು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.