ಯಾದಗಿರಿ: ಗಡಿ ಭಾಗದಲ್ಲಿರುವ ತಾಲ್ಲೂಕಿನ ನಂದೇಪಲ್ಲಿ, ಚೆಲ್ಹೇರಿ ಹಳ್ಳಗಳಿಂದ ಮರಳು ಸಂಗ್ರಹಣೆಗೆ ನೀಡಲಾಗಿರುವ ಗುತ್ತಿಗೆಯನ್ನು ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿ ಸುತ್ತಲಿನ ಗ್ರಾಮಗಳ ರೈತರು ಗುರುವಾರ ನಗರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಂದೇಪಲ್ಲಿ ಹಳ್ಳವು ಚೆಲ್ಹೇರಿ ಗ್ರಾಮದವರೆಗೆ ಸುಮಾರು 20 ಕಿ.ಮೀ. ವ್ಯಾಪ್ತಿ ಹೊಂದಿದೆ. ಇದರಲ್ಲಿ ಸಾಕಷ್ಟು ಮರಳಿದ್ದ, ಮರಳಿನ ಅಡಿಯಲ್ಲಿ ನೀರು ಸಂಗ್ರಹವಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚುತ್ತಿವೆ ಎಂದು ತಿಳಿಸಿದರು.
ಇದರಿಂದ ಸುಮಾರು ಮೂರ‌್ನಾಲ್ಕು ಸಾವಿರ ಕೊಳವೆ ಬಾವಿಗಳು ಹಾಗೂ ಕುಡಿಯುವ ನೀರು ಸರಬರಾಜಿನ ಆರೇಳು ಬಾವಿಗಳ ಅಂತರ್ಜಲ ಮಟ್ಟದ ಉತ್ತಮವಾಗಿದೆ. ಅಲ್ಲದೇ ಹಳ್ಳದ ಸುತ್ತಲೂ ರೈತರ ಜಮೀನುಗಳಿವೆ.
ಈ ಎಲ್ಲ ಜಲಮೂಲಗಳಿಂದ ರೈತರು ನೀರಾವರಿ ಸೌಲಭ್ಯ ಪಡೆದಿದ್ದು, ಜನರಿಗೆ ಕುಡಿಯುವ ನೀರು ಸಿಗುತ್ತಿದೆ. ಆದರೆ ಇದೀಗ ಆರಂಭವಾಗಿರುವ ಮರಳು ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿಯುವ ಅಪಾರ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಕೆಲವು ವರ್ಷಗಳಿಂದ ಕೆಲ ಖಾಸಗಿ ಗುತ್ತಿಗೆದಾರರು ಅಕ್ರಮವಾಗಿ ಮರಳು ಸಾಗಿಸುತ್ತಿದ್ದು, ರೈತರ ಪ್ರತಿಭಟನೆಯಿಂದ ಮರಳು ಸಾಗಾಣಿಕೆ ಸ್ಥಗಿತವಾಗಿತ್ತು. ಆದರೆ ಇತ್ತೀಚೆಗೆ ಸರ್ಕಾರವೇ ಮರಳು ಸಂಗ್ರಹಿಸಿ, ಸಾಗಾಣಿಕೆ ಮಾಡಲು ಅನುಮತಿ ನೀಡಿರುವುದು ಗಮನಕ್ಕೆ ಬಂದಿದೆ. ಈ ಗುತ್ತಿಗೆದಾರರು ಸರ್ಕಾರಕ್ಕೆ ಶೇ. 25 ರಷ್ಟು ಮಾತ್ರ ಸಂಗ್ರಹಣೆ ಮಾಡಿಕೊಡುತ್ತಿದ್ದು, ಉಳಿದ ಮರಳನ್ನು ಅಕ್ರಮವಾಗಿ ಆಂಧ್ರಪ್ರದೇಶಕ್ಕೆ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಮರಳು ಸಾಗಾಣಿಕೆ ಮಾಡುವುದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿತವಾಗುವ ಸಾಧ್ಯತೆಗಳಿದ್ದು, ಇದರಿಂದ ರೈತರು, ಜನರು ತೀವ್ರ ಸಂಕಷ್ಟ ಎದುರಿಸುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಮರಳು ಸಂಗ್ರಹಣೆಗೆ ನೀಡಲಾಗಿರುವ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಒತ್ತಾಸಿದರು.
ಎಪಿಎಂಸಿ ಸದಸ್ಯ ಮಲ್ಲಣ್ಣ ಜೈಗ್ರಾಂ, ಸಾಯಿಬಣ್ಣ ಬಸವಂತಪೂರ, ಟಿ.ಎನ್.ಭೀಮುನಾಯಕ, ಎಂ.ವಿ. ಪಾಟೀಲ, ಹನುಮೇಶ ಈಡ್ಲೂರ, ಆಶಪ್ಪ, ಬಮ್ಮರಡ್ಡಿ, ನಾಗಪ್ಪ, ತಿಮ್ಮರೆಡ್ಡಿ, ಸಿದ್ಧಪ್ಪ ಗುಂಜನೂರ, ಖಾಜಪ್ಪ, ಬಾಜು ದುಬೈ, ಸಿಂಗಾರ ನರಸಪ್ಪ, ಶಿವರಾಜ, ಸೇರಿದಂತೆ ಕರಣಿಗಿ, ಜೈಗ್ರಾಂ, ಈಡ್ಲೂರ, ಚೆಲ್ಹೇರಿ ಗ್ರಾಮಗಳು ಇನ್ನೂರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.