ADVERTISEMENT

ಮಲ್ಲಾ-ಕೆಂಭಾವಿ ರಸ್ತೆ ಕೆಸರು ಗದ್ದೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 6:55 IST
Last Updated 9 ಜೂನ್ 2011, 6:55 IST

ಕೆಂಭಾವಿ: ಮಳೆಯಿಂದಾಗಿ ಮಲ್ಲಾ- ಕೆಂಭಾವಿ ರಸ್ತೆಯು ಕೆಸರು ಗದ್ದೆಯಂತಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಮಲ್ಲಾ-ಕೆಂಭಾವಿ ರಸ್ತೆಯು ಕೃಷ್ಣಾ ಭಾಗ್ಯ ಜಲ ನಿಗಮದ ಅಚ್ಚುಕಟ್ಟು ರಸ್ತೆಯಾಗಿದ್ದು, 11 ಕಿ.ಮೀ. ರಸ್ತೆಯಲ್ಲಿ ಕೇವಲ 5 ಕಿ.ಮೀ. ರಸ್ತೆಯನ್ನು ಡಾಂಬರಿಕರಣ ಮಾಡಿ ಉಳಿದ 6 ಕಿ.ಮೀ ರಸ್ತೆಯನ್ನು ಹಾಗೇ ಬಿಟ್ಟಿರುವುದರಿಂದ ರಸ್ತೆಯು ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ವಾಹನಗಳು ಸಂಚರಿಸಲು ತೀವ್ರ ತೊಂದರೆ ಆಗುತ್ತಿದೆ.

ಸದ್ಯಕ್ಕೆ ಮಳೆಗಾಲ ಇದ್ದುದರಿಂದ ರಸ್ತೆ ಮತ್ತಷ್ಠು ಹದಗೆಟ್ಟಿದೆ. ದಾರಿಯುದ್ದಕ್ಕೂ ತೆಗ್ಗು ದಿನ್ನೆಗಳಿದ್ದು, ಅವುಗಳಲ್ಲಿ ನೀರು ತುಂಬಿಕೊಂಡು ಎಲ್ಲಿ ಎಷ್ಟು ತೆಗ್ಗು ಇದೆ ಎಂಬುದು ತಿಳಿಯದಂತಾಗಿದೆ. ಇಂತಹ ರಸ್ತೆಯಲ್ಲಿ ಕಾಲಿಟ್ಟರೆ ಸಾಕು, ಆಸ್ಪತ್ರೆಗೆ ದಾಖಲಾಗುವುದು ಖಚಿತ.  

ರಸ್ತೆ ಕಾಮಗಾರಿಗಾಗಿ ಮಲ್ಲಾದಿಂದ ನಾರಾಯಣಪುರದವರೆಗೆ 72 ಕಿ.ಮೀ. ರಸ್ತೆಯನ್ನು ಎರಡು ವರ್ಷಗಳ ಹಿಂದೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿತ್ತು, ಆದರೆ ಗುತ್ತಿಗೆ ಪಡೆದವರು ಮಾತ್ರ ಈ ರಸ್ತೆಯನ್ನು ಕೆಂಭಾವಿಯಿಂದ 5 ಕಿ.ಮೀ ನಿರ್ಮಿಸಿ ನಮ್ಮ ಕ್ವಾಂಟಿಟಿ ಮುಗಿಯಿತು ಎಂದು ಕೈತೊಳೆದುಕೊಂಡಿದ್ದಾರೆ.

ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಸೇರಿದ ಈ ರಸ್ತೆ ಸುಮಾರು 20 ವರ್ಷಗಳಿಂದ ಇದೇ ಸ್ಥಿತಿಯ್ಲ್ಲಲಿದೆ. ಇಲ್ಲಿಯ ಜನರು ಈ ರಸ್ತೆ ನಿರ್ಮಾಣಕ್ಕಾಗಿ ಮಾಡಿದ ಪ್ರತಿಭಟನೆಗಳಿಲ್ಲ, ಎಲ್ಲ ರೀತಿಯ ಹೋರಾಟ ಮುಗಿದಿವೆ.

ಕ್ಷೇತ್ರದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಈ ಇದಕ್ಕೆ ಕಾರಣ ಎಂದು ದೂರುವಂತಾಗಿದೆ.
ಸುರಪುರ ಕ್ಷೇತ್ರದ ಶಾಸಕರು, ಆಡಳಿತ ಪಕ್ಷದಲ್ಲಿರುವುದರಿಂದ ತಮ್ಮ ಮತಕ್ಷೇತ್ರದಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿಕೊಂಡು, ಶಹಾಪುರ ಮತಕ್ಷೇತ್ರಕ್ಕೆ ಬರುವ ಕೆಂಭಾವಿಯನ್ನು ಕಡೆಗಣಿಸಿದ್ದಾರೆ ಎಂದು ಜನರು ಹೇಳುವಂತಾಗಿದೆ.

ಈ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಶರಣಬಸಪ್ಪ ದರ್ಶನಾಪುರ, ಕೇವಲ ಆಶ್ವಾಸನೆ ನೀಡುತ್ತಿರುವುದು ಇಲ್ಲಿನ ಜನತೆಯಲ್ಲಿ ನಿರಾಶೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿ ನೀಡಬೇಕು. ಈ ಬಗ್ಗೆ ಗಮನ ಹರಿಸಿ ಶೀಘ್ರದಲ್ಲಿ ರಸ್ತೆ ಡಾಂಬರೀಕರಣ ಮಾಡಬೇಕು.

ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ತಡವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕದ ಅಧ್ಯಕ್ಷ ಶರಣು ಗದ್ದುಗೆ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.