ADVERTISEMENT

ಮೋದಿ ಹಿಡಿತದಲ್ಲಿ ಚುನಾವಣಾ ಆಯೋಗ: ಖರ್ಗೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 10:30 IST
Last Updated 23 ಅಕ್ಟೋಬರ್ 2017, 10:30 IST

ಯಾದಗಿರಿ: ‘ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅರೋಪಿಸಿದರು.

‘ಚುನಾವಣಾ ಆಯೋಗವು ಹಿಮಾಚಲ ಪ್ರದೇಶದ ಚುನಾವಣೆ ಘೋಷಿಸಿದ್ದರೂ, ಗುಜರಾತ್‌ ರಾಜ್ಯದ ಚುನಾವಣೆ ದಿನಾಂಕ ಪ್ರಕಟಿಸಿಲ್ಲ. ದೇಶದಲ್ಲಿನ ರಾಜ್ಯಗಳಲ್ಲಿ ಚುನಾವಣಾ ದಿನಾಂಕ ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ.

ಆದರೆ, ಪ್ರಧಾನಿ ಸಚಿವಾಲಯವೇ ರಾಜ್ಯಗಳ ಚುನಾವಣಾ ದಿನಾಂಕ ನಿಗದಿ ಮಾಡುತ್ತಿರುವ ಬಗ್ಗೆ ನನಗೆ ಸಂಶಯ ಬಂದಿದೆ. ಚುನಾವಣಾ ಆಯೋಗದ ನಿರ್ಧಾರಗಳಲ್ಲಿ ಪ್ರಧಾನಿ ಮಧ್ಯ ಪ್ರವೇಶ ದೇಶದ ಭವಿಷ್ಯಕ್ಕೆ ಒಳಿತಲ್ಲ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಸಂಸದೀಯ ವ್ಯವಸ್ಥೆಯನ್ನು ಮೋದಿ ಹಾಳುಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಹಿಟ್ಲರ್‌ನಂತೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಅದರ ಪರಿಣಾಮವಾಗಿ ಇಂದು ಜಿಎಸ್‌ಟಿ, ನೋಟು ರದ್ದತಿ ಯೋಜನೆಗಳನ್ನು ದೇಶದ ಜನರ ಮೇಲೆ ಹೇರಿದ್ದಾರೆ. ಅವುಗಳಿಂದ ದುಷ್ಪರಿಣಾಮ ಉಂಟಾಗಿರುವ ಕಾರಣ ‘ಇದು ಎಲ್ಲರ ತೀರ್ಮಾನ’ ಎಂದು ಹೇಳಿಕೆ ನೀಡುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

‘ಕುಶಲಕರ್ಮಿಗಳ, ಗುಡಿಕೈಗಾರಿಕೆಗಳ ಮೇಲೆ ಅಧಿಕ ತೆರಿಗೆ ವಿಧಿಸಿರುವ ಕಾರಣ ಗುಜರಾತಿನಲ್ಲಿರುವ ಬಹುತೇಕ ಬಡ ಕಾರ್ಮಿಕರು ಮೋದಿ ಮೇಲೆ ಸಿಟ್ಟಾಗಿದ್ದಾರೆ. ಅವರನ್ನು ಸಮಾಧಾನ ಪಡಿಸಲು ಜಿಎಸ್‌ಟಿ ಪ್ರಮಾಣ ಕಡಿತ ಮಾಡಿದ್ದಾರೆ’ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಗಾದಿಗೆ ರಾಹುಲ್‌ ಶೀಘ್ರ: ‘ಇಂದಿರಾ ಗಾಂಧಿ ಅವರ ಜನ್ಮಶತಾಬ್ದಿಯಂದು ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಹುದ್ದೆ ಅಲಂಕರಿಸಲಿದ್ದಾರೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

‘ರಾಹುಲ್‌ ಎಐಸಿಸಿಯ ನೇತಾರ ಎಂದೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ಮುಖಂಡರು ಅವರನ್ನು ಟೀಕಿಸುತ್ತಾ ಬಂದಿದ್ದಾರೆ. ಅವರಿಗೆ ಪಟ್ಟ ಮಾತ್ರ ಕಟ್ಟಿಲ್ಲ ಅಷ್ಟೇ. ಆದರೆ, ಕಾಂಗ್ರೆಸ್‌ ಪಕ್ಷವು ಮುಂದಿನ ಎಲ್ಲಾ ಚುನಾವಣೆಗಳನ್ನು ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲೇ ಎದುರಿಸಲಿದೆ’  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.