ADVERTISEMENT

ಯಾದಗಿರಿಯಲ್ಲಿ ವಿಮಾ ರಾಷ್ಟ್ರೀಕರಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:25 IST
Last Updated 20 ಜನವರಿ 2011, 9:25 IST

ಯಾದಗಿರಿ: ಅಖಿಲ ಭಾರತ ವಿಮಾ ನೌಕರರ ಸಂಘದ ವತಿಯಿಂದ 55 ನೇ ವಿಮಾ ರಾಷ್ಟ್ರೀಕರಣ ದಿನವನ್ನು ಇಲ್ಲಿಯ ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ವಿಮಾ ರಂಗವನ್ನು ಬಲಪಡಿಸುವ ದಿನವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಯಾದಗಿರಿ ಶಾಖೆಯ ಕಾರ್ಯದರ್ಶಿ ಎಂ.ಬಿ. ದೊಡ್ಡಮನಿ, 1956 ರಲ್ಲಿ ವಿಮೆ ಉದ್ದಿಮೆಯನ್ನು ರಾಷ್ಟ್ರೀಕರಣ ಮಾಡಲು ಅಂದಿನ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಸುಗ್ರೀವಾಜ್ಞೆಯಂತೆ ಸುಮಾರು 245 ಕ್ಕೂ ಹೆಚ್ಚು ಖಾಸಗಿ ವಿಮಾ ಕಂಪೆನಿಗಳನ್ನು ಒಟ್ಟುಗೂಡಿಸಿ ಭಾರತೀಯ ಜೀವ ವಿಮಾ ನಿಗಮವನ್ನು ಆರಂಭಿಸಲಾಯಿತು. ಅಂದಿನ ಹಣಕಾಸು ಸಚಿವ ಸಿ.ಡಿ. ದೇಶಮುಖ ಈ ತೀರ್ಮಾನ ತೆಗೆದುಕೊಂಡರು ಎಂದರು.

ಕೇವಲ ರೂ.5 ಕೋಟಿಯಿಂದ ಆರಂಭವಾದ ಎಲ್‌ಐಸಿ, ಇತ್ತೀಚಿನ ವರ್ಷದಲ್ಲಿ ರೂ.1031 ಕೋಟಿ ಲಾಭಾಂಶ ಪಡೆದಿದೆ. ನಿಗಮದಿಂದ ಸರ್ಕಾರಕ್ಕೆ ಇದುವರೆಗೆ ರೂ.8957.40 ಕೋಟಿ ಲಾಭಾಂಶ ಸಂದಾಯ ಮಾಡಲಾಗಿದೆ. 2009-10 ರಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ರೂ. 6,49,808 ಕೋಟಿಯನ್ನು ನಿಗಮವು ತೊಡಗಿಸಿಕೊಂಡಿದೆ ಎಂದು ಹೇಳಿದರು. ಶಾಖಾಧಿಕಾರಿ ಎಸ್.ಎ. ಕುಲಕರ್ಣಿ, ಜೆ.ಎಂ. ಚನ್ನಬಸಯ್ಯ, ಅಧ್ಯಕ್ಷತೆ ವಹಿಸಿದ್ದ ಜಿ.ಎಂ. ಬಡಿಗೇರ ಮಾತನಾಡಿದರು. ಸಿಬ್ಬಂದಿಗಳು, ಪಾಲಿಸಿದಾರರು, ಅಧಿಕಾರಿಗಳು, ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.