ADVERTISEMENT

ವಸತಿ ಶಾಲೆ ಶಿಕ್ಷಕರಿಗೆ ಕರವೇ ಬೆಂಬಲ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 8:10 IST
Last Updated 9 ಫೆಬ್ರುವರಿ 2012, 8:10 IST

ಯಾದಗಿರಿ: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಹೊರಮೂಲ ಪ್ರಾಂಶುಪಾಲರು ಹಾಗೂ ಶಿಕ್ಷರ ಸಂಘದ ಜಿಲ್ಲಾ ಘಟಕದ ವತಿಯಿಂದ ಬೆಂಗಳೂರಿನಲ್ಲಿ ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡರಿಗೆ ಮನವಿ ಸಲ್ಲಿಸಲಾಯಿತು.

ಸುಮಾರು ವರ್ಷಗಳಿಂದ ಕಡಿಮೆ ಸಂಬಳ ನೀಡಲಾಗಿದೆ. ಅಲ್ಲದೇ ನಿಗದಿತ ಸಮಯಕ್ಕೆ ಸಂಬಳ ಪಾವತಿ ಮಾಡದಿದ್ದರೂ, ಸೇವಾ ಮನೋಭಾವದಿಂದ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದು, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ. 84 ರಷ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮಕ್ಕಳು ತೇರ್ಗಡೆ ಆಗಿದ್ದಾರೆ. ಬಹುತೇಕ ಶಾಲೆಗಳು ಶೇ. 100 ರಷ್ಟು ಫಲಿತಾಂಶ ಪಡೆದಿವೆ. ಇಂತಹ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಾಯಂಗೊಳಿಸುವ ವಿಷಯದಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.

ಕಾಯಂ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಕುಟುಂಬಗಳು ಬೀದಿಗೆ ಬರುವಂತೆ ಮಾಡಲಾಗಿದೆ. ನಮ್ಮ ಸೇವೆ ಕಾಯಂಗೊಳಿಸದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರವಾದ ಹೋರಾಟ ನಡೆಸಲು ತೀರ್ಮಾನಿಸಿದ್ದು, ಕರ್ನಾಟಕ ರಕ್ಷಣಾ ವೇದಿಕೆಯು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನಾರಾಯಣಗೌಡ, ಕರವೇಯ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಕರವೇ ರಾಜ್ಯ ಸಂಚಾಲಕ ಬಸವರಾಜ ಪಡಕೋಟೆ, ವಸತಿ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಡಾ. ಗಾಳೆಪ್ಪ ಪೂಜಾರಿ, ಸಂಗನಗೌಡ ಧನರಡ್ಡಿ ರಾಜನಕೋಳೂರ, ಗೋಪಾಲ ಗಿರೆಪ್ಪನವರ, ದೇವಿಂದ್ರ ಕರಡಕಲ್ಲ, ಗೌಸ್ ಪಟೇಲ್ ಮುದನೂರ, ರಾಘವೇಂದ್ರ ದಳಪತಿ, ಅಶ್ಫಾಕ್ ಕೊಡೆಕಲ್ಲ, ಹಣಮಂತ ಜಿನಕೇರಿ, ಶ್ರೀಕಾಂತ ರಾಠೋಡ, ಶರಣಯ್ಯ ಹಿರೇಮಠ, ಶಾಂತಪ್ಪ ಕೊಂಕಲ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.